

ಹೊಸನಗರ: ಕಾಂಗ್ರೆಸ್ ಕಾರ್ಯಕರ್ತರು ಲೋಕಸಭೆ ಮತ್ತು ಪರಿಷತ್ ಚುನಾವಣೆ ಸೋಲಿಗೆ ಹೆದರುವ ಅಗತ್ಯವಿಲ್ಲ. ರಾಜ್ಯದಲ್ಲಿ ಈಗ ವಿಧಾನಸಭೆ ಚುನಾವಣೆ ನಡೆದರೂ ಕಾಂಗ್ರೆಸ್ 180 ಸ್ಥಾನಗಳಲ್ಲಿ ಗೆಲುವು ಪಡೆಯಲಿದೆ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಹೇಳಿದರು.
ಕಾಂಗ್ರೆಸ್ ಪಕ್ಷವು ಸಿದ್ಧಾಂತ, ಎಲ್ಲ ಜಾತಿ, ಧರ್ಮ ಮೀರಿ ಹೋರಾಟದ ಮೂಲಕ ಮತ ಕೇಳಿದೆ. ಬಿಜೆಪಿ ಚುನಾವಣೆ ಪ್ರಚಾರದಲ್ಲಿ ಸಂವಿಧಾನ ಬದಲಾವಣೆ, ಸಮಾಜ ಒಡೆಯುವ ಸುಳ್ಳುಗಳ ಮೂಲಕ ಪ್ರಚಾರ ನಡೆಸಿತು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಜಿ.ಚಂದ್ರಮೌಳಿ ಕೋಡೂರು ಮಾತನಾಡಿ, ಲೋಕಸಭೆ ಮತ್ತು ಪರಿಷತ್ ಸೋಲಿಗೆ ಗೋಪಾಲಕೃಷ್ಣ ಬೇಳೂರು ಅವರನ್ನು ಗುರಿಯಾಗಿಸಿ ಬಿಜೆಪಿ ಟೀಕಿಸುತ್ತಿರುವುದು ಸರಿಯಲ್ಲ. ಬಿಜೆಪಿ ಸದಾ ಅಪಪ್ರಚಾರ ನಡೆಸುತ್ತದೆ. ಸ್ಥಳೀಯ ನಾಯಕರಿಗೆ ಮತ ಕೇಳುವ ಸ್ಥೈರ್ಯ ಇಲ್ಲದೆ ನರೇಂದ್ರ ಮೋದಿ ಅವರ ಮುಖ ತೋರಿಸಿ ಮತ ಕೇಳಿದ್ದಾರೆ ಎಂದು ಆರೋಪಿಸಿದರು.
ಶಾಸಕ ಬೇಳೂರು ಒಂದು ವರ್ಷದಲ್ಲಿ ಸಾಗರ ಕ್ಷೇತ್ರಕ್ಕೆ 12 ಕೋಟಿ ರೂ.ಗೂ ಹೆಚ್ಚು ಅನುದಾನ ತಂದಿದ್ದಾರೆ. ಕೆರೆ, ರಸ್ತೆ, ಶಾಲಾ ಕಟ್ಟಡ, ಅಂಗನವಾಡಿ ಅಭಿವೃದ್ಧಿಗೆ ಒತ್ತು ನೀಡಿದ್ದಾರೆ. ಶಾಸಕರು ದ್ವೇಷದ ರಾಜಕಾರಣ ಮಾಡುತ್ತಾರೆ ಎಂಬುದು ಸುಳ್ಳು. ಎಲ್ಲರನ್ನೂ ಜತೆಗೆ ಕರೆದುಕೊಂಡು ಜನರ ಮಧ್ಯೆಯೇ ಇದ್ದು ಕೆಲಸ ಮಾಡುತ್ತಾರೆ. ಬಿಜೆಪಿಯವರ ಸರ್ಟಿಫಿಕೇಟ್ ಅಗತ್ಯವಿಲ್ಲ ಎಂದರು.
ಪ್ರಮುಖರಾದ ಗುರುರಾಜ್, ಅಶೋಕ ಗೌಡ, ಪ್ರಭಾಕರ ರಾವ್, ಬಿ.ಜಿ.ನಾಗರಾಜ್, ಎಂ.ಪಿ.ಸುರೇಶ್, ಕರುಣಾಕರ ಶೆಟ್ಟಿ, ಅಶ್ವಿನಿಕುಮಾರ್, ಉಬೇದುಲ್ಲಾ, ಗುರು ಜಯನಗರ, ಚನ್ನಬಸಪ್ಪ, ಚಂದ್ರಮೂರ್ತಿ, ವೇದಾಂತಪ್ಪ ಗೌಡ, ಇಕ್ಬಾಲ್, ಭದ್ರಪ್ಪ ಗೌಡ ಇದ್ದರು.