

ಸಾಗರ: ಆಸ್ಪತ್ರೆಯಲ್ಲಿ ಸಾರ್ವಜನಿಕರಿಗೆ ಯಾವುದೇ ಸಮಸ್ಯೆ ಆಗದಂತೆ ವಿಶೇಷ ಕಾಳಜಿ ವಹಿಸಲಾಗುತ್ತಿದೆ. ಆದರೆ ವೈದ್ಯ ಸಿಬ್ಬಂದಿಯನ್ನು ಗೌರವದಿಂದ ನೋಡಿ. ಅವರನ್ನು ಬೆದರಿಸುವುದು, ಸಾರ್ವಜನಿಕ ಸ್ವತ್ತುಗಳಿಗೆ ಹಾನಿ ಮಾಡಿದರೆ ಸಹಿಸಲಾಗದು. ಅಂಥವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.
ಸಾಗರದ ತಾಯಿ-ಮಗು ಆಸ್ಪತ್ರೆಯಲ್ಲಿ ಶುಕ್ರವಾರ ಪ್ರಗತಿ ಪರಿಶೀಲನಾ ಸಭೆ ನಡೆಸಿ, ರಾಷ್ಟ್ರೀಯ ಹೆಣ್ಣು ಮಗು ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಖಾಸಗಿ ಆಸ್ಪತ್ರೆಯಾದರೆ ಸುಮ್ಮನೆ ಬರುತ್ತೀರಿ. ಆದರೆ ಸರ್ಕಾರಿ ಆಸ್ಪತ್ರೆ ಎಂದಾಕ್ಷಣ ಜನರ ವರ್ತನೆಯೇ ಬದಲಾಗುತ್ತದೆ. ಸರ್ಕಾರಿ ಆಸ್ಪತ್ರೆ ಇರುವುದು ಬಡವರಿಗಾಗಿ. ಇದನ್ನು ಉಳಿಸಿಕೊಳ್ಳುವ ಹೊಣೆ ನಮ್ಮೆಲ್ಲರದು. ವೈದ್ಯರ ಮೇಲೆ ದಬ್ಬಾಳಿಕೆ ಮಾಡಿದರೆ ಅವರಿಗೆ ನಿರ್ಭೀತಿಯಿಂದ ಕೆಲಸ ಮಾಡಲು ಆಗುವುದಿಲ್ಲ. ತಾಯಿ-ಮಗು ಆಸ್ಪತ್ರೆಯಲ್ಲಿ ವರ್ಷಕ್ಕೆ ಎರಡು ಸಾವಿರಕ್ಕೂ ಹೆಚ್ಚು ಹೆರಿಗೆ ಆಗುತ್ತಿದ್ದು, ಇದು ಜಿಲ್ಲೆಯಲ್ಲೇ ತಾಲೂಕು ಆಸ್ಪತ್ರೆಯ ದಾಖಲೆ ಎಂದರು.
ಉಪವಿಭಾಗೀಯ ಆಸ್ಪತ್ರೆಗೆ ಮೂಲ ಸೌಲಭ್ಯ ಒದಗಿಸುವುದಾಗಿ ಸಚಿವರು ಭರವಸೆ ನೀಡಿದ್ದು, ಆಸ್ಪತ್ರೆ ಮೇಲ್ದರ್ಜೆಗೆ ಏರಿಸುವ ಬೇಡಿಕೆಗೂ ಸಹಮತ ವ್ಯಕ್ತಪಡಿಸಿದ್ದಾರೆ. ಆಸ್ಪತ್ರೆಯಲ್ಲಿ ಸುಸಜ್ಜಿತ ಶೌಚಗೃಹ, ಕ್ಯಾಂಟೀನ್, ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ವೈದ್ಯರ ಕೊರತೆ ನೀಗಿಸಲು ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ಹೇಳಿದರು.
ಹೆಣ್ಣು ಮತ್ತು ಗಂಡು ಎನ್ನುವ ಭೇದ ಮಾಡಬೇಡಿ. ಪ್ರಸ್ತುತ ಮಹಿಳೆ ಎಲ್ಲ ಕ್ಷೇತ್ರದಲ್ಲೂ ಅದ್ವಿತೀಯ ಸಾಧನೆ ಮಾಡುತ್ತಿದ್ದಾಳೆ. ಮಂಗನ ಕಾಯಿಲೆಗೆ ಸಂಬಂಧಿಸಿ ಎಲ್ಲ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಯಾವ ಪ್ರದೇಶದಲ್ಲಿ ತುರ್ತು ಆಂಬುಲೆನ್ಸ್ ಅಗತ್ಯವಿದೆಯೋ ಅಲ್ಲಿಗೆ ಶಾಸಕರ ನಿಧಿಯಿಂದಲೇ ವಾಹನ ಕೊಡಿಸುತ್ತೇನೆ ಎಂದು ತಿಳಿಸಿದರು.
ಸಿವಿಲ್ ಸರ್ಜನ್ ಡಾ. ಕೆ.ಪರಪ್ಪ, ಡಾ. ಪ್ರತಿಮಾ, ಡಾ. ಭರತ್, ಡಾ. ಬಿ.ಜಿ.ಸಂಗಮ್, ಪೌರಾಯುಕ್ತ ಎಚ್.ಕೆ.ನಾಗಪ್ಪ, ನಗರಸಭೆ ಸದಸ್ಯೆರಾದ, ಗಣಪತಿ ಮಂಡಗಳಲೆ ಇತರರಿದ್ದರು.