

ರಾಣೆಬೆನ್ನೂರ: ರಾಣೆಬೆನ್ನೂರ ಸೇರಿ ಸುತ್ತಲಿನ ಪ್ರದೇಶದಲ್ಲಿ ನಡೆಯುತ್ತಿರುವ ಅಕ್ರಮ ಕಲ್ಲು ಗಣಿಗಾರಿಕೆ ಹಾಗೂ ಇತರ ಅಕ್ರಮ ಚಟುವಟಿಕೆಗಳನ್ನು ತಡೆಯುವ ನಿಟ್ಟಿನಲ್ಲಿ ಈ ಬಾರಿಯ ಜಿಪಂ ಕೆಡಿಪಿ ಸಭೆಯಲ್ಲಿ ಅಧಿಕಾರಿಗಳಿಂದ ಮಾಹಿತಿ ಪಡೆದು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ತಿಳಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ರಾಣೆಬೆನ್ನೂರ ತಾಲೂಕಿನ ಅಭಯಾರಣ್ಯ ಪ್ರದೇಶದಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ನಡೆಯುತ್ತಿರುವ ಕುರಿತು ಪ್ರತಿಕ್ರಿಯಿಸಿದ ಅವರು, "ವಿಜಯವಾಣಿ' ಪತ್ರಿಕೆಯಲ್ಲಿ ಬಂದಿರುವ ಸುದ್ದಿಯನ್ನು ನಾನು ಗಮನಿಸಿದ್ದೇನೆ. ಈ ಬಗ್ಗೆ ಚಚಿರ್ಸಲು ಜಿಪಂ ಕೆಡಿಪಿ ಸಭೆಯಲ್ಲಿ ವಿಷಯ ನಮೂದು ಮಾಡುವಂತೆ ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಅಂದು ಸಭೆಯಲ್ಲಿ ಅಧಿಕಾರಿಗಳಿಂದ ಮಾಹಿತಿ ಪಡೆದು ಅಕ್ರಮ ಕಂಡು ಬಂದರೆ ಕೂಡಲೇ ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಬಿಸಿಎಂ ಇಲಾಖೆಯಲ್ಲಿ ಆಹಾರ ಬಿಲ್ ಹಾಗೂ ಇತರ ಬಿಲ್ಗಳನ್ನು ಸರ್ಕಾರದ ರಜಾ ದಿನಗಳಲ್ಲಿ ಮಂಜೂರು ಮಾಡಿರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಅಧಿಕಾರಿಗಳು ಭ್ರಷ್ಟಾಚಾರ ಮಾಡಬೇಕು ಎಂದರೆ ರಜಾ ದಿನ ಮಾತ್ರವಲ್ಲ, ನಿತ್ಯವೂ ಮಾಡುತ್ತಾರೆ. ಬಿಸಿಎಂ ಇಲಾಖೆಯಲ್ಲಿ ಆಗಿರುವ ಅಕ್ರಮ ಬಿಲ್ ಪಾಸ್ ಕುರಿತು ಜಿಪಂ ಸಿಇಒ ಅವರಿಂದ ಮಾಹಿತಿ ಪಡೆದು ತನಿಖೆ ಮಾಡಿಸಲಾಗುವುದು ಎಂದರು.
ರಾಣೆಬೆನ್ನೂರ ಡಿವೈಎಸ್ಪಿ ವಿರುದ್ಧ ಲೋಕಾಯುಕ್ತ ಪ್ರಕರಣ ದಾಖಲಾಗಿದ್ದರೂ ಕರ್ತವ್ಯದಲ್ಲಿ ಮುಂದುವರಿದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಈ ಬಗ್ಗೆ ಎಸ್ಪಿ ಅವರಿಗೆ ಮಾಹಿತಿ ಕೇಳುತ್ತೇನೆ. ಲೋಕಾಯುಕ್ತ ಪ್ರಕರಣ ದಾಖಲಾದರೆ ಯಾವ ಕಾರಣಕ್ಕೂ ಅವರು ಅದೇ ಹುದ್ದೆಯಲ್ಲಿ ಮುಂದುವರಿಯಬಾರದು. ಈ ಕುರಿತು ಕ್ರಮ ಕೈಗೊಳ್ಳಲಾಗುವುದು ಎಂದರು.
ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರು ಪೂರೈಸುವ ಉದ್ದೇಶದಿಂದ ತಡಸ, ಆಣೂರ, ಹಂಸಬಾವಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಜಾರಿಗೆ ಶ್ರೀದಲ್ಲಿಯೆ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ, ಜಿಪಂ ಸಿಇಒ ರುಚಿ ಬಿಂದಾಲ್, ಎಸ್ಪಿ ಅಂಶುಕುಮಾರ, ಹಾವೆಮುಲ್ ಅಧ್ಯಕ್ಷ ಮಂಜನಗೌಡ ಪಾಟೀಲ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.