ಬೋಗಸ್​ ದಾಖಲೆ ಸೃಷ್ಟಿಸಿದರೆ ಕ್ರಮ

klr mla manjunath
ಕೊತ್ತೂರು ಜಿ.ಮಂಜುನಾಥ್​
Published on

ಕೋಲಾರ: ಬೋಗಸ್​ ದಾಖಲೆ ಸೃಷ್ಟಿಸಿಕೊಂಡು ಸರ್ಕಾರಿ ಭೂಮಿ ಸ್ವಾಧಿನ ಮಾಡಿಕೊಂಡರೆ ಸುಮ್ಮನಿರುವುದಿಲ್ಲ. ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಕೊತ್ತೂರು ಜಿ.ಮಂಜುನಾಥ್​ ಹೇಳಿದರು.

ನಗರದ ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಗುಂಡುತೋಪು, ಕೆರೆ, ಕುಂಟೆ, ಸ್ಮಶಾನ ಜಮೀನು ರಕ್ಷಣೆ ಮಾಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.

ಕ್ಷೇತ್ರದ ವ್ಯಾಪ್ತಿಯಲ್ಲಿ ಸರ್ಕಾರಿ ಜಮೀನು ಮಂಜೂರಾಗಿ ಖಾತೆಗಳಾಗಿರುವ ಜಮೀನುಗಳ ಪೋಡಿ ಆಂದೋಲನ ಹಮ್ಮಿಕೊಳ್ಳಲಾಗಿದೆ. ಈಗಾಗಲೇ ಪೋಡಿ ಆಂದೋಲನ ಬಿರುಸಿನಿಂದ ಸಾಗಿದೆ. ಕನಿಷ್ಠ ಎರಡು ತಿಂಗಳೊಳಗೆ ರೈತರಿಗೆ ದಾಖಲೆ ಕೊಡಿಸಲಾಗುವುದು ಎಂದರು.

ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿರುವ ರೈತರಿಗೆ ಸಾಗುವಳಿ ಚೀಟಿ ನೀಡಿ ಖಾತೆ ಮಾಡಿರುವ ಜಮೀನಿಗೆ ಹದ್ದುಬಸ್ತು ಗುರುತಿಸುವ ಕಾರ್ಯ ನಡೆಯುತ್ತಿದೆ. ರಾಜ್ಯದಲ್ಲೇ ಕೋಲಾರ ವಿಧಾನಸಭಾ ಕ್ಷೇತ್ರ ಪೋಡಿ ಆಂದೋಲನದಲ್ಲಿ ಪ್ರಥಮ ಸ್ಥಾನ ಪಡೆದುಕೊಳ್ಳಲಿದೆ. ಪಿ ನಂಬರ್​ ಇರುವ ಜಮೀನುಗಳಿಗೆ ಪ್ರತ್ಯೇಕ ಪಹಣಿ ನೀಡುವ ಉದ್ದೇಶದಿಂದ ಆಂದೋಲನ ಪ್ರಮುಖವಾಗಿದೆ ಎಂದರು.

ಕ್ಷೇತ್ರದಲ್ಲಿ 2016-2017ನೇ ಸಾಲಿನಲ್ಲಿ ನೀಡಲಾಗಿರುವ ಸಾಗುವಳಿ ಚೀಟಿಗಳಲ್ಲಿ ಅವ್ಯವಹಾರವಾಗಿದೆ ಎನ್ನುವ ಆರೋಪದ ಮೇರೆಗೆ ಎಸ್​ಐಟಿ ಅಧಿಕಾರಿಗಳ ತಂಡ ಪರಿಶೀಲನೆ ನಡೆಸಿದೆ. ಸಾಗುವಳಿ ನೀಡಿರುವ ಹಲವು ರೈತರ ಕಡತ ತೆಗೆದುಕೊಂಡು ಹೋಗಿದ್ದು, ಈ ಪೈಕಿ ಯಾವುದು ಅಕ್ರಮವಾಗಿದೆಯೊ ಅದನ್ನು ಬಿಟ್ಟು ಉಳಿದ ಕಡತಗಳನ್ನು ವಾಪಸ್​ ನೀಡುವಂತೆ ತಹಸೀಲ್ದಾರ್​ ಹಾಗೂ ಉಪವಿಭಾಗಾಧಿಕಾರಿಗಳು ಪತ್ರ ಮುಖೇನ ಎಸ್​ಐಟಿಗೆ ಕೋರಿದ್ದಾರೆೆ. ಶೀಘ್ರದಲ್ಲೇ ಅರ್ಹ ರೈತರಿಗೆ ಪಹಣಿ ನೀಡಲಾಗುವುದು ಎಂದು ಭರವಸೆ ನೀಡಿದರು.

ಆಶ್ರಯ ಯೋಜನೆಯಲ್ಲಿ ಶೀಘ್ರದಲ್ಲೇ ನಿವೇಶನ ರಹಿತರನ್ನು ಗುರುತಿಸಿ ನಿವೇಶನ ನೀಡುವ ಪ್ರಯತ್ನ ನಡೆಯುತ್ತಿದೆ. ತಾಲೂಕಿನ ಅರಹಳ್ಳಿ ಬಳಿ ಈಗಾಗಲೇ ಜಮೀನನ್ನು ಗುರುತಿಸಲಾಗಿದೆ. ಅದಕ್ಕೂ ಮೊದಲು ಆಶ್ರಯ ಸಮಿತಿ ರಚನೆಯಾಗಬೇಕಿದೆ ಎಂದು ತಿಳಿಸಿದರು.

ಕೂಡಾ ಬಡಾವಣೆಯಲ್ಲಿ 270ಕ್ಕೂ ಹೆಚ್ಚು ಖಾಲಿ ನಿವೇಶಗಳಿದ್ದು, ಹರಾಜು ಮಾಡಿ ಅದರಿಂದ ಬರುವ ಹಣದಿಂದ ಜಮೀನು ಖರೀದಿ ಮಾಡಿ ಹೊಸ ಬಡಾವಣೆ ನಿರ್ಮಾಣ ಮಾಡಲಾಗುವುದು. ಈ ಬಗ್ಗೆ ಸರ್ಕಾರದ ಅನುಮತಿ ಕೋರಿ ಪತ್ರ ಬರೆಯಲಾಗಿದೆ. ಅನುಮತಿ ಸಿಕ್ಕ ಕೂಡಲೇ ಕೂಡಾ ಬಡಾವಣೆ ನಿಮಾರ್ಣ ಮಾಡಲಾಗುವುದು ಎಂದರು.

ಕೋಟ್​...

ಮುಂದಿನ ದಿನಗಳಲ್ಲಿ ವೇಮಗಲ್​ ತಾಲೂಕು ಆಗುವ ಸಾಧ್ಯತೆ ಇದೆ. ಆ ಭಾಗದಲ್ಲಿರುವ ಗುಂಡು ತೋಪು, ಕೆರೆ, ಕುಂಟೆ, ಸರ್ಕಾರಿ ಜಮೀನುಗಳನ್ನು ಉಳಿಸುವಂತೆ ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ.

> ಕೊತ್ತೂರು ಜಿ.ಮಂಜುನಾಥ್​, ಶಾಸಕ, ಕೋಲಾರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net