ನಟಿ ಸಮಂತಾ ರುತ್ ಪ್ರಭು ಕೆಲ ವರ್ಷಗಳಿಂದೀಚೆಗೆ ತೀವ್ರ ಅನಾರೋಗ್ಯ ಸಮಸ್ಯೆಗೆ ಒಳಗಾಗಿದ್ದರು. ಮಯೋಸಿಟಿಸ್ ಎಂಬ ಸ್ನಾಯು ಸಂಬಂಧಿ ಸಮಸ್ಯೆಯಿಂದಾಗಿ ಸುಮಾರು ಒಂದೂವರೆ ವರ್ಷ ಚಿತ್ರರಂಗದಿಂದಲೇ ದೂರ ಉಳಿದಿದ್ದರು. ಹೀಗಾಗಿಯೇ 2023ರಲ್ಲಿ "ಶಾಕುಂತಲಂ' ಮತ್ತು "ಖುಷಿ' ಬಳಿಕ ಈ ಮೂರು ವರ್ಷಗಳಲ್ಲಿ, ಸಮಂತಾ ನಟಿಸಿರುವುದು ಕೇವಲ ಒಂದೇ ಸಿನಿಮಾ "ಶುಭಂ'. ಅದೂ ಅವರೇ ನಿರ್ಮಿಸಿದ್ದ ಚಿತ್ರ. ಕಳೆದ ಒಂದು ವರ್ಷದಿಂದ ಬೇರೆ ತಂಡಗಳಲ್ಲಿ ನಟಿಸದೇ ಸಮಂತಾ ತಮ್ಮದೇ ಬ್ಯಾನರ್ನಲ್ಲಿ ಸಿನಿಮಾ ನಿರ್ಮಿಸಿ, ನಟಿಸುತ್ತಿರುವುದಕ್ಕೆ ಅವರ ಅನಾರೋಗ್ಯವೇ ಕಾರಣ ಎಂಬ ಮಾತುಗಳು ಟಾಲಿವುಡ್ ಅಂಗಳದಲ್ಲಿ ಕೇಳಿಬರುತ್ತಿತ್ತು. ಅದರ ನಡುವೆಯೇ ಅವರ ಜತೆ ತೆರೆ ಹಂಚಿಕೊಂಡಿರುವ ದಿಗಂತ್, "ಸಮಂತಾ ತುಂಬ ಹಾರ್ಡ್ ವರ್ಕಿಂಗ್. ಅವರಿಗೆ ಮಯೋಸಿಟಿಸ್ ಎಂಬ ಅಪರೂಪದ ಆರೋಗ್ಯ ಸಮಸ್ಯೆ ಇದೆ. ನಾಳೆ ಏನಾಗುತ್ತದೆ ಎಂಬುದೇ ಗೊತ್ತಿಲ್ಲ. ಅವರಿಗೆ ಅವರ ದೇಹ ಹಠಾತ್ತಾಗಿ ಕೈಕೊಡಬಹುದು. ಅಷ್ಟು ಗಂಭೀರ ಆರೋಗ್ಯ ಸಮಸ್ಯೆ ಇದ್ದರೂ, ಅವರ ಸಂಪೂರ್ಣ ಗಮನ ಕೆಲಸದ ಮೇಲಿರುತ್ತದೆ. ಕೆಲಸ ಮಾಡುತ್ತಿದ್ದರೆ ಮಾತ್ರ ನಾನು ಆರೋಗ್ಯವಾಗಿರಬಹುದು ಅಂತ ಅವರು ನಿರ್ಧರಿಸಿದ್ದಾರೆ. ಹೀಗಾಗಿ ಮನೆಯಲ್ಲಿ ಸುಮ್ಮನೆ ಕೂರುವುದಿಲ್ಲ. ಏನಾದರೂ ಕೆಲಸ ಮಾಡುತ್ತಿರುತ್ತಾರೆ' ಎನ್ನುತ್ತಾರೆ.