

ಕಳಸ: ಕಳಸ ಪಟ್ಟಣದಲ್ಲಿ ಮಾರುಕಟ್ಟೆ ದರಕ್ಕಿಂತ ಅಧಿಕ ದರದಲ್ಲಿ ಕೋಳಿ ಮಾಂಸ ಮಾರಾಟ ಮಾಡಿದರೆ ಗ್ರಾಪಂನಿಂದ ಕಾನೂನು ಕ್ರಮ ಕೈಗೊಳ್ಳುವ ನಿರ್ಧರಿಸಲಾಗಿದೆ.
ಗ್ರಾಮ ಪಂಚಾಯಿತಿಯಲ್ಲಿ ಕೋಳಿ ಅಂಗಡಿಗಳನ್ನು ಹರಾಜು ಹಾಕುವಾಗ ಮಾರುಕಟ್ಟೆ ದರದಲ್ಲೇ ಮಾರಾಟ ಮಾಡಬೇಕು ಎಂದು ಷರತ್ತುವಿಧಿಸಿ ಟೆಂಡರ್ ಮಾಡಲಾಗಿತ್ತು. ಆದರೆ ಕಳಸದ ಮಾಂಸದ ಮಾರುಕಟ್ಟೆಯಲ್ಲಿ ಅಕ್ಕಪಕ್ಕದ ಗ್ರಾಮಗಳಲ್ಲಿ ಮಾರಾಟ ಮಾಡುವ ದರಕ್ಕಿಂತ ಅಧಿಕ ದರದಲ್ಲಿ ಮಾರಾಟ ಮಾಡಲಾಗುತ್ತಿದೆ ಎಂಬ ದೂರುಗಳು ಗ್ರಾಪಂಗೆ ಒಂದ ಹಿನ್ನಲೆಯಲ್ಲಿ ಪ್ರತಿಯೊಂದು ಕೋಳಿ ಅಂಗಡಿಗೂ ನಿತ್ಯ ಮಾರುಕಟ್ಟೆ ದರಪಟ್ಟಿಯನ್ನು ಪಂಚಾಯಿತಿವತಿಯಿಂದಲೇ ದರ ಪಟ್ಟಿಯನ್ನು ಹಾಕಲಾಗುತ್ತಿದೆ.
ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಅಂಗಡಿ ಮಾಲೀಕರು ಕೋಳಿ ಅಂಗಡಿಯಿಂದ ಆಗುತ್ತಿರುವ ಸಮಸ್ಯೆ ಮತ್ತು ಆಗುವ ಖರ್ಚು ವೆಚ್ಚಗಳ ಬಗ್ಗೆ ತಿಳಿಸಿ ಪ್ರತಿ ಕೆಜಿಗೆ 25 ರಿಂದ 30 ರೂ.ಹೆಚ್ಚುವರಿ ಬೆಲೆ ನಿಗದಿಪಡಿಸಬೇಕು ಎಂದು ಮನವಿ ಮಾಡಿದರು.
ಅಧಿಕ ದರದಲ್ಲಿ ಕೋಳಿ ಮಾಂಸ ಮಾರಾಟ ಮಾಡುತ್ತಿರುವುದರಿಂದ ಜನ ಸಾಮಾನ್ಯರಿಗೆ ಹೊರೆಯಾಗುತ್ತಿದೆ. ಆದ್ದರಿಂದ ಮಾರುಕಟ್ಟೆ ದರದಲ್ಲಿಯೇ ಕೋಳಿ ಮಾಂಸ ಮಾರಾಟ ಮಾಡಬೇಕು. ಒಂದು ವೇಳೆ ಅಧಿಕ ದರದಲ್ಲಿ ಮಾರಟ ಮಾಡಿದರೆ ಮಾರಾಟ ಸ್ಥಗಿತಗೊಳಿಸಿ ಗ್ರಾಪಂನಿಂದ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅಂಗಡಿಯ ಮಾಲೀಕರಿಗೆ ನೀಡಿದ ನೋಟಿಸ್‌ನಲ್ಲಿ ತಿಳಿಸಲಾಗಿದೆ.