

ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಸೇರಿದಂತೆ ನಾಲ್ವರು ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಜುಲೈ 04ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ಕೋರ್ಟ್ ಆದೇಶ ಹೊರಡಿಸಿದೆ.
ಪೊಲೀಸ್ ಕಸ್ಟಡಿ ಅಂತ್ಯವಾದ ಹಿನ್ನೆಲೆ ಆರೋಪಿಗಳಾದ ದರ್ಶನ್, ವಿನಯ್, ಧನರಾಜ್ ಹಾಗೂ ಪ್ರದೋಶ್ನನ್ನು ಪೊಲೀಸರು ಮ್ಯಾಜಿಸ್ಟ್ರೇಟ್ ಕೋರ್ಟ್ಗೆ ಹಾಜರುಪಡಿಸಿದರು. ವಾದ-ಪ್ರತಿವಾದವನ್ನು ಆಲಿಸಿದ ನ್ಯಾಯಧೀಶರು ನಾಲ್ವರು ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶ ಹೊರಡಿಸಿದ್ದಾರೆ. ಅದರಂತೆ ನಟ ದರ್ಶನ್ ಹಾಗೂ ಸಹಚರರನ್ನು ಪೊಲೀಸರು ಪರಪ್ಪನ ಅಗ್ರಹಾರಕ್ಕೆ ಸ್ಥಳಾಂತರಿಸಲಿದ್ದಾರೆ.
ಕೊಲೆ ಕೇಸ್ ಸಂಬಂಧ ಜೂನ್ 11ರಂದು ದರ್ಶನ್ ಬಂಧನವಾಗಿತ್ತು. ಮೂರು ಬಾರಿ ದರ್ಶನ್‌ರನ್ನು ಪೊಲೀಸ್ ಕಸ್ಟಡಿಗೆ (12 ದಿನ) ಪಡೆಯಲಾಗಿತ್ತು. ಇದೀಗ ಜುಲೈ 4ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಿದ ಹಿನ್ನೆಲೆಯಲ್ಲಿ ದರ್ಶನ್ ಪರಪ್ಪನ ಅಗ್ರಹಾರ ಜೈಲು ಸೇರಲಿದ್ದಾರೆ. 2011ರಲ್ಲಿ ಪತ್ನಿ ವಿಜಯಲಕ್ಷ್ಮಿ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿ ನಟ ದರ್ಶನ್ ಜೈಲು ಸೇರಿದ್ದರು. ಇದೀಗ ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನವಾಗಿದ್ದರಿಂದ ಎರಡನೇ ಬಾರಿಗೆ ನಟ ಜೈಲು ಸೇರುತ್ತಿದ್ದಾರೆ.
ನಟ ದರ್ಶನ್ ಅವರ ಗೆಳತಿ ಪವಿತ್ರಾ ಗೌಡಗೆ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲವಾಗಿ ಕಮೆಂಟ್ ಮಾಡಿ ಮೆಸ್ಸೇಜ್ ಮಾಡಿದ್ದ ಎಂಬ ಕಾರಣಕ್ಕೆ ಚಿತ್ರದುರ್ಗ ಮೂಲದ ರೇಣುಕಸ್ವಾಮಿಯನ್ನು ನಟ ದರ್ಶನ್ ಮತ್ತು ಸಹಚರರು ಜೂನ್ 08ರಂದು ಪಟ್ಟಣಗೆರೆಯ ಶೆಡ್ನಲ್ಲಿ ಭೀಕರವಾಗಿ ಹತ್ಯೆ ಮಾಡಿದ್ದರು. ಬಳಿಕ ಮೃತದೇಹವನ್ನು ಸುಮನಹಳ್ಳಿ ಬಳಿ ಇರುವ ರಾಜಕಾಲುವೆಗೆ ಎಸೆಉ ಪರಾರಿಯಾಗಿದ್ದರು. ರಾಜಕಾಲುವೆಯಲ್ಲಿ ಸಿಕ್ಕ ಮೃತದೇಹದ ಜಾಡನ್ನು ಹಿಡಿದು ಹೊರಟ ಪೊಲೀಸರು ನಂತರ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ 19 ಮಂದಿ ಆರೋಪಿಗಳನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದರು.