

| ಹರ್ಷವರ್ಧನ್ ಬ್ಯಾಡನೂರು ಬೆಂಗಳೂರು
‘ರೈಡರ್’ ಚಿತ್ರದ ಬಳಿಕ ನಿಖಿಲ್ ಕುಮಾರಸ್ವಾಮಿ ಮತ್ತೆ ತೆರೆಯ ಮೇಲೆ ಕಾಣಿಸಿಕೊಂಡಿರಲಿಲ್ಲ. ಕಳೆದ ವರ್ಷದ ಹುಟ್ಟುಹಬ್ಬದ ಸಮಯದಲ್ಲಿ ‘ಯದುವೀರ’ ಅನೌನ್ಸ್ ಆಗಿತ್ತಾದರೂ, ಅದು ಕಾರಣಾಂತರಗಳಿಂದ ಸ್ಥಗಿತಗೊಂಡಿದೆ. ಇದೀಗ ಭಾನುವಾರ ನಿಖಿಲ್ 35ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ಹೊಸ ಸಿನಿಮಾ ಘೋಷಣೆಯಾಗಿದೆ. ಜಿ. ಮನೋಹರನ್ ಹಾಗೂ ಕೆ.ಪಿ. ಶ್ರೀಕಾಂತ್ ಜಂಟಿಯಾಗಿ ಈ ಸಿನಿಮಾ ನಿರ್ವಿುಸಲಿದ್ದು, ಮನೋ ಹರ ನಿರ್ದೇಶನದಲ್ಲಿ ಮೂಡಿಬರಲಿದೆ. ಫಸ್ಟ್ ಲುಕ್ ಪೋಸ್ಟರ್ ನೋಡಿದರೆ, ಇದೊಂದು ಕ್ರೀಡೆಯ ಹಿನ್ನೆಲೆಯಿರುವ ಚಿತ್ರ ಎಂಬಂತೆ ಅನ್ನಿಸುತ್ತದೆ. ‘ನಾನಿಲ್ಲಿರುವುದು ಗೆಲ್ಲುವುದಕ್ಕೆ, ಸ್ಪರ್ಧಿಸಲು ಅಲ್ಲ’ ಎಂಬರ್ಥದ ಅಡಿಬರಹವಿದೆ. ನಿರ್ವಪಕ ಕೆ.ಪಿ. ಶ್ರೀಕಾಂತ್, ‘ನಿಖಿಲ್ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿ ಮೊದಲ ಲುಕ್ ಬಿಡುಗಡೆ ಮಾಡಿದ್ದೇವೆ. ಸದ್ಯಕ್ಕೆ ಇಷ್ಟು ಮಾಹಿತಿ ಮಾತ್ರ ನೀಡಬಲ್ಲೆ. ಚಿತ್ರತಂಡ, ತಾರಾಗಣ ಸೇರಿದಂತೆ ಉಳಿದೆಲ್ಲ ಮಾಹಿತಿಯನ್ನು ಇನ್ನು ಕೆಲವೇ ದಿನಗಳಲ್ಲಿ ನೀಡುತ್ತೇವೆ’ ಎಂದಷ್ಟೇ ಹೇಳುತ್ತಾರೆ.
ನಿರ್ದೇಶಕ ಮನೋ ಹರಗೆ ಇದು ಚೊಚ್ಚಲ ನಿರ್ದೇಶನ. ಯುಪಿಎಸ್ಸಿ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದ ಅವರು, ಸಿನಿಮಾ ಕನಸು ಹೊತ್ತು ಚಿತ್ರರಂಗಕ್ಕೆ ಬಂದಿದ್ದಾರೆ. ಈ ಹಿಂದೆ ‘ವೈಟ್’ ಎಂಬ ಕಿರುಚಿತ್ರ ನಿರ್ದೇಶಿಸಿದ್ದರು ಮನೋಹರ್. ಅದರಲ್ಲಿ ಪ್ರಿಯಾಮಣಿ ನಟಿಸಿದ್ದರೆ, ‘ಬಿಗ್ ಬಿ’ ಅಮಿತಾಭ್ ಬಚ್ಚನ್ ಹಿನ್ನೆಲೆ ಧ್ವನಿ ನೀಡಿದ್ದರು. ಜತೆಗೆ ಶಿವರಾಜಕುಮಾರ್ ಅಭಿನಯದ ‘ಬೆಳ್ಳಿ’, ‘ದುನಿಯಾ’ ವಿಜಯ್ ನಟಿಸಿರುವ ‘ದನ ಕಾಯೋನು’, ಪುನೀತ್ ರಾಜಕುಮಾರ್ ಅಭಿನಯದ ‘ಜೇಮ್್ಸ’ ಹಾಗೂ ಮಲಯಾಳಂ ಚಿತ್ರವೊಂದರ ನಿರ್ದೇಶನ ತಂಡದಲ್ಲಿ ಅನುಭವ ಪಡೆದಿದ್ದಾರೆ. ಚಿತ್ರದ ಬಗ್ಗೆ ಮಾತನಾಡುವ ಅವರು, ‘ಕಥೆ ಮೇಲೆ ತುಂಬ ಕೆಲಸ ಮಾಡಿದ್ದೇವೆ. ಇದು ಯಾವುದೇ ರಿಮೇಕ್ ಅಲ್ಲ, ಸ್ಟ್ರೈಟ್ ಸಬ್ಜೆಕ್ಟ್. ನಾಯಕನ ಪಾತ್ರಕ್ಕೆ ಯಂಗ್ ಸೂಪರ್ಸ್ಟಾರ್ ರೀತಿಯ ನಟ ಬೇಕಿತ್ತು. ಆಗ ನಮಗೆ ಹೊಳೆದಿದ್ದು ನಿಖಿಲ್ ಕುಮಾರಸ್ವಾಮಿ. ಅವರು ರಾಜಕಾರಣದಲ್ಲಿ ತುಂಬ ಬಿಜಿಯಿದ್ದಾರೆ. ಜತೆಗೆ ಸಿನಿಮಾ ಮಾಡುವ ಪ್ಯಾಷನ್ ಕೂಡ ಇದೆ. ದಿನದಲ್ಲಿ 20 ತಾಸು ರಾಜಕಾರಣಕ್ಕೆ ಸಮಯ ಕೊಟ್ಟರೂ, 4 ತಾಸು ಸಿನಿಮಾಗೆ ನೀಡುತ್ತಾರೆ. ಹೀಗಾಗಿಯೇ ಅಷ್ಟು ಬಿಜಿಯ ನಡುವೆಯೂ ಕಥೆ ಕೇಳಿದರು, ರ್ಚಚಿಸಿದರು, ಕಥೆ ಇಷ್ಟವಾಗಿ ಒಪ್ಪಿಕೊಂಡರು. ಇನ್ನು ಎರಡು ತಿಂಗಳಲ್ಲಿ ಚಿತ್ರದ ಬಗ್ಗೆ ಸಂಪೂರ್ಣ ಮಾಹಿತಿ ನೀಡುತ್ತೇವೆ’ ಎನ್ನುತ್ತಾರೆ ಮನೋ ಹರ.