ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪ್ಲಾಸ್ಟಿಕ್ ನಿರ್ಮೂಲನೆ ಕ್ರಮ

16 nrp 1.
ಎನ್.ಆರ್.ಪುರ ತಾಪಂ ಸಾಮರ್ಥ್ಯಸೌಧದಲ್ಲಿ ಆಡಳಿತಾಧಿಕಾರಿ ಎಲ್.ನಂದೀಶ್ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ನಡೆಯಿತು. ಇಒ ಎಚ್.ಡಿ.ನವೀನ್‌ಕುಮಾರ್ ಇದ್ದರು.
Published on

ಎನ್.ಆರ್.ಪುರ: ಗ್ರಾಮ ಪಂಚಾಯಿತಿ ಮಟ್ಟದಿಂದ ಪ್ಲಾಸ್ಟಿಕ್ ನಿರ್ಮೂಲನೆ ಕೈಗೊಳ್ಳಬೇಕು ಎಂದು ತಾಲೂಕು ಪಂಚಾಯಿತಿ ಆಡಳಿತಾಧಿಕಾರಿ ಎಲ್.ನಂದೀಶ್ ತಾಲೂಕಿನ ಎಲ್ಲ ಗ್ರಾಪಂ ಪಿಡಿಒಗಳಿಗೆ ಸೂಚಿಸಿದರು.
ತಾಪಂ. ಸಾಮರ್ಥ್ಯ ಸೌಧದಲ್ಲಿ ಶುಕ್ರವಾರ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿ, ಪ್ಲಾಸ್ಟಿಕ್ ಬಳಕೆ ವಿಷಕಾರಿಯಾಗಿದ್ದು, ಗ್ರಾಪಂಮಟ್ಟದಲ್ಲೇ ಇದನ್ನು ನಿವಾರಿಸಬೇಕು. ತಾಲೂಕಿನಲ್ಲಿ ಮಳೆ ಅಭಾವ ಉಂಟಾಗಿರುವುದರಿಂದ ಮುಂದೆ ಬರದ ಸ್ಥಿತಿ ಎದುರಾಗಲಿದೆ. ಕುಡಿಯುವ ನೀರಿನ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಬೇಕು. ಇಲ್ಲವಾದಲ್ಲಿ ಮುಂದೆ ಬರ ಎದುರಿಸಲು ಕಷ್ಟವಾಗುತ್ತದೆ ಎಂದರು.
ಪಶು ವೈದ್ಯ ಇಲಾಖೆ ಪ್ರಭಾರ ಸಹಾಯಕ ನಿರ್ದೇಶಕ ಡಾ.ರಾಕೇಶ್ ಮಾತನಾಡಿ, ತಾಲೂಕಿನಲ್ಲಿ ಎರಡು ಗೋ ಶಾಲೆಗಳಿದ್ದು, ಬಾಳೆಹೊನ್ನೂರಿನ ರಂಭಾಪುರಿ ಪೀಠದ ಗೋ ಶಾಲೆಗೆ ಸರ್ಕಾರದಿಂದ ಅನುದಾನ ಬರುತ್ತಿದೆ. ಬಸ್ತಿಮಠ ಗೋ ಶಾಲೆಗೆ ಮಾತ್ರ ಮಠ ಹಾಗೂ ದಾನಿಗಳಿಂದ ನಡೆಯುತ್ತಿದೆ ಎಂದರು.
ಕುರಿ,ಮೇಕೆಗಳಿಗೆ ಕರುಳು ಬೇನೆ ವಿರುದ್ಧ ಲಸಿಕೆ ಹಾಕಲು 800 ಗುರಿಯಿದ್ದು, ಅದರಲ್ಲಿ 560 ಪ್ರಗತಿ ಸಾಧಿಸಲಾಗಿದೆ. ಬಾಳೆಹೊನ್ನೂರಿನಲ್ಲಿ ಜಾನುವಾರು ಶಸ ಚಿಕಿತ್ಸಕರು ಲಭ್ಯವಿದ್ದು ಅವರಿಂದ ನಾಯಿಗಳ ಸಂತಾಣ ಹರಣ ಮಾಡಿಸುವ ಬಗ್ಗೆ ಕ್ರಮವಹಿಸಲಾಗುವುದು. ಈ ಬಗ್ಗೆ ಎಲ್ಲ ಪಿಡಿಒಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು. ಇದಕ್ಕೆ ಬೇಕಾದ ಅನುದಾನಕ್ಕಾಗಿ ವಿವಿಧ ಸಂಘ, ಸಂಸ್ಥೆಗಳಿಂದ ಸಹಕಾರ ಕೋರಲಾಗಿದೆ ಎಂದರು.
ತಾಲೂಕಿನಲ್ಲಿ 2 ಮುಖ್ಯಪಶು ಆಸ್ಪತ್ರೆ, 4 ಪಶು ಚಿಕಿತ್ಸಾಲಯಗಳಿವೆ. ತಾಲೂಕಿನಲ್ಲಿ ಒಟ್ಟು 9 ವೈದ್ಯರ ಹುದ್ದೆ ಇದ್ದು, ಕೇವಲ 3 ಜನ ವೈದ್ಯರಿದ್ದಾರೆ. ಕಚೇರಿಯಲ್ಲಿ ಸಿಬ್ಬಂಗಳಿಲ್ಲದೆ ಕೆಲಸ ಕಾರ್ಯಗಳಿಗೆ ತೊಡಕಾಗುತ್ತಿದೆ. ಮೊಬೈಲ್ ತುರ್ತು ವಾಹನವಿದ್ದು, ಇದರಲ್ಲಿ ಒಬ್ಬ ವೈದ್ಯರು, ಅಟೆಂಡರ್, ಸಹಾಯಕರು, ಚಾಲಕರಿದ್ದಾರೆ. ಬೆಳಗ್ಗೆ 9 ರಿಂದ ಸಂಜೆ 5 ಗಂಟೆವರೆಗೆ ಕಾರ್ಯನಿರ್ವಹಿಸಲಿದೆ. ತುರ್ತು ಸಂದರ್ಭದಲ್ಲಿ 1962ಗೆ ಕರೆ ಮಾಡಿದರೆ ತುರ್ತು ವಾಹನ ಸ್ಥಳಕ್ಕೆ ಹೋಗಿ ಜಾನುವಾರಿಗೆ ಚಿಕಿತ್ಸೆ ನೀಡಲಾಗುವುದು ಎಂದು ಸಭೆಗೆ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net