

ಬೆಂಗಳೂರು: ಆರ್‌ಸಿಬಿ ತಂಡದ ವಿಜಯೋತ್ಸವದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾಲ್ತುಳಿತಕ್ಕೆ 11 ಮಂದಿ ಸಾವು ಪ್ರಕರಣದಲ್ಲಿ ಪೊಲೀಸ್ ಅಧಿಕಾರಿಗಳು ಮತ್ತು ಆಯೋಜಕರೇ ಹೊಣೆ ಎಂದು ನ್ಯಾ.ಕುನ್ಹಾ ನೇತೃತ್ವದ ಆಯೋಗ ಸರ್ಕಾರಕ್ಕೆ ವರದಿ ಸಲ್ಲಿಸಿದೆ.
ಈ ವರದಿಯನ್ನು ನಿರೀಕ್ಷೆಯಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಚಿವ ಸಂಪುಟ ಸಭೆ ಮುಂದೆ ಮಂಡಿಸಿದರು. ವರದಿಯಲ್ಲಿರುವ ಅಂಶಗಳ ಬಗ್ಗೆ ಹೆಚ್ಚಿನ ಅಧ್ಯಯನದ ಆವಶ್ಯಕತೆ ಇದೆ ಎಂದು ಅಭಿಪ್ರಾಯಪಟ್ಟ ಮುಂದಿನ ಸಭೆಯಲ್ಲಿ ಚರ್ಚೆ ನಡೆಸುವ ನಿರ್ಣಯ ಕೈಗೊಂಡಿದೆ.
ಆಯೋಗದ ವರದಿಯಲ್ಲಿ ಆರ್‌ಸಿಬಿ, ಡಿಎನ್‌ಎ ಮತ್ತು ಕೆಎಸ್‌ಸಿಎ ಮತ್ತು ಪೊಲೀಸ್ ಅಧಿಕಾರಿಗಳು ದುರಂತಕ್ಕೆ ಕಾರಣಕರ್ತರು ಎಂದು ಉಲ್ಲೇಖಿಸಲಾಗಿದೆ. ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಆಯೋಗ ಶಿಫಾರಸು ಮಾಡಿದೆ.
ಕಾರ್ಯಕ್ರಮಕ್ಕೂ ಮೊದಲು 7 ದಿನ ಮೊದಲು ಆಯೋಜಕರು ಪೂರ್ವಾನುಮತಿ ಪಡೆಯುವುದು ಕಡ್ಡಾಯವಾಗಿತ್ತು. ನಿಖರವಾದ ಸ್ಥಳ, ನಿರೀಕ್ಷಿತ ಜನ, ವಾಹನ, ಸಮಯ ನೀಡಬೇಕಿತ್ತು. ಆದರೆ, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಾರ್ವಜನಿಕ ಕಾರ್ಯಕ್ರಮವನ್ನು ನಡೆಸಲು ಸಂಘಟಕರು ಅಗತ್ಯ ಅನುಮತಿ ಪಡೆದಿರಲಿಲ್ಲ. ಪೊಲೀಸರು ಅನಧಿಕೃತ ಕಾರ್ಯಕ್ರಮವನ್ನು ತಡೆಯಲು ವಿಲರಾಗಿದ್ದಾರೆ ಎಂದು ಆಯೋಗ ತಿಳಿಸಿದೆ.
ಆರ್‌ಸಿಬಿ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಬೆಳಗ್ಗೆ 7:01 ಮತ್ತು ಬೆಳಗ್ಗೆ 8 ಗಂಟೆಗೆ 2 ಪೋಸ್ಟ್ ಮಾಡುವ ಮೂಲಕ ಸ್ಥಳಕ್ಕೆ ಭಾರಿ ಜನಸಮೂಹ ಜಮಾಯಿಸಲು ಕಾರಣರಾಗಿದ್ದಾರೆ. ಕ್ರೀಡಾಂಗಣದ ವಿನ್ಯಾಸ ಮತ್ತು ರಚನೆಯು ಜನಸಂದಣಿಗೆ ಸೂಕ್ತವಲ್ಲ ಮತ್ತು ಅಸುರಕ್ಷಿತವಾಗಿತ್ತು. ಎಲ್ಲ ಪ್ರವೇಶ ಮತ್ತು ನಿರ್ಗಮನ ದ್ವಾರಗಳು ಪಾದಚಾರಿ ಮಾರ್ಗಕ್ಕೆ ತೆರೆದುಕೊಳ್ಳುತ್ತಿದ್ದವು. ಪರಿಣಾಮ ಪ್ರೇಕ್ಷಕರು ಪಾದಚಾರಿ ಮಾರ್ಗ ಅಥವಾ ರಸ್ತೆಯಲ್ಲಿ ಸರತಿ ಸಾಲಿನಲ್ಲಿ ನಿಲ್ಲಬೇಕಾಯಿತು. ವಾಹನಗಳ ಚಾಲನೆ ಅಪಾಯದಿಂದ ಮತ್ತು ದುಷ್ಕರ್ಮಿಗಳು ಜನಸಂದಣಿ ಒಳಗೆ ಸೇರಿಕೊಂಡಿದ್ದಾರೆ.
ಕೊನೆಗೆ ಕ್ರೀಡಾಂಗಣದ ಪ್ರವೇಶದ್ವಾರವನ್ನು ನಿಯಂತ್ರಿಸದೆ ಮತ್ತು ಕ್ರೀಡಾಂಗಣದ ಪ್ರವೇಶದ ಬಗ್ಗೆ ಅಜಾಗರೂಕ ಘೋಷಣೆ ಮಾಡುವ ಮೂಲಕ ಸಂಘಟಕರಿಂದಲೇ ಕಾಲ್ತುಳಿತ ಉಂಟಾಗಿತ್ತು. ಇದಕ್ಕೆ ಸಂಘಟಕರು ನೇರ ಹೊಣೆಯಾಗಿದ್ದಾರೆ ಎಂದು ಆಯೋಗ ಉಲ್ಲೇಖಿಸಿದೆ.
ಪೊಲೀಸರ ವೈಲ್ಯವೇನು?
ಪೊಲೀಸ್ ಭದ್ರತೆಯೂ ತುರ್ತು ಪರಿಸ್ಥಿತಿಯನ್ನು ಎದುರಿಸುವ ಶಕ್ತಿ ಇರಲಿಲ್ಲ. 515 ಅಧಿಕಾರಿ, ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಜನಸಂದಣಿಯನ್ನು ನಿಯಂತ್ರಿಸಲು ಕೇವಲ 79 ಅಧಿಕಾರಿಗಳು ಗೇಟ್‌ಗಳ ಹೊರಗೆ ನಿಯೋಜಿಸಲಾಗಿತ್ತು. ಬಿಕ್ಕಟ್ಟಿನ ಸಮಯದಲ್ಲಿ ಸ್ಥಳದಲ್ಲಿ ಅವರೂ ಕಾಣಿಸಲಿಲ್ಲ. ನಿಯಂತ್ರಣ ಕೊಠಡಿಯಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿ ಪ್ರವೇಶ ದ್ವಾರಗಳ ಒಳಗೆ ಮತ್ತು ಸುತ್ತಮುತ್ತ ಭದ್ರತಾ ಸಿಬ್ಬಂದಿಗೆ ಎಚ್ಚರಿಕೆ ನೀಡುವಲ್ಲಿ ವಿಫಲರಾಗಿದ್ದಾರೆ. ಅಪಾಯದಮಟ್ಟ ಕಂಡು ಬಂದರೂ ನಿರ್ಗಮನ ದ್ವಾರಗಳನ್ನು ಸಕಾಲದಲ್ಲಿ ತೆರೆಯದೆ ನಿರ್ಲಕ್ಷ್ಯ ವಹಿಸಿದ್ದಾರೆ. ಹಳೆಯ ವಿಮಾನ ನಿಲ್ದಾಣ ರಸ್ತೆಯಲ್ಲಿ ಆಂಬುಲೆನ್ಸ್‌ಗಳನ್ನು ನಿಯೋಜಿಸಲಾಗಿತ್ತು.
ಅಂತಾರಾಷ್ಟ್ರೀಯ ಮಾನದಂಡ ಕಡ್ಡಾಯ
ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಹೆಚ್ಚಿನ ಪ್ರೇಕ್ಷಕರನ್ನು ಆಹ್ವಾನ ನೀಡುವುದರಿಂದ ಅಂತಾರಾಷ್ಟ್ರೀಯ ಮಾನದಂಡಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು. ಸಾರ್ವಜನಿಕ ರಸ್ತೆಗಳಿಂದ ಬೇರ್ಪಡಿಸಿ ಪ್ರತ್ಯೇಕ ಕ್ಯೂ ಮಾಡಿಸಬೇಕು. ಸಾಮೂಹಿಕ ಪ್ರವೇಶ ಮತ್ತು ನಿರ್ಗಮನಕ್ಕೆ ಸಾಕಷ್ಟು ದ್ವಾರ ನಿರ್ಮಾಣ ಮಾಡಬೇಕು. ಸಾರ್ವಜನಿಕ ಸಾರಿಗೆ ಪ್ರವೇಶಕ್ಕೆ ಮತ್ತು ಪ್ರವಾಸಿ ಕೇಂದ್ರಗಳು ಅಗತ್ಯವಿದೆ. ಸಾಕಷ್ಟು ಪಾರ್ಕಿಂಗ್ ಮತ್ತು ಡ್ರಾಪ್ ಆ್ಯಂಡ್ ಪಿಕಪ್‌ಗೆ ವ್ಯವಸ್ಥೆ ಕಲ್ಪಿಸಬೇಕೆಂದು ಆಯೋಗ ಸೂಚಿಸಿದೆ.
ಇತರೆ ಸಮಾರಂಭಗಳಿಗೆ ಮುನ್ನೆಚ್ಚರಿಕೆ ಶಿಫಾರಸು
- ಜನಸಂದಣಿ, ಅಪಾಯಮಟ್ಟ ಆಧರಿಸಿ ಸ್ಥಳದಲ್ಲಿ ಕನಿಷ್ಠ ಆಂಬ್ಯುಲೆನ್ಸ್ ನಿಯೋಜನೆ
- ಸುಸಜ್ಜಿತ ಅಪಘಾತ ಚಿಕಿತ್ಸೆಯ ಘಟಕ ಸ್ಥಾಪನೆ, ವೈದ್ಯಕೀಯ ಸಿಬ್ಬಂದಿ ಇರಬೇಕು
- ಸ್ಥಳೀಯ ಆರೋಗ್ಯ ಅಧಿಕಾರಿಗಳು ಮತ್ತು ಆಸ್ಪತ್ರೆಗಳೊಂದಿಗೆ ಸಮನ್ವಯ
- ತುರ್ತು ವೈದ್ಯಕೀಯ ಪ್ರತಿಕ್ರಿಯೆಗೆ ಪೂರ್ವಾಭ್ಯಾಸ ಕಡ್ಡಾಯ
- ನಿಗದಿತ ಮಾರ್ಗ ಮತ್ತು ಪ್ರದೇಶವನ್ನು ವ್ಯವಸ್ಥೆ ಮಾಡಬೇಕು.