ಈ ಶಕ್ತಿಗೆ, ಇಲ್ಲಿರುವ, ಈಗ ಎಲ್ಲದರಲ್ಲೂ ಇರುವ ಶಕ್ತಿಗೆ ಸಾಮರ್ಥ್ಯವಿದೆ. ಆ ಈಶ, ಭಗವಂತ ಅದೇ ಮತ್ತು ಅದನ್ನು ತಲುಪುವ ಪಾಸ್ವರ್ಡ್ ಯಾವುದು? ಇಲ್ಲಿ ನಾವು ಬಿಗಿಯಾಗಿ ಹಿಡಿದಿಟ್ಟುಕೊಂಡಿರುವ ಭೌತಿಕವಾದುದನ್ನು ಬಿಟ್ಟುಬಿಡುವುದು. ಭೌತಿಕವಾದುದನ್ನು ಹಿಡಿದಿಟ್ಟುಕೊಳ್ಳುವುದು ಎಂದರೆ, ಮುಷ್ಟಿಯನ್ನು ಬಿಗಿ ಹಿಡಿದಿರುವುದು. ಅದು ಸೀಮಿತವಾಗಿರುತ್ತದೆ. ಅದನ್ನು ಸಡಿಲ ಬಿಡಿ. ನಿಮ್ಮ ಹಸ್ತಗಳನ್ನು ತೆರೆದಾಗ ಆಕಾಶವೆ ಸೀಮವಾಗುತ್ತದೆ. ನಿಮ್ಮ ಮನಸ್ಸು ಯಾವುದನ್ನು ಹಿಡಿದಿಟ್ಟುಕೊಳ್ಳುತ್ತದೊ, ಯಾವುದನ್ನು ಬಾಚಿ ಹಿಡಿದಿಟ್ಟುಕೊಳ್ಳುತ್ತದೊ ಅದರಿಂದ ನಿಮಗೆ ಸುಖ ಅಥವಾ ಸಂತೋಷ ಸಿಗುತ್ತಿದೆ ಅಥವಾ ನೋವನ್ನು ಅನುಭವಿಸುತ್ತಿದೆ. ಮನಸ್ಸು ಎರಡನ್ನೂ ಹಿಡಿದಿಟ್ಟುಕೊಳ್ಳುತ್ತದೆ. ಮೊಟ್ಟ ಮೊದಲನೆಯದಾಗಿ ನಿಮ್ಮ ಮನಸ್ಸು, ಯಾವುದು ಸುಖವನ್ನು ಕೊಡುತ್ತದೊ ಅದನ್ನೆ ಹಿಡಿದುಕೊಳ್ಳುತ್ತದೆ. ಸೀಮಿತವಾದುದನ್ನು ಹಿಡಿದಿಟ್ಟುಕೊಂಡಾಗ ಅನಂತವಾದದ್ದು ಕಣ್ಮರೆಯಾಗುತ್ತದೆ. ಅದು ಇಲ್ಲವೆಂದಲ್ಲ, ಆದರೆ ನೀವು ಬೇರೆ ಯಾವುದೊ ವಿಷಯದಲ್ಲಿ ಮಗ್ನರಾಗಿರುವುದರಿಂದ ಅದು ಕಣ್ಮರೆಯಾಗಿದೆಯಷ್ಟೆ. ಒಂದು ಸುಂದರವಾದ ಸಂಜೆಯ ಆಕಾಶವನ್ನು ನೋಡುತ್ತಿದ್ದಾಗ ಧೂಳಿನ ಒಂದು ಸಣ್ಣ ಕಣ ನಿಮ್ಮ ಕಣ್ಣೊಳಗೆ ಹೊಕ್ಕರೆ ಅಷ್ಟೆ ಮುಗಿಯಿತು! ನಿಮ್ಮ ದೃಷ್ಟಿಯನ್ನೆ ಅದು ಮರೆಮಾಚಿ, ಆಕಾಶವೆ ಕಾಣದಂತಾಗುತ್ತದೆ. ಎಲ್ಲವೂ ಭಗವಂತನಿಂದ ಪಸರಿಸಲ್ಪಟ್ಟಿದೆ ಎಂದು ತಿಳಿಯದೆಯೆ ಇಲ್ಲಿರುವ ಏನನ್ನಾದರೂ ಹಿಡಿದಿಟ್ಟುಕೊಳ್ಳುವ ಓಟದಲ್ಲಿ ನಮ್ಮನ್ನು ತೊಡಗಿಸಿಕೊಂಡರೆ ಆಗುವುದು ಇದೇ. ನಮಗೆ ಯಾವುದರಿಂದ ಸುಖ ಬರುತ್ತಿದೆ ಎನಿಸುತ್ತದೊ ಅದನ್ನು ಹಿಡಿದಿಟ್ಟುಕೊಳ್ಳಲು ಯತ್ನಿಸುತ್ತೇವೆ, ಆದರೆ ನಂತರ ನಮಗೆ ಅದರಿಂದ ನೋವು ಉಂಟಾಗುತ್ತದೆ. ಹಾಗಿದ್ದರೆ ಎಲ್ಲವನ್ನೂ ಬಿಟ್ಟು ಹಿಮಾಲಯಕ್ಕೆ ಓಡಿ ಹೋಗಿ ಎಂಬುದು ಇದರ ಅರ್ಥವೆ?... ಇಲ್ಲ! ಖಂಡಿತವಾಗಿಯೂ ಜಗತ್ತನ್ನು ಆನಂದಿಸಿ. ಈ ಜಗತ್ತು ಇರುವುದೇ ನೀವು ಆನಂದಿಸಲೆಂದು. ಆದರೆ ಅದನ್ನು ಹಿಡಿದಿಟ್ಟುಕೊಳ್ಳಬೇಡಿ, ಅದನ್ನು ತ್ಯಜಿಸಿ, ಬಿಟ್ಟುಬಿಡಿ, ವಿಶ್ರಮಿಸಿ. ನೀವು ವಿಶ್ರಮಿಸಿದಾಗ ಉತ್ತಮವಾಗಿ ಆನಂದಿಸಬಲ್ಲಿರಿ.
ಇತರರ ಸ್ವತ್ತನ್ನು ಬಯಸಬೇಡಿ. ಎಲ್ಲವೂ ಭಗವಂತನೆ ಮಾಡುತ್ತಲಿದ್ದರೆ, ನಾವು ಜೀವಿಸುವುದರ ಅರ್ಥವೇನು? ಜೀವನದ ಉದ್ದೇಶದ ಬಗೆಗಿನ ಪ್ರಶ್ನೆಯು ಪ್ರತಿಯೊಬ್ಬರ ಮನಸ್ಸಿನಲ್ಲೂ ಹಾದು ಹೋಗುತ್ತದೆ, ಒಮ್ಮೆಯಾದರೂ ಹಾದು ಹೋಗುತ್ತದೆ. ನೀವು ಬುದ್ಧಿವಂತರು ಎಂದು ನೀವು ಅಂದುಕೊಂಡಿದ್ದರೆ, ಈ ಪ್ರಶ್ನೆಯು ಒಂದಲ್ಲ ಒಂದು ಸಮಯದಲ್ಲಿ ನಿಮ್ಮಲ್ಲಿ ಏಳಲೇಬೇಕು. ಅದು ನಿಮ್ಮನ್ನು ಕಾಡಿರಬೇಕು. ಜೀವನವು ಕೇವಲ ಉಂಡು, ಮಲಗಿ, ನಿಮ್ಮ ದಿನಚರಿಯನ್ನು ಮಾಡುವುದರ ಬಗ್ಗೆ ಮಾತ್ರ ಆಗಿದೆಯೆ? ಅಷ್ಟೇಯೆ? ಉದ್ದೇಶವೇನು? ನಾನಿಲ್ಲಿಗೆ ಏಕೆ ಬಂದಿದ್ದೇನೆ? ಎಂಬ ಪ್ರಶ್ನೆ ನಿಮ್ಮನ್ನು ಮನದೊಳು ಒಮ್ಮೆಯಾದರೂ ಹಾದು ಹೋಗಿರಬೇಕು. ಜೀವನದ ಉದ್ದೇಶವೇನು? ಬೀಜ ಆಗಲೆ ಮೊಳಕೆ ಒಡೆಯಲಾರಂಭಿಸಿದೆ. ಅವಸರದಲ್ಲಿರಬೇಡಿ. ಅದು ಬಹಳ ಒಳ್ಳೆಯದು. ಈ ಪ್ರಶ್ನೆ ನಿಮ್ಮ ಮನಸ್ಸಿನೊಳಗೆ ಹಾದು ಹೋಗಬೇಕು. ನಿಮ್ಮಲ್ಲಿರುವ ಆತ್ಮಕ್ಕೆ ಅದು ಆಹ್ವಾನದಂತೆ. ಆದರೆ ಸ್ವಲ್ಪ ತಡೆಯಿರಿ. ಆ ಸಮಯದಲ್ಲಿ ಏನನ್ನೂ ಮಾಡುವುದು ಬೇಡ ಅನಿಸುತ್ತದೆ ಮತ್ತು ಯಾವುದೂ ಆಕರ್ಷಕವಾಗಿ ಕಾಣುವುದಿಲ್ಲ.
ಆಗ ಋಷಿಗಳು, ನಿಮ್ಮ ಕೆಲಸವನ್ನು ಮಾಡುತ್ತಲಿರಿ ಮತ್ತು ನೂರು ವರ್ಷ ಬಾಳಿ ಎನ್ನುತ್ತಾರೆ. ಪ್ರತಿಯೊಬ್ಬರೂ ಈ ಜಗತ್ತಿನಲ್ಲಿ ಕರ್ಮಗಳನ್ನು ಆಚರಿಸುತ್ತಾ ನೂರು ವರ್ಷ ಬಾಳಲಿ. ಇದಲ್ಲದೆ ಬೇರೆ ದಾರಿಯೇ ಇಲ್ಲ, ಕರ್ಮಗಳು ಮನುಷ್ಯನನ್ನು ಬಂಧಿಸುವುದಿಲ್ಲ ಎನ್ನುತ್ತಾರೆ ಋಷಿಗಳು. ಬೇರೆ ದಾರಿಯೇ ಇಲ್ಲ, ನೀವು ಮಾಡಲೇಬೇಕು. ನಿಮ್ಮ ಜೀವವನ್ನು ತೆಗೆದುಕೊಂಡು ಬಿಡಲು ಸಾಧ್ಯವಿಲ್ಲ. ಎಲ್ಲವೂ ಭಗವಂತನಿಂದ ಪಸರಿಸಲ್ಪಟ್ಟಿದೆಯೆಂದು ತಿಳಿದು ಕಾರ್ಯಪ್ರವೃತ್ತರಾಗಿ ನೂರು ವರ್ಷ ಬಾಳಿ!