

ಹೊಳೆಹೊನ್ನೂರು: ಅರಬಿಳಚಿಯಲ್ಲಿ ನಿರ್ಮಾಣವಾಗುತ್ತಿರುವ ಹೆರಿಗೆ ಆಸ್ಪತ್ರೆಗೆ ಬುಧವಾರ ಶಾಸಕಿ ಶಾರದಾ ಪೂರ‌್ಯಾನಾಯ್ಕಾ ಹಾಗೂ ಮಾಜಿ ಶಾಸಕ ಅಶೋಕ ನಾಯ್ಕ ಪ್ರತ್ಯೇಕವಾಗಿ ಭೇಟಿ ನೀಡಿ ಪರಿಶೀಲಿಸಿ ಗ್ರಾಮಸ್ಥರೊಂದಿಗೆ ಸಭೆ ನಡೆಸಿದರು.
ವಿಜಯವಾಣಿ ಅ.23ರ ಸಂಚಿಕೆಯಲ್ಲಿ ಕಾಮಗಾರಿ ಕಳಪೆಯಾಗಿರುವ ಬಗ್ಗೆ ವರದಿ ಪ್ರಕಟವಾಗಿತ್ತು. ಇದಕ್ಕೆ ಸ್ಪಂದಿಸಿರುವ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಆಸ್ಪತ್ರೆ ಕಟ್ಟಡಕ್ಕೆ ಭೇಟಿ ನೀಡಿದ್ದರು. ಶಾರದಾ ಪೂರ‌್ಯಾನಾಯ್ಕಾ ಸ್ವತಃ ಕಟ್ಟಡದ ಗೋಡೆ ಕೆರೆದು ಪರೀಕ್ಷಿಸಿದರು. ಹೊಸ ಆಸ್ಪತ್ರೆ ಒಳಗಡೆ ಗ್ರಾಮಸ್ಥರು ಹೋಗದಂತೆ ಅಡ್ಡವಾಗಿ ತಗಡಿನ ಶೀಟ್ ಅಳವಡಿಸಿದ್ದನ್ನು ತೆರವುಗೊಳಿಸಿದರು.
ಗುತ್ತಿಗೆದಾರನನ್ನು ಕಪ್ಪು ಪಟ್ಟಿಗೆ ಸೇರಿಸಬೇಕು. ಇಂಜಿನಿಯರ್ ಅವರನ್ನು ಕೂಡಲೇ ಅಮಾನತು ಮಾಡಬೇಕೆಂದು ಗ್ರಾಮಸ್ಥರು ಪಟ್ಟುಹಿಡಿದರು. ಸ್ಥಳದಲ್ಲಿದ್ದ ಆರೋಗ್ಯ ಇಲಾಖೆ ಇಂಜಿನಿಯರ್ ಹರೀಶ ಅವರನ್ನು ತರಾಟೆಗೆ ತೆಗೆದುಕೊಂಡರು. ಕಟ್ಟಡದ ಗಿಲಾವ್ ಅನ್ನು ಸಂಪೂರ್ಣ ಕಿತ್ತು ಹೊಸದಾಗಿ ಮಾಡಬೇಕು. ಈಗ ಅಳವಡಿಸಿರುವ ಕದಗಳನ್ನು ಬದಲಾವಣೆ ಮಾಡಬೇಕು. ಆಸ್ಪತ್ರೆ ಛಾವಣಿ ಸೋರುತ್ತಿದ್ದು, ಮೇಲೆ ಶೀಟ್‌ಗಳನ್ನು ಅಳವಡಿಸಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಇಂಜಿನಿಯರ್, ಹೊಸದಾಗಿ ಗಿಲಾವ್, ಬಾಗಿಲುಗಳನ್ನು ಬದಲಾಯಿಸುವುದಕ್ಕೆ ಒಪ್ಪಿದರು. ಆದರೆ ತಾರಸಿಗೆ ತಗಡು ಅಳವಡಿಸುವುದು ಸಾಧ್ಯವಿಲ್ಲ ಎಂದರು.
ಇಂಜಿನಿಯರ್ ಮಾತಿನಿಂದ ಮತ್ತಷ್ಟು ಸಿಡ್ಡಿಗೆದ್ದ ಗ್ರಾಮಸ್ಥರು ನೀವು ಮಾಡಿರುವ ಕಳಪೆ ಕೆಲಸಕ್ಕೆ ದಂಡದ ರೂಪವಾಗಿ ಗುತ್ತಿಗೆದಾರ ಮತ್ತು ನೀವು ಸೇರಿ ಹಾಕಿಸಿಕೊಡಿ ಎಂದು ಮಾತಿನ ಚಕಮಕಿ ನಡೆಸಿದರು. ಗ್ರಾಮಸ್ಥರನ್ನು ಸಮಾಧಾನ ಪಡಿಸಿ ಮಾತನಾಡಿದ ಶಾಸಕಿ ಶಾರದಾ ಪೂರ‌್ಯಾನಾಯ್ಕಾ, ದೀಪಾವಳಿ ನಂತರ ಗ್ರಾಮಸ್ಥರ ಸಹಭಾಗಿತ್ವದಲ್ಲಿ ಸಭೆ ನಡೆಸಿ ಸಮಸ್ಯೆಯನ್ನು ಶಾಶ್ವತವಾಗಿ ಪರಿಹಾರ ಮಾಡುವುದಾಗಿ ಭರವಸೆ ನೀಡಿದರು.
ವೈದ್ಯಾಧಿಕಾರಿ ಜಗದೀಶ್, ಮುಖಂಡರಾದ ರಾಧಾಕೃಷ್ಣ, ಕಾಂತರಾಜ್, ಮಂಜುನಾಥ್, ಬಸವರಾಜ್, ಕಿರಣ್‌ಕುಮಾರ್, ಯೋಗೀಶ್, ನಿರಂಜನ ಪಾಟೀಲ್, ಪ್ರಶಾಂತ ಇತರರಿದ್ದರು.