ಸಮೀಕ್ಷೆ ವೇಳೆ ಲೋಪ ಎಸಗಿದರೆ ಕ್ರಮ

klr AC,webp
Published on

ಕೋಲಾರ: ಒಳ ಮೀಸಲಾತಿ ಸಮೀಕ್ಷೆ ಕಾರ್ಯಕ್ಕೆ ನಿಯೋಜನೆಗೊಂಡಿರುವ ಸಿಬ್ಬಂದಿ ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸಬೇಕು, ಲೋಪ ಎಸಗಿದರೆ ಶಿಸ್ತು ಕ್ರಮ ಜರುಗಿಸಬೇಕಾಗುತ್ತದೆ ಎಂದು ವಿಭಾಗಾಧಿಕಾರಿ ಡಾ.ಮೈತ್ರಿ ಎಚ್​.ಪಿ.ಎಸ್​ ಹೇಳಿದರು.

ಒಳ ಮೀಸಲಾತಿ ವರ್ಗೀಕರಣಕ್ಕೆ ನ್ಯಾಯಮೂರ್ತಿ ಎಚ್​.ಎನ್​. ನಾಗಮೋಹನ್​ದಾಸ್​ ಆಯೋಗದ ಸೂಚನೆಯಂತೆ ಸಮೀಕ್ಷೆ ನಡೆಸುವ ಕಾರ್ಯಕ್ಕೆ ನಗರದ ಸರ್ಕಾರಿ ಮಹಿಳಾ ಕಾಲೇಜು ಆವರಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ತಾಲೂಕುಮಟ್ಟದ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.

ಯಾವುದೇ ಸಮಸ್ಯೆಗಳಿಗೆ ಎಡೆ ಮಾಡದಂತೆ ಸಮೀಕ್ಷೆ ನಡೆಸಬೇಕು. ತಾಲೂಕುಗಳಲ್ಲಿ ಪರಿಶಿಷ್ಟ ಜಾತಿ ಜನಸಂಖ್ಯೆ ಹೆಚ್ಚಿದ್ದು ಎಲ್ಲ ಮನೆಗಳಿಗೂ ಭೇಟಿ ನೀಡಬೇಕು ಎಂದು ತಿಳಿಸಿದರು.

ಪರಿಶಿಷ್ಟ ಜಾತಿ ಒಳ ಮೀಸಲಾತಿ ವರ್ಗೀಕರಣ ಕುರಿತಾದ ಸಮೀಕ್ಷೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಪ್ರತಿ ಮನೆಗೂ ತೆರಳಿ ನಿಗದಿತ ಅವಧಿಯೊಳಗೆ ಸಮೀಕ್ಷೆ ಪೂರ್ಣಗೊಳಿಸಬೇಕು. ಕೋಲಾರ ತಾಲೂಕು ಒಳಮೀಸಲಾತಿ ಸಮೀಕ್ಷೆಯಲ್ಲಿ ವೈಜ್ಞಾನಿಕ ವರದಿ ನೀಡಬೇಕು ಎಂದು ಸಲಹೆ ನೀಡಿದರು.

ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸ್ಥಿತಿಗತಿಗಳನ್ನು ವಿಶ್ಲೇಷಿಸಿ ಒಳ ಮೀಸಲಾತಿ ವರ್ಗೀಕರಣ ಮಾಡಿ ಸರ್ಕಾರಕ್ಕೆ ಶಿಫಾರಸು ಮಾಡುವ ಜವಾಬ್ದಾರಿ ಆಯೋಗ ಹೊಂದಿದೆ. ಈ ಉದ್ದೇಶಕ್ಕಾಗಿ ಸರ್ಕಾರ ಪರಿಶಿಷ್ಟ ಜಾತಿಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಸಮಾಜ ಕಲ್ಯಾಣ ಇಲಾಖೆಯ ಮೂಲಕ ಕೈಗೊಳ್ಳುತ್ತಿದೆ ಎಂದರು.

ನಿಗದಿತ ನಮೂನೆಯಲ್ಲಿ ಕೇಳಲಾದ ಮಾಹಿತಿ ಸಂಗ್ರಹಿಸಬೇಕು. ಗಂಭೀರವಾಗಿ ಈ ಕಾರ್ಯ ಕೈಗೊಂಡು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಬೇಕು. ಇನ್ನೊಂದು ಹಂತದ ತರಬೇತಿ ಹಾಗೂ ಮಾಕ್​ ಟ್ರಯಲ್​ ಇದ್ದು, ಅಲ್ಲಿ ಸಮೀಕ್ಷೆದಾರರು ಯಾವುದೇ ರೀತಿಯ ಸಂದೇಹಗಳಿದ್ದರೆ ಬಗೆಹರಿಸಿಕೊಳ್ಳಬಹುದು ಎಂದು ತಿಳಿಸಿದರು.

ಜಿಲ್ಲಾ ತರಬೇತುದಾರ ನಾರಾಯಣಸ್ವಾಮಿ ಮಾತನಾಡಿ, ಟ್ರೇನರ್​ಗಳು ಸಮೀಕ್ಷಾ ವ್ಯಾಪ್ತಿಯಲ್ಲಿರುವ ಮನೆಗಳಿಗೆ ಮತದಾರರ ಪಟ್ಟಿಯಲ್ಲಿರುವ ಮನೆ ಸಂಖ್ಯೆಗಳ ಆಧಾರದ ಮೇಲೆ ಭೇಟಿ ನೀಡಬೇಕು. ಪರಿಶಿಷ್ಟ ಜಾತಿಯ ಕುಟುಂಬಗಳನ್ನು ಗುರುತಿಸಬೇಕು. ಯಾವ ದಿನದಂದು, ಯಾವ ಯಾವ ಮನೆಗಳನ್ನು ಸಮೀಕ್ಷೆಗೆ ಒಳಪಡಿಸಲಾಗುವುದು ಎಂಬ ಮಾಹಿತಿಯನ್ನು ಆದಷ್ಟು ಮಟ್ಟಿಗೆ ಮುಂಚಿತವಾಗಿಯೆ ಗೊತ್ತುಪಡಿಸಿಕೊಳ್ಳಬೇಕು ಎಂದರು.

ಸಮೀಕ್ಷೆಯಲ್ಲಿ ಪರಿಶಿಷ್ಟ ಜಾತಿಯವರ ಯಾವುದೇ ಮನೆಯನ್ನು ಬಿಡದೆ ಪ್ರತಿಯೊಂದು ಮನೆಗೆ ಭೇಟಿ ನೀಡಿ ಕುಟುಂಬದ ಸದಸ್ಯರ ಮಾಹಿತಿಯನ್ನು ಮೊಬೈಲ್​ ಆ್ಯಫ್​ನಲ್ಲಿ ಭರ್ತಿ ಮಾಡಬೇಕು. ಸಮೀಕ್ಷೆ ನಡೆಸುವಾಗ ಸಮೀಕ್ಷೆ ಬ್ಲಾಕಿನ ಅಧಿಕೃತ ಭಾಗವಾಗಿರುವ ಯಾವುದೇ ಮನೆಯನ್ನು ಬಿಡಬಾರದು. ಅಲ್ಲದೆ ಕುಟುಂಬವನ್ನು ಭೇಟಿ ಮಾಡಿದಾಗ, ಪ್ರಶ್ನಾವಳಿ ತುಂಬಲು ಆತುರಪಡಬಾರದು. ನಿಮ್ಮ ಭೇಟಿಯ ಉದ್ದೇಶದ ಬಗ್ಗೆ ಮಾಹಿತಿ ನೀಡುವವರಿಗೆ ಮನವರಿಕೆ ಮಾಡಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ತಹಸೀಲ್ದಾರ್​ ಡಾ.ನಯನಾ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಶ್ರೀನಿವಾಸನ್​, ಸಹಾಯಕ ನಿರ್ದೇಶಕರಾದ ಚನ್ನಬಸಪ್ಪ, ನಗರಸಭೆ ಆಯುಕ್ತ ಪ್ರಸಾದ್​ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net