ಬೆಂಗಳೂರು: ರೊಮ್ಯಾಂಟಿಕ್, ಭಗ್ನಪ್ರೇಮಿ, ಲವರ್ ಬಾಯ್ ಪಾತ್ರಗಳಲ್ಲಿ ಮಿಂಚಿರುವ ನಟ ಗಣೇಶ್ ‘ಪಿನಾಕ’ ಚಿತ್ರದಲ್ಲಿ ಮೊದಲ ಬಾರಿಗೆ ರಾಜನ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಆಧುನಿಕ ಕಥೆಗೆ ಪೌರಾಣಿಕ ಸ್ಪರ್ಶ ನೀಡಲಾಗಿದ್ದು, ಇಲ್ಲಿ ಅವರು ಎರಡು ಶೇಡ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ನೃತ್ಯ ನಿರ್ದೇಶಕ ಬಿ. ಧನಂಜಯ್ ಈ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳಿದ್ದು, ಅ.2ಕ್ಕೆ ‘ಪಿನಾಕ’ ತೆರೆಗೆ ಬರಲಿದೆ. ಈ ಹಿನ್ನೆಲೆಯಲ್ಲಿ ಸೋಮವಾರ ಚಿತ್ರದ ಟೀಸರ್ ರಿಲೀಸ್ ಮಾಡುವ ಜತೆಗೆ ಚಿತ್ರತಂಡ ಗಣೇಶ್‌ರ ಹುಟ್ಟುಹಬ್ಬವನ್ನು ಆಚರಿಸಲಾಯಿತು. ಒಂದೂವರೆ ನಿಮಿಷದ ಟೀಸರ್ ಉತ್ಕೃಷ್ಟ ತಂತ್ರಜ್ಞಾನ ಹಾಗೂ ದೃಶ್ಯವೈಭವದಿಂದ ಕೂಡಿದೆ. ಟೀಸರ್‌ನಲ್ಲಿ ಯಾವುದೇ ಸಂಭಾಷಣೆ ಇಲ್ಲವಾದರೂ, ಅದ್ದೂರಿ ಸೆಟ್‌ಗಳು, ಕಲಾಕೃತಿಗಳು, ಪ್ರತಿ ದೃಶ್ಯದಲ್ಲಿ ಸಾವಿರಕ್ಕೂ ಅಧಿಕ ಕಲಾವಿದರ ಮೂಲಕ ಟೀಸರ್ ನೀರಿಕ್ಷೆ ಹೆಚ್ಚಿಸಿದೆ. ಛಾಯಾಗ್ರಹಣವು ಇಡೀ ಝಲಕ್‌ನ ಅದ್ದೂರಿತನ ಹೆಚ್ಚಿಸಿದ್ದು, ಸಾಹಸ ದೃಶ್ಯಗಳು, ಹಿನ್ನೆಲೆ ಸಂಗೀತ ಗಮನಸೆಳೆಯುತ್ತವೆ. ಅಂತಿಮವಾಗಿ ‘ಧರ್ಮಕ್ಕಾಗಿ ಹೋರಾಟ ಆರಂಭ’ ಎಂಬ ಸಾಲು ಕಂಡುಬರುತ್ತದೆ. ನಟ ಗಣೇಶ್ ಜತೆಗೆ ರಂಗಾಯಣ ರಘು, ಸಾಧು ಕೋಕಿಲ ಕಲಾಬಳಗದಲ್ಲಿದ್ದಾರೆ. ಪೀಪಲ್ ಮೀಡಿಯಾ ಫ್ಯಾಕ್ಟರಿ ಸಂಸ್ಥೆಯು ಚಿತ್ರಕ್ಕೆ ಬಂಡವಾಳ ಹೂಡಿದೆ. ಕನ್ನಡ, ತೆಲುಗು ಸೇರಿ ಪ್ಯಾನ್ ಇಂಡಿಯಾ ರೂಪದಲ್ಲಿ ಸಿನಿಮಾ ತೆರೆಗೆ ಬರಲಿದೆ.