

ಬೆಂಗಳೂರು: ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ನ್ಯಾಯಾಲಯದ ಮುಂದೆ ಸಾಕ್ಷಿ ಹೇಳಿದ್ದ ಬಳಿಕ ಜೈಲಿನಲ್ಲಿ ನಟ ದರ್ಶನ್ ಭೇಟಿ ಮಾಡಿದ್ದ ಹಾಸ್ಯನಟ ಚಿಕ್ಕಣ್ಣ ಗುರುವಾರ ತನಿಖಾಧಿಕಾರಿಗಳ ಮುಂದೆ ಹಾಜರಾಗಿ ವಿಚಾರಣೆ ಎದುರಿಸಿದರು.
ಜೂ. ೮ರಂದು ಆರೋಪಿ ವಿನಯ್ ಮಾಲೀಕತ್ವದ ಸ್ಟೋನಿ ಬ್ರೂಕ್ ಆ್ಯಂಡ್ ಪಬ್ನಲ್ಲಿ ನಟ ದರ್ಶನ್ ಹಾಗೂ ತಂಡದ ಸದಸ್ಯರ ಪಾರ್ಟಿ ಮಾಡಿದ್ದರು. ಈ ಪಾರ್ಟಿಯಲ್ಲಿ ಜತೆ ಚಿಕ್ಕಣ್ಣ ಸಹ ಭಾಗಿಯಾಗಿದ್ದರು. ಈ ಸಂಬಂಧ ಚಿಕ್ಕಣನಿಗೆ ನೋಟಿಸ್ ನೀಡಿ ವಿಚಾರಣೆ ನಡೆಸಲಾಯಿತು.
ನಂತರ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಚಿಕಣ್ಣನನ್ನು ಸಾಕ್ಷಿಯಾಗಿ ಪರಿಗಣಿಸಿ ಸಿಆರ್‌ಪಿಸಿ ಸೆಕ್ಷನ್ ೧೬೪ನಡಿ ನ್ಯಾಯಾಲಯದ ಮುಂದೆ ಹೇಳಿಕೆ ದಾಖಲಿಸಿಕೊಂಡಿದ್ದರು.
ಹೇಳಿಕೆ ನೀಡಿದ ಕೆಲದಿನಗಳ ಬಳಿಕ ಜೈಲಿನಲ್ಲಿದ್ದ ನಟ ದರ್ಶನ್‌ನನ್ನು ಚಿಕ್ಕಣ್ಣ ಭೇಟಿ ಮಾಡಿದ್ದರು. ಇದು ಹಲವು ಅನುಮಾನ ಹಾಗೂ ಚರ್ಚೆಗೆ ಗ್ರಾಸವಾಗಿತ್ತು. ಈ ಬಗ್ಗೆ ನಗರ ಪೊಲೀಸ್ ಆಯುಕ್ತ ದಯಾನಂದ ಅವರು ಪ್ರತಿಕ್ರಿಯಿಸಿ, ಈ ಬಗ್ಗೆ ನೊಟೀಸ್ ನೀಡಿ ವಿಚಾರಣೆ ನಡೆಸಲಾಗುವುದು ಎಂದಿದ್ದರು. ಈ ಸಂಬಂಧ ವಿಚಾರಣೆಗೆ ಬರುವಂತೆ ತನಿಖಾಧಿಕಾರಿಗಳು ನೋಟಿಸ್ ನೀಡಿದ್ದರು. ಈ ಹಿನ್ನೆಲೆಯಲ್ಲಿ ವಿಚಾರಣೆ ಹಾಜರಾದರು.
ವಿಚಾರಣೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಚಿಕ್ಕಣ್ಣ, ದರ್ಶನ್ ಭೇಟಿ ಸಂಬಂಧ ಜೈಲಿಗೆ ಹೋದಾಗ ಏನು ಮಾತನಾಡಲಾಯಿತು ಎಂದು ಅಧಿಕಾರಿಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ್ದೇನೆ. ಸಾಕ್ಷಿದಾರರನಾಗಿ ಆರೋಪಿತರನ್ನು ಭೇಟಿ ಮಾಡಬಾರದೆಂದು ನನಗೆ ಗೊತ್ತಿರಲಿಲ್ಲ. ಮೊದಲೇ ತಿಳಿದಿದ್ದರೆ ಭೇಟಿ ಮಾಡಲು ಹೋಗುತ್ತಿರಲಿಲ್ಲ. ತನಿಖೆ ಹಂತದಲ್ಲಿರುವುದರಿಂದ ಹೆಚ್ಚು ಮಾತನಾಡುವುದಕ್ಕೆ ಆಗುವುದಿಲ್ಲ. ಮತ್ತೆ ವಿಚಾರಣೆಗೆ ಬರಲು ಹೇಳಿಲ್ಲ. ಒಂದು ವೇಳೆ ಕರೆದರೆ ತನಿಖೆಗೆ ಸಹಕರಿಸುವೆ ಎಂದರು.