ಫೇಕ್ ನ್ಯೂಸ್ ತಡೆಯದಿದ್ದರೆ ಕ್ರಮ; ಸಿಎಂ ಪೊಲೀಸರಿಗೆ ಎಚ್ಚರಿಕೆ

CM
Published on

ಬೆಂಗಳೂರು: ಸಮಾಜದ ನೆಮ್ಮದಿಗೆ ಕಂಟಕವಾಗಿರುವ ಫೇಕ್ ನ್ಯೂಸ್‌ಗಳನ್ನು ತಡೆಗಟ್ಟಬೇಕು. ಈ ನಿಟ್ಟಿನಲ್ಲಿ ಮತ್ತಷ್ಟು ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಹಿರಿಯ ಐಪಿಎಸ್ ಅಧಿಕಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚುರುಕು ಮುಟ್ಟಿಸಿದ್ದಾರೆ.

ನೃಪತುಂಗ ರಸ್ತೆಯ ರಾಜ್ಯ ಪೊಲೀಸ್ ಪ್ರಧಾನ ಕಚೇರಿಯಲ್ಲಿ 2024ನೇ ಸಾಲಿನ ಹಿರಿಯ ಐಪಿಎಸ್ ಅಧಿಕಾರಿಗಳ ಸಭೆಯನ್ನು ಸಿದ್ದರಾಮಯ್ಯ, ಗೃಹ ಸಚಿವ ಡಾ.ಜಿ.ಪರಮೇಶ್ವರ ನಡೆಸಿದರು.

ಈ ವೇಳೆ ಮಾತನಾಡಿದ ಸಿದ್ದರಾಮಯ್ಯ, ಜಾಲತಾಣದಲ್ಲಿ ಸುಳ್ಳು ಸುದ್ದಿಗಳು ಹೆಚ್ಚಾಗುತ್ತಿವೆ. ಯಾವುದೇ ವ್ಯಕ್ತಿ, ಪಕ್ಷ, ಸಂಘಟನೆ ಮಾಡಿದರೂ ಕ್ರಮ ತೆಗೆದುಕೊಳ್ಳಬೇಕು. ಇದರಿಂದ ಕೋಮುಗಲಭೆ, ಸಂಘರ್ಷ, ತೇಜೋವಧೆ, ಮಾನಹಾನಿ ತಡೆಗಟ್ಟಲು ವಿಶೇಷ ಘಟಕ ಮಾಡಿದ್ದರೂ ಹೆಚ್ಚಾಗುತ್ತಿವೆ. ಕೃತಕ ಬುದ್ಧಿಮತ್ತೆ ಬಳಸಿ ಪತ್ತೆ, ಸ್ವಯಂಪ್ರೇರಿತ ದೂರು ದಾಖಲಿಸಿ ಮುಲಾಜಿಲ್ಲದೆ ಕ್ರಮ ತೆಗೆದುಕೊಳ್ಳಬೇಕು ಎಂದು ಎಚ್ಚರಿಕೆ ನೀಡಿದರು. ಸ್ಥಳೀಯ ಪೊಲೀಸ್ ಠಾಣೆಗೆ ತಿಳಿಯದೆ ಮಾದಕ ವಸ್ತು, ಕಳ್ಳತನ, ದರೋಡೆ, ಜೂಜು, ಮಟ್ಕಾ ದಂಧೆ, ಕ್ಲಬ್ ಮುಂದಾದ ಅಪರಾಧ ನಡೆಯುವುದಿಲ್ಲ. ಕೆಲವೆಡೆ ಪೊಲೀಸರೇ ಶಾಮೀಲಾಗುತ್ತಾರೆ. ಆದ್ದರಿಂದ ಇಂತಹವರನ್ನು ಜಾಗೃತಪಡಿಸಲು ಎಸ್‌ಪಿ/ಡಿಸಿಪಿ, ಐಜಿಪಿ ಮತ್ತು ಪೊಲೀಸ್ ಆಯುಕ್ತರು ಪ್ರತಿ ತಿಂಗಳು ತಮ್ಮ ವ್ಯಾಪ್ತಿಯ 3 ಠಾಣೆಗಳಿಗೆ ಭೇಟಿ ನೀಡಿ ಪೊಲೀಸರು ಮತ್ತು ಜನರಿಂದ ಅಹವಾಲು ಸ್ವೀಕರಿಸಬೇಕು ಎಂದು ಸಲಹೆ ನೀಡಿದರು.

ಎಸಿ ಕೊಠಡಿ ಬಿಟ್ಟು ಹೊರಬನ್ನಿ

ಸಂಚಾರದಟ್ಟಣೆ ನಿರ್ವಹಣೆಯಲ್ಲಿ ಅಧಿಕಾರಿ ವರ್ಗ ಸಹ ರಸ್ತೆಗೆ ಇಳಿದು ಕರ್ತವ್ಯನಿರ್ವಹಿಸಬೇಕು. ಹವಾನಿಯಂತ್ರಿತ ಕೊಠಡಿಯಲ್ಲಿ ಕುಳಿತು ಹೋಗುವುದಲ್ಲ. ಪ್ರತಿದಿನ ಬೆಳಗ್ಗೆ ಮತ್ತು ಸಂಜೆ 2 ತಾಸು ರಸ್ತೆಯಲ್ಲಿ ನಿಂತು ಟ್ರಾಫಿಕ್ ನಿಯಂತ್ರಣ ಮಾಡಿ ಎಂದು ಸಂಚಾರ ಪೊಲೀಸ್ ವಿಭಾಗಕ್ಕೆ ಸಿಎಂ ಸೂಚನೆ ನೀಡಿದರು.

ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಕೈ ಜೋಡಿಸುವ, ಪಾಲುದಾರರೊಂದಿಗೆ ಶಾಮೀಲಾಗಿ ಅಕ್ರಮ ಎಸಗುವ ಪೊಲೀಸರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುತ್ತದೆ. ಪೊಲೀಸರ ನೆರಳಿನಲ್ಲೇ ಕ್ಲಬ್, ಜೂಜಾಟ, ಡ್ರಗ್ಸ್ ದಂಧೆ ನಡೆಯುವುದು ಗೊತ್ತಿರುವ ವಿಚಾರ. ಮಟ್ಟ ಹಾಕದಿದ್ದರೆ ಐಜಿಪಿ ದರ್ಜೆ ಅಧಿಕಾರಿಗಳನ್ನೇ ಹೊಣೆ ಮಾಡಬೇಕಾಗುತ್ತದೆ ಎಂದು ಸಿದ್ದರಾಮಯ್ಯ ಹೇಳಿದರು.

ಕರ್ತವ್ಯದ ವೇಳೆ ಕಡ್ಡಾಯವಾಗಿ ಸಮವಸದಲ್ಲಿರಬೇಕು. ನಿಮಗೆ ಗನ್‌ಗಳನ್ನು ಕೊಟ್ಟಿರುವುದು ಏಕೆ? ರೌಡಿಗಳಿಗೆ ಏಕೆ ಭಯ ಇಲ್ಲ. ಕೆಲವು ಪೊಲೀಸರಿಗೆ ಇ-ಬೀಟ್ ವ್ಯವಸ್ಥೆ ಜಾರಿಯಲ್ಲಿರುವುದೇ ಗೊತ್ತಿಲ್ಲ. ಕೇವಲ ಗಸ್ತು ಸಿಬ್ಬಂದಿ ಟ್ರ್ಯಾಕಿಂಗ್ ಮಾತ್ರ ಸಿಗುತ್ತಿದೆ. ಅಲ್ಲಿನ ವರದಿ ಇ-ಬೀಟ್‌ನಲ್ಲಿ ನಮೂದು ಆಗುತ್ತಿಲ್ಲ. ಇದು ನಾಚಿಕೆಗೇಡು. ಕೂಡಲೇ ಸರಿಪಡಿಸಿಕೊಳ್ಳಬೇಕು ಎಂದು ಪೊಲೀಸರಿಗೆ ಸಲಹೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net