ಅಪೂರ್ವ ಭಕ್ತಿ: ಬಿಜಿ ನಡುವೆ ಕಠಿಣ ವ್ರತ ಕೈಗೊಂಡಿರುವ ಚಂದನವನದ ತಾರೆ

apurva 2
Published on

ಬೆಂಗಳೂರು: ನಟ ರವಿಚಂದ್ರನ್‌ಗೆ ಜೋಡಿಯಾಗಿ ‘ಅಪೂರ್ವ’ ಚಿತ್ರದ ಮೂಲಕ ಚಂದನವನಕ್ಕೆ ಆಗಮಿಸಿದ ನಟಿ ಅಪೂರ್ವ ಬಳಿಕ ಹಿಟ್ ಸಿನಿಮಾಗಳಲ್ಲಿ ನಟಿಸಿದರು.‘ವಿಕ್ಟರಿ-2’, ‘ಕೃಷ್ಣ ಟಾಕೀಸ್’, ‘ಪೆಂಟಗಾನ್’ ಸೇರಿ ಇತ್ತೀಚೆಗೆ ತೆರೆಕಂಡ ಕಿರಣ್‌ರಾಜ್ ನಟನೆಯ ‘ರಾನಿ’ ಚಿತ್ರದಲ್ಲಿ ಸೂಪರ್ ಕಾಪ್ ಆಗಿ ಕಾಣಿಸಿಕೊಂಡಿದ್ದರು. ಸದ್ಯ, ಅವರ ಕೈಯಲ್ಲಿ ನಾಲ್ಕು ಚಿತ್ರಗಳಿವೆ. ಶೂಟಿಂಗ್ ಬಿಜಿ ನಡುವೆಯೂ ಅಪೂರ್ವ ದಸರಾ ಹಬ್ಬವನ್ನು ಅದ್ದೂರಿಯಾಗಿ ಆಚರಿಸುತ್ತಿದ್ದಾರೆ. ಈ ಬಾರಿ ಕಠಿಣ ವ್ರತ ಕೈಗೊಂಡಿರುವ ನಟಿ, ಈ ವರ್ಷವೂ ಶುಭದಾಯಕವಾಗಲಿ ಎಂದು ಪ್ರಾರ್ಥಿಸುತ್ತಿದ್ದಾರೆ. ಈ ಬಗ್ಗೆ, ‘ಕಳೆದ ಮೂರು-ನಾಲ್ಕು ವರ್ಷಗಳಿಂದ ಕಠಿಣ ವ್ರತದೊಂದಿಗೆ ನವರಾತ್ರಿ ಆಚರಿಸುತ್ತಿದ್ದೇನೆ. ಹಬ್ಬದ ಒಂಬತ್ತು ದಿನವೂ ದೇವರ ಮನೆಯಲ್ಲಿ ಕಳಸ ಸ್ಥಾಪನೆ ಮಾಡಿ, ದೇವರಿಗೆ ಅಖಂಡ ದೀಪ ಬೆಳಗುತ್ತೇವೆ. ಈ ದೀಪ ಬೆಳಗ್ಗೆಯಿಂದ ಸಂಜೆವರೆಗೆ ಆರದಂತೆ ಕಾಯಬೇಕು. ಹಾಗೆಯೇ ಉಪವಾಸ ಮಾಡುತ್ತೇವೆ.ಈ ಅವಧಿಯಲ್ಲಿ ನೀರು ಮಾತ್ರವಷ್ಟೇ ಸೇವಿಸುವುದು. ಈ ನಡುವೆ ಶೂಟಿಂಗ್ ಕೆಲಸಗಳಲ್ಲಿ ಭಾಗವಹಿಸುತ್ತೇನೆ. ಯಾವುದೇ ಕಷ್ಟ ಎನಿಸುತ್ತಿಲ್ಲ ದೇಹ ಚೈತನ್ಯಮಯವಾಗಿರುತ್ತದೆ. ಶೂಟಿಂಗ್‌ನಿಂದ ಬಂದ ಬಳಿಕ ಸಂಜೆ ನಾಗರಬಾವಿಯ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸುವೆ. ವ್ರತವೂ ಸ್ವಲ್ಪ ಕಠಿಣ ಎನಿಸಬಹುದು ಆದರೆ, ದೇಹ ಮತ್ತು ಮನಸ್ಸು ಪರಿಶುದ್ಧವಾಗಿರಲು ಸಹಾಯವಾಗುತ್ತದೆ’ ಎನ್ನುತ್ತಾರೆ.

ಗೌರಿ- ಕಾಳಿಯ ರೂಪ: ನಟಿ ಅಪೂರ್ವ ಹಬ್ಬದ ಸಂದೇಶದ ಕುರಿತಂತೆ, ‘ಹೆಣ್ಣಿಗೆ ಗೌರಿ ರೂಪವೂ ಇದೆ, ಕಾಳಿಯ ರೂಪವೂ ಇದೆ. ಇಲ್ಲಿ ಭಕ್ತಿಯಿಂದ ಪೂಜಿಸಿದರೆ ಗೌರಿಯಾಗಿ ಕಾಣಿಸುತ್ತಾಳೆ, ಅದೇ ಕೆಡುಕನ್ನು ಬಯಸಿದರೆ ಕಾಳಿಯ ರೂಪ ತಾಳುತ್ತಾಳೆ ಎಂಬ ಸಂದೇಶ ಈ ಹಬ್ಬದಲ್ಲಿದೆ. ಇನ್ನು ಹಬ್ಬದ ಒಂಬತ್ತು ದಿನವೂ ಕಠಿಣ ವ್ರತ ಅಚರಿಸುವ ಮೂಲಕ ನಮ್ಮೊಳಗಿರುವ ದ್ವೇಷ, ಕೆಡುಕು, ಅಹಂನ್ನು ನಾವು ಕಳೆದುಕೊಂಡು ಒಳ್ಳೆಯವರಾಗಿ ಬದುಕಬಹುದು’ ಎನ್ನುತ್ತಾರೆ.

ಮಕ್ಕಳಿಗೆ ಹಬ್ಬವನ್ನು ಪರಿಚಯಿಸಿ: ಅಧುನಿಕತೆ ಬೆಳೆದಂತೆ ಹಬ್ಬದ ಸಂಸ್ಕೃತಿ ಕಳೆಗುಂದುತ್ತಿದೆ. ಈ ಬಗ್ಗೆ ಅಪೂರ್ವ, ‘ನಮ್ಮ ಮಕ್ಕಳಿಗೆ ಹಬ್ಬದ ಮಹತ್ವವನ್ನು ಸಾರಬೇಕಿದೆ. ನವರಾತ್ರಿಯ ಒಂಬತ್ತು ದಿನವೂ ಮಕ್ಕಳನ್ನು ದೇವಸ್ಥಾನಕ್ಕೆ ಕರೆದುಕೊಂಡು ಹೋಗಿ, ದೇವರ ಮಹಿಮೆ, ಆಚರಣೆಯ ಬಗ್ಗೆ ತಿಳಿಸಬೇಕು. ಇಲ್ಲವಾದರೆ, ಮುಂದಿನ ದಿನಗಳಿಗೆ ಮಕ್ಕಳಿಗೆ ದೇವರ ಬಗೆಗಿನ ಭಯ, ಭಕ್ತಿ ಇಲ್ಲದಂತಾಗುತ್ತದೆ. ಅಲ್ಲದೇ ನಮ್ಮ ಸಂಸ್ಕೃತಿಯ ಪೌರಾಣಿಕ ಮಹಾಪುರುಷರ ಕಥೆಗಳನ್ನು ಮನದಟ್ಟ ಮಾಡಬೇಕು’ ಎಂದು ಅಭಿಪ್ರಾಯಪಡುತ್ತಾರೆ.

ನಾಲ್ಕು ಚಿತ್ರಗಳಲ್ಲಿ ಬಿಜಿ: ನಟಿ ಅಪೂರ್ವ ಸಿನಿಮಾಗಳಲ್ಲಿ ಬಿಜಿ ಇರುವುದೇ ಹಬ್ಬದ ವಿಶೇಷತೆ. ಅವರ ನಾಲ್ಕು ಸಿನಿಮಾಗಳು ತೆರೆಗೆ ಬರಲು ಸಿದ್ಧತೆ ನಡೆಸುತ್ತಿವೆ. ಈ ಬಗ್ಗೆ ನಟಿ, ‘ಬಾಲಚಂದ್ರ ಅಭಿನಯದ ‘ಕಣಂಜಾರು’, ಕಾಶಿನಾಥ್ ಪುತ್ರ ಅಭಿಮನ್ಯು ಕಾಶೀನಾಥ್ ಅವರ ‘ಸೂರಿ ಲವ್ ಸಂಧ್ಯಾ’, ರವಿಚಂದ್ರನ್ ಮುಖ್ಯಭೂಮಿಕೆಯಲ್ಲಿರುವ ‘ಗೌರಿಶಂಕರ್’, ಚಂದನ್ ಶೆಟ್ಟಿಯ ‘ಸೂತ್ರಧಾರಿ’ ಈ ಸಿನಿಮಾಗಳು ಬಿಡುಗಡೆ ಸಿದ್ಧವಾಗಿವೆ. ಹಾಗೆಯೇ ಮಹಿಳಾ ಪ್ರಧಾನ ಸಿನಿಮಾವೊಂದರಲ್ಲಿ ಅಪೂರ್ವ ಅಭಿನಯಿಸುತ್ತಿದ್ದು, ಸದ್ಯ ಈ ಚಿತ್ರದ ಶೂಟಿಂಗ್ ನಡೆಯುತ್ತಿದೆ. ಈ ಮಧ್ಯೆಯೇ ‘ನಾ ನಿನ್ನ ಬಿಡಲಾರೆ’ ಚಿತ್ರ ಸೆಟ್ಟೇರಿದೆ’ ಎಂದು ಖುಷಿ ಹಂಚಿಕೊಳ್ಳುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net