

ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಸ್ವಾಮಿ ಹತ್ಯೆ ಪ್ರಕರಣಕ್ಕೆ (Renukaswamy Murder Case) ಸಂಬಂಧಿಸಿದಂತೆ ಎರಡನೇ ಆರೋಪಿ ದರ್ಶನ್ (Darshan) ಸದ್ಯ ಮಧ್ಯಂತರ ಜಾಮೀನಿನ ಮೇಲೆ ಹೊರಬಂದಿದ್ದು, ಬೆನ್ನು ನೋವಿನ ಕಾರಣ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಪೊಲೀಸರು 3991 ಪುಟಗಳ ಚಾರ್ಜ್ಶೀಟ್ಅನ್ನು ನ್ಯಾಯಾಯಲಕ್ಕೆ ಸಲ್ಲಿಸಿದ್ದು, ಚಾರ್ಜ್ಶೀಟ್ ಸಲ್ಲಿಕೆ ಬಳಿಕವೂ ಅವರು ತನಿಖೆ ಮುಂದುವರಿಸಿದ್ದಾರೆ. ನಾನಾ ಹಂತದಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದು, ಮತ್ತಷ್ಟು ವಿಚಾರ ಹೊರಬರುವುದು ಪಕ್ಕಾ ಎಂದು ಹೇಳಲಾಗಿದೆ.
ರೇಣುಕಸ್ವಾಮಿ ಹತ್ಯೆ ಪ್ರಕರಣಕ್ಕೆ (Renukaswamy Murder Case) ಸಂಬಂಧಿಸಿದಂತೆ ನಟ ದರ್ಶನ್ (Darshan) ಮತ್ತು ಇತರೆ ಆರೋಪಿಗಳ ವಿರುದ್ಧ ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿರುವ ಹೆಚ್ಚುವರಿ ದೋಷಾರೋಪ ಪಟ್ಟಿಯಲ್ಲಿ ಡಿಜಿಟಿಲ್ ಸಾಕ್ಷ್ಯಾಧಾರಗಳು, ಎಫ್‌ಎಸ್‌ಎಲ್ ಹಾಗೂ ಸಿಎಫ್‌ಎಸ್‌ಎಲ್ ಪರೀಕ್ಷಾ ವರದಿಗಳು, ಮೊಬೈಲ್ ಕರೆಗಳ ವಿವರ ಹಾಗೂ ಸಾಕ್ಷಿಗಳ ಹೇಳಿಕೆಯನ್ನು ಒಳಗೊಂಡ ಮಾಹಿತಿಯನ್ನು ಲಗತ್ತಿಸಲಾಗಿದೆ. ಇದರಲ್ಲಿ ಪ್ರಮುಖವಾಗಿ ಹಣ ವರ್ಗಾವಣೆ ಹಾಗೂ ನಟ ದರ್ಶನ್ ಕೊಲೆ ನಡೆದಾಗ ಸ್ಥಳದಲ್ಲಿದ್ದರು ಎಂಬುದನ್ನು ಪ್ರಮುಖವಾಗಿ ಉಲ್ಲೇಖಿಸಲಾಗಿದೆ.
ಇನ್ನೂ ದರ್ಶನ್ ಕೃತ್ಯ ನಡೆದ ಸ್ಥಳದಲ್ಲಿದ್ದರು ಎಂಬುದಕ್ಕೆ ಅಧಿಕಾರಿಗಳಿಗೆ ಮಾಹಿತಿ ಲಭ್ಯವಾಗಿದ್ದು, ಹೆಚ್ಚುವರಿ ದೋಷಾರೋಪ ಪಟ್ಟಿಯಲ್ಲಿ 8 ಪೋಟೋಗಳನ್ನು ಲಗತ್ತಿಸಿದ್ದು, ಘಟನೆ ನಡೆದ ಬಳಿಕ ದರ್ಶನ್ ಹೊರಡುವ ಸಂದರ್ಭದಲ್ಲಿ ಆರೋಪಿಗಳು ಫೋಟೊ ತೆಗೆಸಿಕೊಂಡಿದ್ದರು ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಆರೋಪಿಗಳಾದ ಜಗದೀಶ್ (04), ಅನುಕುಮಾರ್ (02), ಹಾಗೂ ಚಾಲಕ ರವಿ ಮೊಬೈಲ್‌ನಲ್ಲಿ ಎರಡು ಫೋಟೋಗಳನ್ನು ರಿಟ್ರೈವ್ ಮಾಡಲಾಗಿದ್ದು, ಇದು ಕೂಡ ದರ್ಶನ್ ಪಾಲಿಗೆ ಮುಳುವಾಗುವ ಸಾಧ್ಯತೆ ಇದೆ. ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗಿದೆ.
ಆರೋಪಿಗಳ ಹಣಕಾಸು ವಹಿವಾಟಿನ ಬಗ್ಗೆಯೂ ಮಾಹಿತಿ ಸಂಗ್ರಹಕ್ಕೆ ತನಿಖಾಧಿಕಾರಿಗಳು ಮುಂದಾಗಿದ್ದು, 14 ಜನ ಆರೋಪಿಗಳಿಗೆ ಸಂಬಂಧಿಸಿದಂತೆ ತನಿಖಾಧಿಕಾರಿಗಳು ಕೆವೈಸಿ ಮಾಹಿತಿ ಪಡೆದಿದ್ದಾರೆ. ಇ-ಮೇಲ್ ಮೂಲಕ ಮಾಹಿತಿ ಸಂಗ್ರಹ ಆಗಿದೆ. ಕೊಲೆಯ ಹಿಂದೆ ಅಥವಾ ನಂತರದ ದಿನಗಳಲ್ಲಿ ದೊಡ್ಡ ಮೊತ್ತದ ಹಣದ ವ್ಯವಹಾರ ನಡೆದಿದೆಯೇ ಎನ್ನುವ ಬಗ್ಗೆ ಅಧಿಕಾರಿಗಳು ಪರಿಶೀಲಿಸುತ್ತಿದ್ದು, ಒಂದೊಮ್ಮೆ ಇದು ನಡೆದಿದ್ದರೆ ದರ್ಶನ್ಗೆ (Darshan) ಸಂಕಷ್ಟ ಉಂಟಾಗಲಿದೆ.