'ನೋಡಿದವರು ಏನಂತಾರೆ' ಬಗ್ಗೆ ಪ್ರೇಕ್ಷಕರು ಏನಂದ್ರು? ನಟ ನವೀನ್ ಶಂಕರ್ ಮನದ ಮಾತು​ | Naveen Shankar

ವಿಜಯವಾಣಿ - 2025-02-10T161741.346
Published on

ಬೆಂಗಳೂರು: ವಿಭಿನ್ನ ಪಾತ್ರಗಳ‌ ಮೂಲಕ ಕನ್ನಡ ಚಿತ್ರರಂಗದ ಭರವಸೆ ನಾಯಕ ನಟನಾಗಿ ಹೊರಹೊಮ್ಮಿರುವ ನಟ ನವೀನ್​ ಶಂಕರ್ (Naveen Shankar), ಹೊಂದಿಸಿ ಬರೆಯಿರಿ, ಕ್ಷೇತ್ರಪತಿ ಚಿತ್ರಗಳ ಮೂಲಕ ಕನ್ನಡ ಚಿತ್ರರಸಿಕರ ಹೃದಯಕ್ಕೆ ಹತ್ತಿರವಾದ ಕಲಾವಿದ. ಇತ್ತೀಚೆಗೆ ಅವರು ಅಭಿನಯದ ಮತ್ತೊಂದು ಚಿತ್ರ 'ನೋಡಿದವರು ಏನಂತಾರೆ' ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡು, ಇದೀಗ ಸಿನಿಪ್ರೇಕ್ಷಕರಿಂದ ಭರಪೂರ ಮೆಚ್ಚುಗೆ ಪಡೆದುಕೊಂಡಿದೆ.

ಯುವ ನಿರ್ದೇಶಕ ಕುಲದೀಪ್ ಕಾರಿಯಪ್ಪ ಬರೆದ ಕಥೆ ಮತ್ತು ಪಾತ್ರಕ್ಕೆ ನವೀಶ್ ಶಂಕರ್ ಜೀವ ತುಂಬಿದ ರೀತಿಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ನವೀನ್ ಪಾತ್ರವಲ್ಲ ಇಡೀ ತಾರಾಬಳಗದ ಅಭಿನಯ, ಕುಲದೀಪ್ ನಿರ್ದೇಶನ ಎಲ್ಲಾ ವಿಭಾಗಗಳಿಂದಲೂ 'ನೋಡಿದವರು ಏನಂತಾರೆ' ಚಿತ್ರ ಪ್ರೇಕ್ಷಕರನ್ನು ಬಹುವಿಧವಾಗಿ ಆವರಿಸಿಕೊಂಡಿದೆ. ಚಿತ್ರಕ್ಕೆ ಜನರಿಂದ ಒಳ್ಳೆಯ ಪ್ರತಿಕ್ರಿಯೆ ಲಭಿಸುತ್ತಿರುವ ಹಿನ್ನೆಲೆ ಚಿತ್ರತಂಡ ಬೆಂಗಳೂರಿನ ಎಂಎಂಬಿ ಲೆಗಸಿಯಲ್ಲಿ ಇತ್ತೀಚೆಗೆ ಸುದ್ದಿಗೋಷ್ಟಿ ಆಯೋಜಿಸಿ, ಧನ್ಯವಾದ ತಿಳಿಸಿತು.

ಈ ವೇಳೆ ಮಾತನಾಡಿದ ನವೀನ್ ಶಂಕರ್, "ನಾವು ಸಿನಿಮಾ ಮಾಡಿರುತ್ತೇವೆ. ನಾವು ನಮ್ಮ ಚಿತ್ರದ ಬಗ್ಗೆ ಹೇಳಿಕೊಳ್ಳುತ್ತೇವೆ. ಆದರೆ ಅದು ಥಿಯೇಟರ್ ಬರುವ ತನಕ ಮಾತ್ರವಾಗಿರುತ್ತದೆ. ಥಿಯೇಟರ್ ಬಂದ ಮೇಲೆ ಪ್ರೇಕ್ಷಕರು ನಮಗೆ ಜತೆಯಾಗುತ್ತಾರೆ. ಅಲ್ಲಿಂದ ಮತ್ತೊಂದಷ್ಟು ಜನಕ್ಕೆ ಗೊತ್ತಾಗುತ್ತದೆ. ಇವರು ಮತ್ತೊಂದಿಷ್ಟು ಜನರನ್ನು ಥಿಯೇಟರ್​ಗೆ ಕರೆದುಕೊಂಡು ಬರುತ್ತಾರೆ. ಇದು ಕೆಲವೇ ಕೆಲವು ಸಿನಿಮಾಗಳಿಗೆ ಆಗುತ್ತದೆ. ಈ ಕೆಲವೇ ಕೆಲವು ಸಿನಿಮಾಗಳಲ್ಲಿ ನಾವು ಕೂಡ ಒಬ್ಬರು ಅನ್ನೋದೇ ಖುಷಿ. ಅದೇ ಖುಷಿಯಲ್ಲಿ ಪ್ರೇಕ್ಷಕರಿಗೆ ಧನ್ಯವಾದ ಅರ್ಪಿಸುತ್ತಿದ್ದೇವೆ" ಎಂದರು.

ನವೀಶ್ ಶಂಕರ್ ಸಿದ್ದಾರ್ಥ್ ದೇವಯ್ಯನಾಗಿ ನಟಿಸಿದ್ದು, ಅಪೂರ್ವ ಭಾರದ್ವಾಜ್ ನಾಯಕಿಯಾಗಿ ಸಾಥ್ ಕೊಟ್ಟಿದ್ದಾರೆ. ನಾಗೇಶ್ ಗೋಪಾಲ್ ನಿರ್ಮಾಣದ ಈ ಚಿತ್ರಕ್ಕೆ ಆಶ್ವಿನ್ ಕೆನೆಡಿ ಛಾಯಾಗ್ರಾಹಣ, ಮಯೂರೆಶ್ ಅಧಿಕಾರಿ ಹೃದಯಸ್ಪರ್ಶಿ ಸಂಗೀತವನ್ನು ಸಂಯೋಜಿಸಿದ್ದು, ಮನು ಶೆಡಗಾರ್ ಸಂಕಲನ ಚಿತ್ರಕ್ಕಿದೆ. ಕುಲದೀಪ್ ಕಾರಿಯಪ್ಪ ಅವರು ಬರೆದ ಕಥೆ ಮತ್ತು ಚಿತ್ರಕಥೆಗೆ ಅವರೊಂದಿಗೆ ಸಾಯಿ ಶ್ರೀನಿಧಿ, ಪ್ರಜ್ವಲ್ ರಾಜ್ ಮತ್ತು ಸುನಿಲ್ ವೆಂಕಟೇಶ್ ಸಂಭಾಷಣೆ ಬರೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net