

ಬೆಂಗಳೂರು: ಬೆಂಗಳೂರಿನ ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಗಲಭೆ ಪ್ರಕರಣ ಸಂಬಂಧ ಎಸ್ಡಿಪಿಐ ಹಾಗೂ ಪಿಎಫ್ಐ ಸಂಘಟನೆಗಳನ್ನು ನಿಷೇಧಿಸುವ ವಿಚಾರ ಗುರುವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಚರ್ಚೆಗೊಳಪಟ್ಟಿತಾದರೂ ಅಂತಿಮವಾಗಿ ಯಾವುದೇ ಸ್ಪಷ್ಟ ನಿರ್ಧಾರ ಹೊರಬೀಳಲಿಲ್ಲ.
ಇದೇ ವಿಚಾರವಾಗಿ ಸಾರ್ವಜನಿಕವಾಗಿ ಹಾಗೂ ಸಂಪುಟ ಸಭೆಗೆ ಮುನ್ನ ಕೆಲವು ಸಚಿವರು ನೀಡಿದ ವೀರಾವೇಶದ ಹೇಳಿಕೆಗಳು ಮಾತಾಗಿಯೇ ಉಳಿದವು. ಕಂದಾಯ ಸಚಿವರಂತೂ ತಮ್ಮಲ್ಲಿ 17 ಪ್ರಕರಣಗಳಿಗೆ ಸಂಬಂಧಿಸಿದ ದಾಖಲೆಗಳಿದ್ದು, ಇದನ್ನು ಇಟ್ಟುಕೊಂಡು ಸಮಾಜಘಾತುಕ ಸಂಘಟನೆಗಳನ್ನು ನಿಷೇಧಿಸಲು ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಘೋಷಿಸಿದ್ದರು. ಆದರೆ, ಸರ್ಕಾರದ ಬಳಿ ಈ ಕುರಿತ ವರದಿ ಹಾಗೂ ನಿಖರ ಸಾಕ್ಷ್ಯಗಳು ಇಲ್ಲದಿರುವುದರಿಂದ ಸಂಪುಟ ಸಭೆ ಯಾವುದೇ ಸ್ಪಷ್ಟ ತೀರ್ಮಾನ ಕೈಗೊಳ್ಳಲಾಗದೆ ಕೊನೆಗೊಂಡಿತು.
ಸ್ಪಷ್ಟ ನಿರ್ಧಾರ ತೆಗೆದುಕೊಂಡಿಲ್ಲ: ಸಂಪುಟ ಸಭೆಯಲ್ಲಿ ಈ ಕುರಿತು ರ್ಚಚಿಸಲಾಗಿದೆಯೇ ಹೊರತು ಯಾವುದೇ ಸ್ಪಷ್ಟ ನಿರ್ಧಾರ ಕೈಗೊಂಡಿಲ್ಲ. ಗೃಹ ಇಲಾಖೆಯಿಂದ ಮಾಹಿತಿ ತರಿಸಿ ಕ್ರಮ ಕೈಗೊಳ್ಳಬೇಕಾಗುತ್ತದೆ. ಈ ಕುರಿತು ನಮ್ಮಲ್ಲಿ ಯಾವುದೇ ನಿಖರ ವರದಿ ಇಲ್ಲ. ಪೊಲೀಸರಿಂದ ವರದಿ ಬಂದ ನಂತರ ನಿರ್ಧಾರ ತೆಗೆದುಕೊಳ್ಳಲಾಗುವುದು. ಕೇಂದ್ರ ಹಾಗೂ ಚುನಾವಣಾ ಆಯೋಗದ ಎದುರು ಏನು ವಾದ ಮಾಡಬೇಕೆಂದು ಚರ್ಚೆ ಮಾಡಲಾಗುವುದು, ಅಪರಾಧ ಚಟುವಟಿಕೆಗಳಲ್ಲಿ ಈ ಸಂಘಟನೆಗಳು ಶಾಮೀಲಾಗಿರುವುದು ಸಾಬೀತಾದಲ್ಲಿ ನಿಷೇಧಿಸಲು ಸರ್ಕಾರ ಹಿಂದೆಮುಂದೆ ನೋಡುವ ಪ್ರಶ್ನೆಯೇ ಇಲ್ಲ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಸ್ಪಷ್ಟಪಡಿಸಿದರು.
ಸಾಕ್ಷ್ಯ ಸಂಗ್ರಹ: ಗಲಭೆ ಕುರಿತು ಆಮೂಲಾಗ್ರ ತನಿಖೆ ನಡೆಸಿ ಸಾಕ್ಷ್ಯಾಧಾರಗಳನ್ನು ಕಲೆಹಾಕಿ ವರದಿ ಸಲ್ಲಿಸುವಂತೆ ಪೊಲೀಸ್ ಇಲಾಖೆಗೆ ಸೂಚನೆ ನೀಡಲಾಗಿದೆ ಎಂದು ಸಚಿವರು ಹೇಳಿದರು. ಡಿಜೆ ಹಳ್ಳಿ ಗಲಭೆಕೋರರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವ ಕುರಿತು ಮಾತನಾಡಿದ ಅವರು, ‘ಗಲಭೆ ದಿನದಿಂದ ಇಂದಿನವರೆಗೆ ಏನಾಗಿದೆ ಎಂದು ಗೃಹ ಸಚಿವರು ಸಿಎಂಗೆ ಸಂಪುಟ ಸಭೆಯಲ್ಲಿ ಮಾಹಿತಿ ನೀಡಿದ್ದಾರೆ’ ಎಂದು ತಿಳಿಸಿದರು.
ಕಾನೂನು ತಿದ್ದುಪಡಿ?
ಗಲಭೆಕೋರರ ಅಸ್ತಿ ಮುಟ್ಟುಗೋಲು ಹಾಕಿಕೊಳ್ಳುವ ಕುರಿತು ಚರ್ಚೆ ಮಾಡಲಾಗಿದೆ. ನಷ್ಟ ವಸೂಲಿಗೆ ಸಂಬಂಧಿಸಿದಂತೆ 1981ರ ಕಾನೂನು ಇದೆ. ಅದಕ್ಕೆ ತಿದ್ದುಪಡಿ ಮಾಡಬೇಕೇ? ಮಾಡಿದರೆ ಹೇಗೆ? ಎಂಬ ಬಗ್ಗೆ ಕಾನೂನು ತಜ್ಞರ ಜತೆ ರ್ಚಚಿಸಿ ನಿರ್ಧಾರ ತೆಗೆದುಕೊಳ್ಳಲಾಗುವುದೆಂದು ಮಾಧುಸ್ವಾಮಿ ತಿಳಿಸಿದರು.
ಕ್ಲೇಮ್ ಕಮಿಷನರ್ ನೇಮಕವಿಲ್ಲ:
ಈ ಹಿಂದೆ ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ಬಂಧನದ ಸಂದರ್ಭದಲ್ಲಿ ಆದ ಗಲಭೆ, ಮಹಾದಾಯಿ ಹೋರಾಟದ ಸಂದರ್ಭದಲ್ಲಿ ಉಂಟಾಗಿರುವ ಸಾರ್ವಜನಿಕ ಸ್ವತ್ತು ನಷ್ಟದ ಕುರಿತು ಫೆಬ್ರವರಿಯಲ್ಲೇ ಕ್ಲೇಮ್ ಕಮಿಷನರ್ ನೇಮಿಸುವಂತೆ ಹೈಕೋರ್ಟ್ ಸರ್ಕಾರಕ್ಕೆ ಸೂಚಿಸಿತ್ತು. ನಾವಿನ್ನೂ ಆ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸಚಿವ ಮಾಧುಸ್ವಾಮಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಯುಪಿ ಕಾಯ್ದೆ ಪರಾಮರ್ಶೆ
ಗಲಭೆ ನಡೆಸುವ ಸಂಘಟನೆ ನಿಷೇಧ ಹಾಗೂ ಗಲಭೆಕೋರರ ಆಸ್ತಿ ಮುಟ್ಟುಗೋಲಿಗೆ ಸಂಬಂಧಿಸಿದಂತೆ ಉತ್ತರ ಪ್ರದೇಶದಲ್ಲಿ ಕೆಲವು ಕಾಯ್ದೆ ಮಾಡಿದ್ದಾರೆ. ಅವುಗಳನ್ನು ಪರಾಮರ್ಶೆ ಮಾಡಬೇಕಾಗುತ್ತದೆ. ಗಲಭೆ ಕುರಿತು ಗೃಹ ಇಲಾಖೆ, ಪೊಲೀಸ್ ಮತ್ತು ಸರ್ಕಾರದ ಸಮಯೋಚಿತ ಕ್ರಮಗಳನ್ನು ಕ್ಯಾಬಿನೆಟ್ನಲ್ಲಿ ಶ್ಲಾಘಿಸಲಾಗಿದೆ ಎಂದು ಸಚಿವರು ಹೇಳಿದರು.
ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಗಲಭೆ ಹಿಂದೆ ಎಸ್ಡಿಪಿಐ ಕೈವಾಡ ಇರುವ ಬಗ್ಗೆ ಸೂಕ್ತ ಸಾಕ್ಷ್ಯಾಧಾರ ಲಭ್ಯವಾಗಿಲ್ಲ. ನಿರ್ದಿಷ್ಟ ಸಾಕ್ಷ್ಯ ದೊರೆತರಷ್ಟೇ ನಿಷೇಧ ಕುರಿತು ಪರಿಶೀಲಿಸಲಾಗುವುದು. ಎಸ್ಡಿಪಿಐ ಸಂಘಟನೆ ಮಾತ್ರವಲ್ಲ, ಒಂದು ರಾಜಕೀಯ ಪಕ್ಷವೂ ಹೌದು. ಹೀಗಾಗಿ ನಿಷೇಧದ ಬಗ್ಗೆ ಕಾನೂನಿನಲ್ಲಿ ತಿದ್ದುಪಡಿಗೆ ಅವಕಾಶ ಇದೆಯೇ ಎಂದು ಪರಿಶೀಲಿಸಲಾಗುತ್ತಿದೆ. ಜೆ.ಸಿ.ಮಾಧುಸ್ವಾಮಿ, ಕಾನೂನು, ಸಂಸದೀಯ ಸಚಿವ ಸಮಾಜಘಾತುಕ ಶಕ್ತಿಗಳನ್ನು ಸಹಿಸಿಕೊಳ್ಳುವ ಪ್ರಶ್ನೆಯೇ ಇಲ್ಲ. ಒಂದು ಘಟನೆಗೆ ಸೀಮಿತವಾಗಿ ನಿಷೇಧ ಹೇರುವ ನಿರ್ಧಾರ ಮಾಡಲು ಬರುವುದಿಲ್ಲ. ಈ ಹಿಂದೆ ನಡೆದಿರುವ ಹಲವಾರು ಘಟನೆಗಳ ಸಾಕ್ಷ್ಯ ಕಲೆಹಾಕುವ ಕೆಲಸ ನಡೆಯುತ್ತಿದೆ. ಸಿ.ಟಿ.ರವಿ, ಕನ್ನಡ ಮತ್ತು ಸಂಸ್ಕೃತಿ ಸಚಿವ. ಎಸ್ಡಿಪಿಐ ಬ್ಯಾನ್ ಆಗಬೇಕು ಎಂಬುದು ನಮ್ಮೆಲ್ಲ ನಾಯಕರ ಅಭಿಪ್ರಾಯವಾಗಿದೆ. ಕಾನೂನಿನಡಿಯೇ ದಾಖಲೆಗಳ ಸಮೇತ ನಿಷೇಧ ಆಗಬೇಕು, ದಾಖಲೆ ಕಲೆಹಾಕುವ ಕೆಲಸ ನಡೆಯುತ್ತಿದೆ. ದಾಖಲೆ ಸಿಕ್ಕ ನಂತರ ನಿಷೇಧ ಆಗುತ್ತದೆ. -ಆರ್.ಅಶೋಕ್, ಕಂದಾಯ ಸಚಿವ
ಬೆಂಗಳೂರು: ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಗಲಭೆ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳ(ಎನ್ಐಎ)ಕ್ಕೆ ವಹಿಸಲು ರಾಜ್ಯ ಸರ್ಕಾರ ಗಂಭೀರ ಚಿಂತನೆ ನಡೆಸಿದೆಯೆಂದು ತಿಳಿದು ಬಂದಿದೆ. ಈ ಗಲಭೆ ಪ್ರಕರಣದ 40ಕ್ಕೂ ಹೆಚ್ಚು ಆರೋಪಿಗಳಿಗೆ ಉಗ್ರ ಸಂಘಟನೆಗಳ ಜತೆ ನಂಟು ಇರುವ ಅನುಮಾನ ಮೂಡಿರುವುದು ಇದಕ್ಕೆ ಕಾರಣ. ಇಂಥ ಆರೋಪಿಗಳ ಮಾಹಿತಿಯನ್ನು ಈಗಾಗಲೇ ಸಿಸಿಬಿ ಪೊಲೀಸರು ಎನ್ಐಎಗೆ ನೀಡಿದ್ದಾರೆ. ಈ ಬಗ್ಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಹಾಗೂ ಹಿರಿಯ ಅಧಿಕಾರಿಗಳ ಅಭಿಪ್ರಾಯ ಪಡೆದಿರುವ ಸಿಎಂ ಬಿ.ಎಸ್.ಯಡಿಯೂರಪ್ಪ, ಇನ್ನೆರಡು ದಿನಗಳಲ್ಲಿ ಅಂತಿಮ ನಿರ್ಧಾರ ಪ್ರಕಟಿಸುವ ಸಾಧ್ಯತೆ ಇದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.