

ಲಿಂಗದಹಳ್ಳಿ: ನಂದಿಬಟ್ಟಲು ಗ್ರಾಮ ಪಂಚಾಯಿತಿ ಕಚೇರಿ ನೂತನ ಕಟ್ಟಡ ನಿರ್ಮಾಣ ಕಾಮಗಾರಿ ಒಂದು ವರ್ಷದೊಳಗೆ ಪೂರ್ಣಗೊಳ್ಳಬೇಕು. ಕಟ್ಟಡ ನಿರ್ಮಾಣಕ್ಕೆ ನರೇಗಾ ಯೋಜನೆಯಡಿ 35 ಲಕ್ಷ ರೂ. ಹಾಗೂ 15ನೇ ಹಣಕಾಸು ಯೋಜನೆ ಮತ್ತು ಜಿಪಂನಿಂದ 20ಲಕ್ಷ ರೂ. ಅನುದಾನ ಕೊಡಿಸಲಾಗುವುದು ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ಹೇಳಿದರು.
ಮಂಗಳವಾರ ನಂದಿಬಟ್ಟಲು ಗ್ರಾಪಂ ಆವರಣದಲ್ಲಿ ನೂತನ ಗ್ರಾಪಂ ಕಚೇರಿ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೇರವೇರಿಸಿ ಮಾತನಾಡಿದ, ಶಾಸಕರು ತರೀಕೆರೆ ಕ್ಷೇತ್ರದ 47 ಗ್ರಾಮಗಳ ಜನರ ಮನೆಗಳಿಗೆ ಇದುವರೆಗೂ 94(ಸಿ) ಅಡಿ ಈ-ಖಾತೆ ನೊಂದಣಿಯಾಗದಿರುವುದರಿಂದ ಮನೆ ನಿರ್ಮಾಣಕ್ಕೆ ಅಗತ್ಯ ಸಾಲಸೌಲಭ್ಯ ಹಾಗೂ ಸರ್ಕಾರದ ವಿವಿಧ ಯೋಜನೆ ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಕಂದಾಯ, ಅರಣ್ಯ ಇಲಾಖೆ, ಗ್ರಾಪಂ ಸೇರಿದಂತೆ ಸಂಬಂಧ ಪಟ್ಟ ಎಲ್ಲ ಇಲಾಖೆ ಅಧಿಕಾರಿಗಳು, ಒಟ್ಟಾಗಿ, ಒಂದೊಂದು ಗ್ರಾಪಂಗೆ ಖುದ್ದಾಗಿ ಭೇಟಿ ನೀಡಿ ಸ್ಥಳದಲ್ಲಿಯೇ ಸಮಸ್ಯೆ ಬಗೆಹರಿಸಿ ಅಗತ್ಯ ದಾಖಲೆ ಪತ್ರ ಮಾಡಿಕೊಡುವಂತೆ ಸೂಚಿಸಲಾಗಿದೆ. ಇದೇ ನವೆಂಬರ್ ಕೊನೆ ಒಳಗೆ ಈ ಸಮಸ್ಯೆಗೆ ಪಡಿಹಾರ ನೀಡುವಂತೆ ಕ್ರಮ ಕೈಗೊಳ್ಳಲಾಗಿದೆ ಎಂದರು.
ತಾಲೂಕು ನರೇಗಾ ಉಪ ನಿರ್ದೇಶಕ ಯೋಗೀಶ್ ಮಾತನಾಡಿ, ಇದುವರೆಗೂ ನರೇಗಾ ಯೋಜನೆಯಡಿ ಉಡೇವಾ ಮುಂತಾದ ಗ್ರಾಪಂ ಕಚೇರಿ ಕಟ್ಟಡಗಳನ್ನು ಸುಸಜ್ಜಿತವಾಗಿ ನಿರ್ಮಾಣ ಮಾಡಲಾಗಿದೆ. ನಂದಿಬಟ್ಟಲು ಗ್ರಾಮದ ದಾನಿಗಳು ಕೊಡುಗೆಯಾಗಿ ನೀಡಿದ ಜಾಗದಲ್ಲಿ ತಾಲೂಕಿನಲ್ಲಿಯೇ ಮಾದರಿಯಾದ ಕಟ್ಟಡ ನಿರ್ಮಾಣ ಮಾಡಲು ಗ್ರಾಪಂನೊಂದಿಗೆ ಗ್ರಾಮಸ್ಥರು ಸಹಕಾರ ನೀಡಬೇಕು ಎಂದರು.