Dhruva Sarja - ಹೊಸ ಚಿತ್ರಕ್ಕಾಗಿ 21 ಕೆಜಿ ತೂಕ ಇಳಿಸಿಕೊಂಡ ಆ್ಯಕ್ಷನ್​ ಪ್ರಿನ್ಸ್​

Dhruva Sarja
Dhruva Sarja
Published on
Dhruva Sarja -
ಸ್ಯಾಂಡಲ್​ವುಡ್​ ನಟ ಧ್ರುವ ಸರ್ಜಾ 2012ರಲ್ಲಿ "ಅದ್ಧೂರಿ' ಮೂಲಕ ನಾಯಕನಾಗಿ ಪದಾರ್ಪಣೆ ಮಾಡಿದರೂ, ಈ 14 ವರ್ಷಗಳಲ್ಲಿ ನಾಯಕನಾಗಿ ನಟಿಸಿರುವ ಸಿನಿಮಾಗಳ ಸಂಖ್ಯೆ ಕೇವಲ ಆರು. "ಅದ್ಧೂರಿ', "ಬಹದ್ದೂರ್​', "ಭರ್ಜರಿ', "ಪೊಗರು', "ಮಾರ್ಟಿನ್​', "ಕೆಡಿ' ಬಳಿಕ ಇದೀಗ "ಕ್ರಿಮಿನಲ್​' ಶೂಟಿಂಗ್​ನಲ್ಲಿ ಅವರು ಬಿಜಿಯಾಗಿದ್ದಾರೆ. ಅವರು ಎಷ್ಟೇ ವೇಗವಾಗಿ ಸಿನಿಮಾಗಳನ್ನು ಮಾಡಿದರೂ, ಕಾರಣಾಂತರಗಳಿಂದ ಬಿಡುಗಡೆ ತಡವಾಗುತ್ತಿತ್ತು. ಜತೆಗೆ ಒಂದು ಸಿನಿಮಾ ರಿಲೀಸ್​ ಆಗುವವರೆಗೂ ಧ್ರುವ ಮತ್ತೊಂದು ಚಿತ್ರದಲ್ಲಿ ತೊಡಗುತ್ತಿರಲಿಲ್ಲವಾದ ಕಾರಣ, ಉಳಿದ ಚಿತ್ರಗಳೂ ತಡವಾಗುತ್ತಾ ಬಂದವು. ಆದರೆ, ಈಗ ಧ್ರುವ ಎಚ್ಚೆತ್ತುಕೊಂಡಿದ್ದಾರೆ. ವರ್ಷಕ್ಕೆರಡು ಸಿನಿಮಾ ಮಾಡಲೇಬೇಕು ಅಂತ ದೃಢ ನಿರ್ಧಾರ ಮಾಡಿದ್ದಾರೆ. ಈ ವರ್ಷ ಅವರು ನಟಿಸಿರುವ "ಕೆಡಿ' ಬಿಡುಗಡೆಯಾಗಿದ್ದು, ಮತ್ತೊಂದು ಸಿನಿಮಾ "ಕೆರೆಬೇಟೆ' ಖ್ಯಾತಿಯ ರಾಜಗುರು ನಿರ್ದೇಶಿಸುತ್ತಿರುವ "ಕ್ರಿಮಿನಲ್​' ಕೂಡ ಇದೇ ದಸರಾ ಅಥವಾ ದೀಪಾವಳಿಗೆ ತೆರೆಗೆ ಬರುವ ನಿರೀೆ ಇದೆ. ಹಾಗೇ ಇದೇ ಆಗಸ್ಟ್​ನಲ್ಲಿ ದುನಿಯಾ ಸೂರಿ ಹಾಗೂ ಡಿಸೆಂಬರ್​ನಲ್ಲಿ "777 ಚಾರ್ಲಿ' ನಿರ್ದೇಶಕ ಕಿರಣ್​ ರಾಜ್​ ಆ್ಯಕ್ಷನ್​&ಕಟ್​ ಹೇಳಲಿರುವ ಎರಡು ಚಿತ್ರಗಳು ಸೆಟ್ಟೇರಲಿವೆ ಎನ್ನಲಾಗಿದೆ.

ರಿಯಲ್​ "ಕ್ರಿಮಿನಲ್​'!

"ಕ್ರಿಮಿನಲ್​' ಚಿತ್ರದ ಶೂಟಿಂಗ್​ ಅನುಭವದ ಬಗ್ಗೆ ಧ್ರುವ, "ಈಗಾಗಲೇ ಶೇಕಡಾ 70ರಷ್ಟು ಶೂಟಿಂಗ್​ ಮುಗಿದಿದೆ. ಇನ್ನು 35 ದಿನಗಳ ಚಿತ್ರೀಕರಣವಾದ ಬಳಿಕ "ಕ್ರಿಮಿನಲ್​' ಪೂರ್ಣಗೊಳ್ಳಲಿದೆ. 2015ರಲ್ಲಿ ನಡೆದ ನೈಜ ಟನೆಯಾಧಾರಿತ ಚಿತ್ರವಿದು. ಆಗ ನಾಯಕ, ನಾಯಕಿ ಎಲ್ಲೆಲ್ಲಿ ಹೋಗಿದ್ದರೋ ಅದೇ ನೈಜ ಸ್ಥಳಗಳಲ್ಲಿ, ನೈಜ ಜನರ ನಡುವೆ ಗೆರಿಲ್ಲಾ ಶಾಟ್ಸ್​ನಂತೆ ಶೂಟಿಂಗ್​ ಮಾಡುತ್ತಿದ್ದೇವೆ. ಅದಕ್ಕೆಂದೇ ನಾನು ಮತ್ತು ರಚಿತಾ ರಾಮ್​ ವರ್ಕ್​ಶಾಪ್​ ಮಾಡಿದೆವು. ಇಲ್ಲಿ ನಾವು ಸೆಟ್​ ಬಳಸಿಲ್ಲ. ಕಾರು ಇಳಿದ ತಕ್ಷಣ ನೈಜವಾಗಿಯೇ ಜನರ ನಡುವೆ ಹೋಗಿ ನಮ್ಮ ಪಾಡಿಗೆ ನಾವು ಡೈಲಾಗ್​ ಹೇಳುತ್ತಾ ಹೋಗುತ್ತಿದ್ದೆವು. ಒಂದು ಲಾಂಗ್​ ಶಾಟ್​, ಒಂದು ವೈಡ್​ ಮತ್ತೊಂದು ನಮ್ಮ ಜತೆ ಫಾಲೋ ಮಾಡುತ್ತಿತ್ತು. ಹೀಗೆ ಮೂರು ಕ್ಯಾಮರಾಗಳನ್ನು ಬಳಸಿ ಶೂಟಿಂಗ್​ ಮಾಡುತ್ತಿದ್ದೇವೆ. ತೆರೆಯ ಮೇಲೆ ನೋಡಿದರೆ ಪ್ರೇಕ್ಷಕರಿಗೆ ನಮ್ಮ ನಡುವೆಯೇ ನಡೆಯುತ್ತಿರುವ ಕಥೆ ಅಂತನ್ನಿಸುವಷ್ಟು ನೈಜವಾಗಿ ಮೂಡಿಬರುತ್ತಿದೆ. ಹಾಗೇ ಧ್ರುವ ಅಂದಾಕ್ಷಣ ದೊಡ್ಡ ಬಜೆಟ್​ ಅನ್ನುತ್ತಾರೆ. ಅದನ್ನು ಬ್ರೇಕ್​ ಮಾಡಬೇಕು ಅಂತ ತುಂಬ ಕಡಿಮೆ ಬಜೆಟ್​ನಲ್ಲಿ ಮಾಡುತ್ತಿರುವ ಚಿತ್ರವಿದು' ಎಂದು ಹೇಳಿಕೊಳ್ಳುತ್ತಾರೆ ಧ್ರುವ ಸರ್ಜಾ.

ಬಹದ್ದೂರ್​ ಹುಡುಗನ ಭರ್ಜರಿ ತಯಾರಿ

ಇನ್ನು "ಕ್ರಿಮಿನಲ್​' ಶೂಟಿಂಗ್​ ಜತೆಜತೆಗೇ ಹೊಸ ಚಿತ್ರಕ್ಕೆ ಸಿದ್ಧತೆ ನಡೆಸಿರುವ ಧ್ರುವ, ಪಾತ್ರಕ್ಕಾಗಿ ಬರೋಬ್ಬರಿ 21 ಕೆಜಿ ತೂಕ ಇಳಿಸಿಕೊಂಡಿದ್ದಾರೆ. "ಹೊಸ ಚಿತ್ರದಲ್ಲಿ ಮತ್ತೆ ಹಳೆಯ ಲುಕ್​ನಲ್ಲಿ ಲವರ್​ಬಾಯ್​, ರೊಮ್ಯಾಂಟಿಕ್​ ಹೀರೋ ರೀತಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದೇನೆ. ಹೀಗಾಗಿ "ಬಹದ್ದೂರ್​', "ಭರ್ಜರಿ' ಲುಕ್​ ಬೇಕು ಅಂತ ನಿರ್ದೇಶಕರು ಹೇಳಿದ್ದರು. ನಿರ್ದೇಶಕರು ಕೆಲವೊಮ್ಮೆ ದಪ್ಪ ಆಗಲು, ಕೆಲವೊಮ್ಮೆ ಸಣ್ಣ ಆಗಲು ಹೇಳಬಹುದು. ನಟರಾಗಿ ನಾವು ನಿರ್ದೇಶಕರ ವಿಜನ್​ನಂತೆ ಕಾಣಬೇಕು. ಅದಕ್ಕಾಗಿ 21.5 ಕೆಜಿ ತೂಕ ಕಡಿಮೆ ಮಾಡಿಕೊಂಡಿದ್ದೇನೆ. ನಾನು ಯಾವುದೇ ಪ್ರೋಟಿನ್​ ಅಥವಾ ಸಪ್ಲಿಮೆಂಟ್​ ತೆಗೆದುಕೊಳ್ಳುವುದಿಲ್ಲ' ಎಂದು ಮಾಹಿತಿ ನೀಡುತ್ತಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net