ಆತ್ಮನಿರ್ಭರ ಯೋಜನೆಯಡಿ ಎಚ್‌ಎಂಟಿ ಪುನಶ್ಚೇತನಕ್ಕೆ ಕ್ರಮ

HMT
Published on

ಬೆಂಗಳೂರು: ಕೇಂದ್ರ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವರಾದ ಎಚ್.ಡಿ.ಕುಮಾರಸ್ವಾಮಿ ಬೆಂಗಳೂರಿನಲ್ಲಿ ಎಚ್‌ಎಂಟಿ(ಹಿಂದೂಸ್ತಾನ್ ಮಶೀನ್ ಅಂಡ್ ಟೂಲ್ಸ್) ಕಂಪನಿಯ ಉನ್ನತ ಅಧಿಕಾರಿಗಳ ಸಭೆ ನಡೆಸಿದರು.

ಕಂಪನಿಯ ಅಧ್ಯಕ್ಷ, ವ್ಯವಸ್ಥಾಪಕ ನಿರ್ದೇಶಕ ರಾಜೇಶ್ ಕೊಹ್ಲಿ ಸೇರಿ ಉನ್ನತ ಅಧಿಕಾರಿಗಳ ಜತೆ ಚರ್ಚೆ ನಡೆಸಿದ ಸಚಿವರು, ಕಂಪನಿ ಕಾರ್ಯ ಚಟುವಟಿಕೆ ಬಗ್ಗೆ ಪ್ರಾತ್ಯಕ್ಷಿಕೆ ವೀಕ್ಷಿಸಿ ಸಮಗ್ರ ಮಾಹಿತಿ ಪಡೆದುಕೊಂಡರು.

ವಹಿವಾಟು, ನಿವ್ವಳ ಲಾಭ ಇತ್ಯಾದಿಗಳ ಬಗ್ಗೆ ಮಾಹಿತಿ ಪಡೆದುಕೊಂಡ ಸಚಿವ ಕುಮಾರಸ್ವಾಮಿ, ಕಂಪನಿಯ ಆರ್ಥಿಕತೆ, ಉತ್ಪಾದನೆ, ಇನ್ನಿತರೆ ಸ್ಥಿತಿಗತಿಗಳ ಬಗ್ಗೆ ಅಧಿಕಾರಿಗಳ ಜತೆ ಚರ್ಚಿಸಿದರು.

ಒಂದು ಕಾಲದಲ್ಲಿ ವೈಭವಯುತವಾಗಿ ಮೆರೆದಿದ್ದ ಕಂಪನಿ ಇವತ್ತು ದುಸ್ಥಿತಿಗೆ ಬಂದಿದೆ. ಕಂಪನಿಯನ್ನು ಮತ್ತಷ್ಟು ಸದೃಢ ಮಾಡಿ. ಅದಕ್ಕೆ ಅಗತ್ಯವಾದ ಉಪ ಕ್ರಮ ಕೈಗೊಳ್ಳಿ. ಅದಕ್ಕೆ ಅಗತ್ಯವಾದ ಪ್ರಸ್ತಾವನೆಯನ್ನು ಕೇಂದ್ರ ಸರಕಾರಕ್ಕೆ ಸಲ್ಲಿಸಿ ಎಂದು ರಾಜೇಶ್ ಕೊಹ್ಲಿ ಅವರಿಗೆ ಸೂಚಿಸಿದರು.

ಆತ್ಮನಿರ್ಭರದಡಿ ಎಚ್‌ಎಂಟಿ ಪುನಶ್ಚೇತನ

ಪ್ರಧಾನಿ ಮೋದಿ ಅವರು ಕೈಗಾರಿಕೆ ಅಭಿವೃದ್ಧಿ ಬಗ್ಗೆ ದೊಡ್ಡ ಕನಸುಗಳನ್ನು ಕಟ್ಟಿಕೊಂಡಿದ್ದಾರೆ. ಅವರ ಆತ್ಮನಿರ್ಭರ ಪರಿಕಲ್ಪನೆಯ ಮೂಲಕ ಎಚ್‌ಎಂಟಿ ಕಂಪನಿ ಪುನರುಜ್ಜೀವನಗೊಳಿಸಬಹುದು.

ಆದ್ದರಿಂದ ಕಂಪನಿಯ ಚೇತರಿಕೆಗೆ ಮುಂದಾಗಿ. ಅದಕ್ಕೆ ಅಗತ್ಯವಾದ ನೆರವನ್ನು ಕೇಂದ್ರ ಸರ್ಕಾರ ಒದಗಿಸುತ್ತದೆ ಎಂದು ಭರವಸೆ ನೀಡಿದರು.

ನೀವು ರಕ್ಷಣಾ ಇಲಾಖೆಗೆ, ಬಾಹ್ಯಾಕಾಶ ಯೋಜನೆಗಳಿಗೆ ಪರಿಕರಗಳನ್ನು ತಯಾರಿಸಿ ಕೊಡುತ್ತೀರಿ. ದೇಶದ ಉದ್ದಗಲಕ್ಕೂ ಕಂಪನಿಯ ಉತ್ಪಾದನಾ ಘಟಕಗಳು ಇವೆ. ಹೀಗಾಗಿ ಕಂಪನಿಯ ಕ್ಷಮತೆಯನ್ನು ಹೆಚ್ಚಿಸಬೇಕು ಎಂದು ಸಲಹೆ ನೀಡಿದರು.

ಸಂಕಷ್ಟ ಬಗೆಹರಿಸಲು ಮನವಿ

ಕಂಪನಿಯು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದೆ ಎಂದು ಇದೇ ವೇಳೆ ಕಂಪನಿಯ ಅಧ್ಯಕ್ಷ ರಾಜೇಶ್ ಕೊಹ್ಲಿ, ನಷ್ಟದ ಜತೆಗೆ ಆರ್ಥಿಕ ಬಿಕ್ಕಟ್ಟು, ನ್ಯಾಯಾಲಯಗಳಲ್ಲಿ ಮೊಕದ್ದಮೆ ಇತ್ಯಾದಿ ಸಂಕಷ್ಟಗಳನ್ನು ಎದುರಿಸುತ್ತಿದೆ. ಇದಕ್ಕೆ ಕೇಂದ್ರದ ನೆರವು ಬೇಕಿದೆ ಎಂದು ಸಚಿವರಿಗೆ ಮನವಿ ಮಾಡಿದ್ದರು. ಇದಕ್ಕೆ ಸ್ಪಂದಿಸಿದ ಕುಮಾರಸ್ವಾಮಿ ಸಮಸ್ಯೆಗಳನ್ನು ಬಗೆಹರಿಸುವ ಭರವಸೆ ನೀಡಿದರು.

ಕೋಲಾರ ಸಂಸದ ಮಲ್ಲೇಶ ಬಾಬು, ಕಂಪನಿಯ ನಿರ್ದೇಶಕಿ ಸಮೀನಾ ಕೊಹ್ಲಿ ಸೇರಿದಂತೆ ಹಿರಿಯ ಅಧಿಕಾರಿಗಳು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net