Kichcha Sudeep Interview - ಪೈರಸಿ ವಿರುದ್ಧ ಯುದ್ಧ ಘೋಷಿಸಿದ ಅಜಯ್ ಮಾರ್ಕಂಡೇಯ

ಮಾರ್ಕ್​
ಮಾರ್ಕ್​
Published on
Kichcha Sudeep Interview - ಕನ್ನಡ ಚಿತ್ರರಂಗದಿಂದ ಪ್ಯಾನ್​ ಇಂಡಿಯಾ ಸ್ಟಾರ್​ ಆದವರ ಪೈಕಿ ನಟ ಕಿಚ್ಚ ಸುದೀಪ್​ ಮೊದಲ ಸಾಲಿನಲ್ಲಿ ನಿಲ್ಲುತ್ತಾರೆ. ಸ್ಟಾರ್​ಡಂಅನ್ನು ನೆತ್ತಿಗೇರಿಸಿಕೊಳ್ಳದ, ವಿವಾದಗಳಿಗೆ ಆಸ್ಪದ ನೀಡದ, ವೈಯಕ್ತಿಕ ಸಮಸ್ಯೆಗಳನ್ನು ಬೀದಿ ರಂಪ ಮಾಡಿಕೊಳ್ಳದ, ಸುಶಿತ, ಸೆನ್ಸಿಬಲ್​ ನಟ ಕಿಚ್ಚ ಸುದೀಪ್​. ಇದೀಗ "ಮಾರ್ಕ್​' ಬಿಡುಗಡೆಯಾಗಿದ್ದು ಪ್ರಚಾರದಲ್ಲಿ ಬಿಜಿಯಿರುವ ಅವರು "ಪೈರಸಿ ವಿರುದ್ಧ ಸಾರಿದ್ದ' ಹೇಳಿಕೆ, ವಿವಾದಕ್ಕೆ ತೆರೆ ಎಳೆದಿದ್ದಾರೆ. "ಮಾರ್ಕ್​' ಸಿನಿಮಾ, "45' ಜತೆಗಿನ ಕ್ಲ್ಯಾಶ್​, ನಟ ದರ್ಶನ್​, ಮುಂದಿನ ಯೋಜನೆ, ಯೋಚನೆಗಳ ಕುರಿತು ಮನಬಿಚ್ಚಿ ಮಾತನಾಡಿದ್ದಾರೆ.

* ಹೇಗಿತ್ತು "ಮಾರ್ಕ್​' ಜರ್ನಿ?

- ಒಂದು ಪರೀಕ್ಷೆಯಂತಿತ್ತು, ಒಂದು ನಿಮಿಷ ಕೂಡ ಕಾಲಹರಣ ಮಾಡುವಂತಿಲ್ಲ. ಚಾಲೆಂಜಿಂಗ್​ ಆಗಿತ್ತು, ಹಾಗೇ ಎಂಜಾಯ್​ ಕೂಡ ಮಾಡಿದೆವು. 120 ದಿನಗಳಲ್ಲಿ 166 ಕಾಲ್​ಶೀಟ್​ಗಳಲ್ಲಿ 107 ದಿನ ಕೆಲಸ ಮಾಡಿದ್ದೇವೆ. ಅಷ್ಟೂ ದಿನ ಒಂದೇ ವೇಗದಲ್ಲಿ ಕೆಲಸ ಮಾಡುವುದು ತುಂಬ ಕಷ್ಟ. ಒಂದೂ ದಿನ ವಿಶ್ರಾಂತಿ ಪಡೆದಿಲ್ಲ. ಹಾಗಂತ ಡಿಸೆಂಬರ್​ನಲ್ಲಿ ರಿಲೀಸ್​ ಮಾಡಲೇಬೇಕು ಎಂಬ ಹಠದಲ್ಲಿ ಗುಣಮಟ್ಟವನ್ನು ರಾಜಿ ಮಾಡಿಕೊಂಡಿಲ್ಲ. ಅಂದುಕೊಂಡಂತೆಯೇ ಸಿನಿಮಾ ಮೂಡಿಬಂದಿದೆ. ಸ್ವಲ್ಪ ಹೆಚ್ಚುಕಡಿಮೆ ಆಗಿದ್ದರೂ ನಾನು ಸಿನಿಮಾ ರಿಲೀಸ್​ ಮಾಡುತ್ತಿರಲಿಲ್ಲ. ಮಂಗಳವಾರ ನಾನು ಮಲಗಿದ್ದೇ ಬೆಳಗ್ಗೆ 5ಕ್ಕೆ, 7 ಗಂಟೆಗೇ ಎದ್ದು, ಸ್ವಲ್ಪ ವರ್ಕೌಟ್​ ಮಾಡಿ ಕೆಲಸಕ್ಕೆ ಮರಳಿದ್ದೇನೆ. ಇದು ಒಬ್ಬ ಸುದೀಪನಿಂದ ಸಾಧ್ಯವಿಲ್ಲ. ಇಡೀ ತಂಡದ ಶ್ರಮ ಅಡಗಿದೆ. ಜತೆಗೆ "ಮಾರ್ಕ್​', "ಮ್ಯಾಕ್ಸ್​'ಗಿಂತ ಮೂರು ಪಟ್ಟು ಹೆಚ್ಚು ಬಜೆಟ್​ನಲ್ಲಿ ಮೂಡಿಬಂದಿದೆ.

ಮುಂದಿನ ಚಿತ್ರಗಳು

- ತೆಲುಗು ನಿರ್ದೇಶಕ ಸುಕುಮಾರ್​ ತಂಡದಲ್ಲಿದ್ದ ಯುವ ನಿರ್ದೇಶಕರೊಬ್ಬರು ಕಥೆ ಹೇಳಿದ್ದಾರೆ. ರೊಮ್ಯಾಂಟಿಕ್​ ಕಾಮಿಡಿ ಸಿನಿಮಾ. "ಮಾರ್ಕ್​' ಬಳಿಕ ಆ ಚಿತ್ರ ಮಾಡಲಿದ್ದೇನೆ. ಮುಂದಿನ ವರ್ಷದ ಮಧ್ಯದಲ್ಲಿ ಆ ಸಿನಿಮಾ ರಿಲೀಸ್​ ಮಾಡಲು ಪ್ಲಾ$್ಯನ್​ ಮಾಡಿಕೊಳ್ಳುತ್ತಿದ್ದೇವೆ. ಅದೇ ವೇಗದಲ್ಲಿ ಕೆಲಸ ಮಾಡಲಿದ್ದೇನೆ. ನನಗೆ ಮೂರು ವರ್ಷ, ಎರಡು ವರ್ಷಕ್ಕೆ ಒಂದು ಸಿನಿಮಾ ಮಾಡಬೇಕು ಅನ್ನೋ ಆಸೆ ಇಲ್ಲ. ವರ್ಷಕ್ಕೆರಡು ಚಿತ್ರಗಳನ್ನೇ ಕೊಡಬೇಕು ಅಂತ ಕೆಲಸ ಮಾಡುತ್ತೇನೆ. ಆದರೆ, ಕೆಲವೊಮ್ಮೆ ಕೆಲ ಸಂದರ್ಭಗಳು ನಮ್ಮ ಕೈಯಲ್ಲಿರುವುದಿಲ್ಲ. "ಮಾರ್ಕ್​' ಚಿತ್ರವನ್ನು ಆರು ತಿಂಗಳಲ್ಲಿ ಮಾಡಬಹುದು ಅಂತನ್ನಿಸಿತು. ಮಾಡಿದೆವು. ಆದರೆ, "ಬಿಲ್ಲ ರಂಗ ಬಾಷಾ' ಚಿತ್ರವನ್ನು ಹೀಗೆ ಮಾಡಲಾಗುವುದಿಲ್ಲ. ಅದಕ್ಕೆ ಹೆಚ್ಚು ಸಮಯ ಬೇಕೇ ಬೇಕು. ಮುಂದಿನ ವರ್ಷದಂತ್ಯಕ್ಕೆ ಅದು ತೆರೆಗೆ ಬರಬಹುದು. ಹಾಗೇ ಪ್ರೇಮ್​ ಜತೆ ಪೌರಾಣಿಕ ಚಿತ್ರ ಹಾಗೂ ಎ.ಪಿ. ಅರ್ಜುನ್​ ಜತೆ ಇನ್ನೊಂದು ಸಿನಿಮಾ ಮಾತುಕತೆ ನಡೆಯುತ್ತಿದೆ.

* ನಿಮ್ಮ ಚಿತ್ರದ ಮೂಲಕವೇ ಗಾಯಕಿಯಾಗಿ ಪುತ್ರಿ ಸಾನ್ವಿ ಮತ್ತು ವಿತರಕಿಯಾಗಿ ಪತ್ನಿ ಪ್ರಿಯಾ ಪದಾರ್ಪಣೆ ಮಾಡುತ್ತಿದ್ದಾರೆ.

- ಸಾನ್ವಿಗೆ ಆಕೆಯ ಬಗ್ಗೆ ಆಕೆಗೇ ಹೆಮ್ಮೆ ಆಗಬೇಕು. ಆ ರೀತಿ ಕೆಲಸ ಮಾಡಬೇಕು. ಅಪ್ಪನಿಂದ ಆಕೆಗೆ ಹೆಮ್ಮೆ ಅನ್ನಿಸುವುದಲ್ಲ, ಆಕೆಯಿಂದ ನಾನು ಹೆಮ್ಮೆ ಪಡಬೇಕು. ಸಮಾಜದಲ್ಲಿ ಒಬ್ಬ ಗಟ್ಟಿ ಮಹಿಳೆಯಾಗಿ ಬೆಳೆಯಬೇಕು. ನಾನು ಆಕೆಯಿಂದ ಹಾಡಿಸಬೇಕು ಅಂತಿದ್ದರೆ ಮೂರು ವರ್ಷಗಳ ಹಿಂದೆಯೇ ಹಾಡಿಸುತ್ತಿದ್ದೆ. ತನ್ನ ಪ್ರತಿಭೆಯಿಂದ ಸಾನ್ವಿ ಮೊದಲ ಬಾರಿಗೆ ಅವಕಾಶ ಪಡೆದಿದ್ದಾಳೆ. ಪ್ರಿಯಾ ಮೊದಲ ಬಾರಿಗೆ "ಮಾರ್ಕ್​' ಮೂಲಕ ವಿತರಣೆಗೆ ಇಳಿಯುತ್ತಿದ್ದಾರೆ. ನನ್ನ ಸಿನಿಮಾ ಅಂತಲ್ಲ ಮುಂದೆ ಬೇರೆ ಚಿತ್ರಗಳನ್ನೂ ಪ್ರಿಯಾ ವಿತರಿಸಲಿದ್ದಾರೆ.

* "45' ಜತೆಗಿನ ಕ್ಲ್ಯಾಷ್​ ಬಗ್ಗೆ...

- ಯಾವುದೋ ಬೇರೆ ಭಾಷೆ ಸಿನಿಮಾ ಬಂದು ನಮ್ಮ ಥಿಯೇಟರ್​ಗಳನ್ನು ಆವರಿಸಿಕೊಳ್ಳುವುದಕ್ಕಿಂತ ಎಲ್ಲ ಚಿತ್ರಮಂದಿರಗಳಲ್ಲೂ ಕನ್ನಡದ "45' ಮತ್ತು "ಮ್ಯಾಕ್ಸ್​' ಎರಡು ಚಿತ್ರಗಳು ಪ್ರದರ್ಶನ ಕಾಣುತ್ತಿದ್ದರೆ ಎಷ್ಟು ಚಂದ ಅಲ್ಲವಾ? ಕನ್ನಡದ ಪ್ರೇಕ್ಷಕರು ಎರಡೂ ಚಿತ್ರಗಳಿಗೆ ಸಪೋರ್ಟ್​ ಮಾಡುವ ನಂಬಿಕೆ ಇದೆ. ಸಂಗೀತ ನಿರ್ದೇಶಕನಾಗಿ ಅರ್ಜುನ್​ ಜನ್ಯ ಗೊತ್ತು. ಆದರೆ, ನಿರ್ದೇಶಕನಾಗಿಯೂ ಚೆನ್ನಾಗಿ ಕೆಲಸ ಮಾಡಿದ್ದಾರೆ. ಟ್ರೇಲರ್​ನಲ್ಲೇ ಶಾಟ್ಸ್​ ನೋಡಿ ತಾಂತ್ರಿಕ ಗಟ್ಟಿ ಸಿನಿಮಾ ಅಂತ ಅನ್ನಿಸಿತು. ನಾನೂ "45' ನೋಡುತ್ತೇನೆ.

* ಪೈರಸಿ ವಿರುದ್ಧ ಯುದ್ಧ ಸಾರಿದ್ದೀರಿ

- ಪೈರಸಿಯನ್ನು ತಡೆಯಲುಸರ್ಕಾರ, ಪೊಲೀಸ್​ ಮತ್ತು ಕಾನೂನು ರೀತಿಯೂ ಎಚ್ಚರಿಕೆ ವಹಿಸಿದ್ದೇವೆ. ಈ ಬಾರಿ ನಾನಂತೂ ಬಿಡುವುದಿಲ್ಲ. ಪೈರಸಿ ತಂಡವನ್ನು ಸದೆಬಡಿಯಲೇಬೇಕು ಅಂತ ತೀರ್ಮಾನಿಸಿದ್ದೇವೆ.

* ಹುಬ್ಬಳ್ಳಿಯ ಯುದ್ಧದ ಹೇಳಿಕೆ ವಿವಾದದ ರೂಪ ಪಡೆದಿದೆಯಲ್ಲಾ..?

- 30 ವರ್ಷಗಳಲ್ಲಿ ನಾನು ಮತ್ತೊಬ್ಬ ಕಲಾವಿದರ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದೀನಾ? ಇಲ್ಲ ತಾನೇ? ಹೀಗಿರುವಾಗ ಹುಬ್ಬಳ್ಳಿಯಲ್ಲಿ ನನ್ನ ಸಿನಿಮಾ ಸಂಭ್ರಮ ಆಚರಿಸಲು ಹೋಗಿದ್ದ ವೇದಿಕೆಯಲ್ಲಿ ಖಾರವಾಗಿ ಮಾತನಾಡಿದ್ದೇನೆ ಅಂದರೆ ಅರ್ಥ ಮಾಡಿಕೊಳ್ಳಿ. ಆವೇಷದಲ್ಲಿ ಮಾತನಾಡುವುದಾರೆ ಇಷ್ಟು ಹೊತ್ತಿಗೆ ನಾನು ಅದೆಷ್ಟೋ ವಿವಾದಗಳಲ್ಲಿ ಸಿಲುಕಿಕೊಳ್ಳಬೇಕಿತ್ತು. ಒಂದು ಲಕ್ಷ ಜನ ಚಿತ್ರರಂಗದಲ್ಲಿ ಕೆಲಸ ಮಾಡುತ್ತಾರೆ. ಆದರೆ, ಅವರೊಬ್ಬರೇ ಯಾಕೆ ರಿಯಾಕ್ಟ್​ ಮಾಡಬೇಕು? ಹಾಗೆ ರಿಯಾಕ್ಟ್​ ಮಾಡುವುದಾದರೆ, ಮೊದಲು "45' ತಂಡದವರು ಮಾತನಾಡಬೇಕಿತ್ತು. ಉಪ್ಪಿ ಸರ್​, ಧ್ರುವ ಸರ್ಜಾ, ಗಣೇಶ್​, ರತ್​ ಶೆಟ್ಟಿ, ರಿಷಬ್​, ಯಶ್​... ಯಾರೂ ರಿಯಾಕ್ಟ್​ ಮಾಡಲಿಲ್ಲ. ನಮ್ಮ ಸಿನಿಮಾ ಕಾಪಾಡಿಕೊಳ್ಳುವುದು ನಮ್ಮ ಧರ್ಮ. ಅಹಂಕಾರದಲ್ಲಿ ನಾನು ಯಾವತ್ತೂ ಬದುಕಿಲ್ಲ. ಅದರ ಅವಶ್ಯಕತೆನೂ ನನಗಿಲ್ಲ. ನನಗೆ ಸಿನಿಮಾ ಮೇಲಷ್ಟೆ ಪ್ರೀತಿ. ದರ್ಶನ್​ ಬಗ್ಗೆಯೂ ನಾನು ಕೆಟ್ಟದಾಗಿ ಮಾತನಾಡಿಲ್ಲ. ನಾನು ಯಾರಿಗೂ ಕೆಟ್ಟದ್ದು ಬಯಸಿಲ್ಲ. ಯಾರಿಗೆ ಏನು ಹೇಳಬೇಕೋ ಹೇಳಿದ್ದೇನೆ. ಅವರಿಗೆ ಅದು ತಲುಪಿದೆ. ಹೆಸರು ತೆಗೆದುಕೊಂಡು ಮಾತನಾಡಿಲ್ಲ ಅಂದ ಮೇಲೆ ನೀವು ಅದರ ಬಗ್ಗೆ ರಿಯಾಕ್ಟ್​ ಮಾಡಬಾರದಿತ್ತು. ದರ್ಶನ್​ ಬಗ್ಗೆ ನನಗೆ ಗೌರವವಿದೆ. ಕೆಲ ಆಗು-ಹೋಗುಗಳ ಬಗ್ಗೆ ನೋವಿದೆ. ಅವರ ಅಭಿಮಾನಿಗಳ ನೋವೂ ನನಗೆ ಅರ್ಥವಾಗುತ್ತದೆ. ನನ್ನ ಫ್ಯಾನ್ಸ್​ ಅವರನ್ನು ಇಷ್ಟಪಡುವುದು, ಅವರ ್ಯಾನ್ಸ್​ ನನ್ನನ್ನು ಇಷ್ಟಪಡುವುದನ್ನು ಸಹಿಸದ ಸಣ್ಣ ಗುಂಪಿದೆ. ನಾವು ಒಂದಾಗುವುದು ಅವರಿಗೆ ಇಷ್ಟವಿಲ್ಲ. ನಟರಾಗಿ ನಾವು ಯಾವತ್ತೂ ಕಿತ್ತಾಡಿಲ್ಲ. ನಮ್ಮ ನಡುವೆ ಸಾವಿರ ಇದೆ. ಅದು ನಮಗೆ ಬಿಟ್ಟಿದ್ದು.

* "ಮಾರ್ಕ್​' ಕೂಡ ರೆವಿನ್ಯೂ ಶೇರಿಂಗ್​ನಲ್ಲಿ ಮೂಡಿಬರುತ್ತಿದೆ.

- ರೆವಿನ್ಯೂ ಶೇರಿಂಗ್​ ರೀತಿಯ ಸಹೋಯಗ ಆಗಬೇಕು ಅಂದರೆ ನಂಬಿಕೆ ಮುಖ್ಯ. ನಾನು ಪೂರ್ತಿ ಸಂಭಾವನೆ ಪಡೆಯದೇ, ಸಣ್ಣ ಮೊತ್ತ ಪಡೆದು, ನಿರ್ಮಾಪಕರ ಜತೆ ನಿಲ್ಲಬೇಕು ಅಂತ ಅಂದುಕೊಂಡಿದ್ದೇನೆ. ಚೆನ್ನಾಗಿ ಆದರೆ ಇಬ್ಬರೂ ದುಡಿಯುತ್ತೇವೆ, ಆಗದಿದ್ದರೆ ಇಬ್ಬರೂ ಕಳೆದುಕೊಳ್ಳುತ್ತೇವೆ. ಕನ್ನಡದ ಮಾರ್ಕೆಟ್​ ಬಗ್ಗೆಗೊತ್ತಿರುವ ಕಾರಣ ನಾನು ರಿಸ್ಕ್​ ತೆಗೆದುಕೊಂಡೆ. ನಿರ್ಮಾಣದ ಖರ್ಚು ಹೆಚ್ಚಾಗುತ್ತಿದ್ದು, ನಿರ್ಮಾಪಕರ ಜತೆ ನಿಂತಾಗ ಅವರಿಗೂ ಸಹಾಯವಾಗುತ್ತದೆ. ಹಾಗೇ ಒಳ್ಳೆ ಸಿನಿಮಾಗಳನ್ನೂ ಕೊಡಬಹುದು. ಹೀಗಾಗಿ "ವಿಕ್ರಾಂತ್​ ರೋಣ' ಸಮಯದಿಂದಲೂ ನಾನು ರೆವಿನ್ಯೂ ಶೇರಿಂಗ್​ ಮಾಡುತ್ತಿದ್ದೇನೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net