

ಬೆಂಗಳೂರು: ಕೃಷಿ ಇಲಾಖೆಯಲ್ಲಿ 1000 ಹುದ್ದೆ ಭರ್ತಿಗೆ ಕ್ರಮ ಕೈಗೊಳ್ಳಲಾಗಿದೆ. ಆರ್ಥಿಕ ಇಲಾಖೆ ಅನುಮೋದನೆ ಪಡೆದು ಈ ವರ್ಷ ನೇಮಕ ಪ್ರಕ್ರಿಯೆ ಕೈಗೆತ್ತಿಕೊಳ್ಳಲಾಗುವುದು ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.
ವಿಧಾನಸೌಧದಲ್ಲಿ ಕರ್ನಾಟಕ ರಾಜ್ಯ ಬೀಜ ನಿಗಮದಲ್ಲಿ 24 ವಿವಿಧ ಹುದ್ದೆಗೆ ನೇಮಕಗೊಂಡವರಿಗೆ ನೇಮಕಾತಿ ಆದೇಶ ನೀಡಿ ನಂತರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದರು.
ಖಾಲಿ ಇರುವ ಸುಮಾರು ಎರಡು ಸಾವಿರ ಹುದ್ದೆ ಭರ್ತಿಗೆ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಮೊದಲ ಹಂತಗಳಲ್ಲಿ ಕನಿಷ್ಟ 1 ಸಾವಿರ ಹುದ್ದೆ ಭರ್ತಿ ಮಾಡಲಾಗುವುದು ಎಂದರು. ಹಿಂದಿನ ಸರ್ಕಾರದಲ್ಲಿ ನೇಮಕಾತಿ ನಡೆಯಲಿಲ್ಲ. ರಾಜ್ಯದಲ್ಲಿ ಹೊಸ ಸರ್ಕಾರ ಬಂದ ನಾಲ್ಕೇ ತಿಂಗಳಲ್ಲಿ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ ಎಂದು ಹೇಳಿದರು.
ಬಿತ್ತನೆ ಬೀಜ, ರಸಗೊಬ್ಬರಕ್ಕೆ ಎಲ್ಲೂ ಕೊರತೆ ಆಗದಂತೆ ನೋಡಿಕೊಂಡಿದ್ದೇವೆ. ಕೃಷಿ ಇಲಾಖೆ ಜಾಗೃತ ಕೋಶ ಚುರುಕಾಗಿದೆ. ಹಾಗಾಗಿ ಈ ವರ್ಷ ನಕಲಿ ಬೀಜ, ರಸಗೊಬ್ಬರ ಮಾರಾಟಕ್ಕೆ ಕಡಿವಾಣ ಹಾಕಿದ್ದೇವೆ. ರಾಜ್ಯದ ವಿವಿದೆಡೆ ದಾಳಿ ನಡೆಸಿ ಐದು ಕೋಟಿಗೂ ಅಧಿಕ ಮೌಲ್ಯದ ಕಳಪೆ ಬಿತ್ತನೆ ಬೀಜ, ರಸಗೊಬ್ಬರ, ಕೀಟನಾಶಕ ಜಪ್ತಿ ಮಾಡಲಾಗಿದೆ. 148 ಪ್ರಕರಣ ದಾಖಲಿಸಿ 4 ಬಿತ್ತನೆ ಬೀಜ, 8 ರಸಗೊಬ್ಬರ, 3 ಪೀಡೆ ನಾಶಕ ಪರವಾನಗಿ ಅಮಾನತ್ತು ಮಾಡಲಾಗಿದೆ. ಹಿರೇಹಳ್ಳಿ ಕೈಗಾರಿಕಾ ಪ್ರದೇಶದ ಖಾಸಗಿ ಮಳಿಗೆಯಲ್ಲಿ ದಾಸ್ತಾನಿರಿಸಿದ್ದ 9 ಲಕ್ಷ ರೂ. ಮೌಲ್ಯದ 2650 ಕೆಜಿ ನಿಷೇಧಿತ ಪೊರೇಟ್, 257 ರಸಗೊಬ್ಬರ ಜಪ್ತಿ ಮಾಡಲಾಗಿದೆ. ಭದ್ರಾವತಿಯಲ್ಲಿ 24 ಟನ್ ಯೂರಿಯಾ ರಸಗೊಬ್ಬರ ಜಪ್ತಿ ಮಾಡಲಾಗಿದೆ ಎಂದು ತಿಳಿಸಿದರು.
265 ಮಂದಿ ಕೃಷಿ ಅಧಿಕಾರಿಗಳಿಗೆ ಸಹಾಯಕ ಕೃಷಿ ಅಧಿಕಾರಿಯಿಂದ ಕೃಷಿ ಅಧಿಕಾರಿಗಳಾಗಿ ಮುಂಬಡ್ತಿ ನೀಡಿದ್ದೇವೆ.360 ಸಹಾಯಕ ಕೃಷಿ ಅಧಿಕಾರಿಗಳ ನೇಮಕಾತಿ ಕೆಪಿಎಸ್‌ಸಿ ನೇಮಕಾತಿ ಪ್ರಕ್ರಿಯೆ ಚಾಲನೆಯಲ್ಲಿದೆ ಎಂದು ಹೇಳಿದರು.
ನಮ್ಮ ಸರ್ಕಾರ ಕೇವಲ ಗ್ಯಾರೆಂಟಿಗೆ ಸೀಮಿತ ಆಗಿದೆ ಎಂದು ವಿಪಕ್ಷಗಳು ಟೀಕೆ ಮಾಡುತ್ತಿವೆ. ನಾವು ಗ್ಯಾರೆಂಟಿ ಅಷ್ಟೆ ಅಲ್ಲ, ಬೇರೆ ಬೇರೆ ಕೆಲಸಗಳಿಗೂ ಆದ್ಯತೆ ಕೊಡುತ್ತಿದ್ದೇವೆ. ಹಿಂದಿನ ಕೃಷಿ ಸಚಿವವರು ಬರ ಪರಿಹಾರ ಕೊಡುತ್ತಿಲ್ಲ ಎಂದು ಹೇಳಿದ್ದಾರೆ. ನೆಟೆ ರೋಗಕ್ಕೆ ಸಂಬಂಧಿಸಿದ 224 ಕೊಟಿ ರೂ. ಪರಿಹಾರ ಅವರೇಕೆ ಕೊಡಲಿಲ್ಲ ಎಂದು ತಿರುಗೇಟು ನೀಡಿದರು.
ಕಳೆದ ವರ್ಷ ಈ ಅವಧಿಯಲ್ಲಿ 113 ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಬಾರಿ 22 ಜನ ರೈತರು ಮಾತ್ರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಮ್ಮ ಗ್ಯಾರೆಂಟಿಗಳಿಂದ ರೈತರ ಆತ್ಮಹತ್ಯೆ ಪ್ರಮಾಣ ಕಡಿಮೆಯಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಸಚಿವರು ಕೃಷಿ ಇಲಾಖೆಯಲ್ಲಿ 100 ದಿನಗಳ ಅವಧಿಯಲ್ಲಿ ಕೈಗೊಂಡ ಸುಧಾರಣಾ ಕ್ರಮಗಳ ಕುರಿತ ಕಿರು ಹೊತ್ತಗೆ ಬಿಡುಗಡೆ ಮಾಡಿದರು.
ಕೃಷಿ ಇಲಾಖೆ ಕಾರ್ಯದರ್ಶಿ ಅನ್ಬುಕುಮಾರ್, ಆಯುಕ್ತ ವೈ.ಎಸ್.ಪಾಟೀಲ್, ನಿರ್ದೇಶಕ ಡಾ.ಜಿ.ಟಿ ಪುತ್ರ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.