

ಕೋಲಾರ: ಮೈಕ್ರೋ ಫೈನಾನ್ಸ್ಗಳ ಹಾವಳಿ ನಿಯಂತ್ರಿಸಲು ಸರ್ಕಾರವು ಸುಗ್ರಿವಾಜ್ಞೆ ಕಾಯ್ದೆ ಜಾರಿ ಮಾಡಿದ್ದು, ಯಾರಾದರು ನಿಯಮ ಉಲ್ಲಂಘಿಸಿದರೆ ಶಿೆಗೆ ಒಳಗಾಗಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಎಚ್ಚರಿಸಿದರು.
ನಗರದ ಜಿಲ್ಲಾಡಳಿತ ಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹಣಕಾಸು ವ್ಯವಹಾರ ನಡೆಸುತ್ತಿರುವ ಫೈನಾನ್ಸ್ ಸಂಸ್ಥೆಗಳವರು ಕಡ್ಡಾಯವಾಗಿ ನೋಂದಣಿ ಮಾಡಿಸಿಕೊಳ್ಳಬೇಕು, ಜತೆಗೆ ಕಾಯ್ದೆ ಅರಿವು ಪಡೆದುಕೊಂಡು ಜಾಗ್ರತೆಯಿಂದ ವ್ಯವಹಾರ ನಡೆಸಬೇಕು ಎಂದು ತಿಳಿಸಿದರು.
ಆದೇಶ ಜಾರಿಯಾದ 30 ದಿನದ ಒಳಗೆ ಮೈಕ್ರೋ ಫೈನಾನ್ಸ್ ಹಾಗೂ ಲೇವಾದೇವಿ ಸಂಸ್ಥೆಗಳು ಕಡ್ಡಾಯ ನೋಂದಣಿ ಮಾಡಿಕೊಳ್ಳಬೇಕು. ಜಿಲ್ಲೆಯಲ್ಲಿ ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಆಸ್ತಿ ಜಪ್ತಿ ಮನೆಗಳ ಜಪ್ತಿ ಸೇರಿ ಮನೆಗಳ ಮೇಲೆ ನೋಟಿಸ್ ಅಂಟಿಸುವುದು ಕಂಡು ಬಂದಿಲ್ಲ, ಒಂದು ವೇಳೆ ಕಂಡುಬಂದರೆ ಅವರ ವಿರುದ್ಧ ಆಧ್ಯಾದೇಶದಂತೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಸಾಲ ಎಂದರೆ ಯಾವುದೇ ವ್ಯಕ್ತಿಗೆ ನೀಡಲಾದ ಹಣ, ರೈತರನ್ನು ದುರುಪಯೋಗ ಮಾಡಿಕೊಂಡು ನಿಮಗೆ ಸಾಲದ ರೂಪದಲ್ಲಿ ಬೀಜಗಳನ್ನು ವಿತರಿಸುವುದು, ಗೊಬ್ಬರ ಇತರ ವಸ್ತುಗಳ ರೂಪದಲ್ಲಿ ಮುಂಗಡವು ಸಹ ಸಾಲವೇ ಆಗಿರುತ್ತದೆ. ಕೈ ಸಾಲವು ಸಹ ಸಾಲವೇ, ಒಂದುವೇಳೆ ಬಲವಂತವಾಗಿ ವಸೂಲಿ ಮಾಡಿದರೆ ಅಪರಾಧವಾಗುತ್ತದೆ ಎಂದರು.
ಮಾ.11ರೊಳಗೆ ನೋಂದಣಿ ಕಡ್ಡಾಯ
ಕಾಯ್ದೆ ಪ್ರಕಾರ ಮಾ.11ರೊಳಗೆ ಕಡ್ಡಾಯವಾಗಿ ಜಿಲ್ಲಾಧಿಕಾರಿ ಕಚೇರಿಗೆ ಭೇಟಿ ನೋಂದಣಿ ಮಾಡಿಕೊಳ್ಳಬೇಕು. ಈ ಪರವಾನಿಗೆ 1 ವರ್ಷಕ್ಕೆ ಸಿಮೀತವಾಗಿರುತ್ತದೆ. ಪ್ರತಿ ವರ್ಷ ನವೀಕರಣ ಮಾಡಿಕೊಳ್ಳಬೇಕು. ಒಂದು ವೇಳೆ ಉಲ್ಲಂಘನೆ ಮಾಡಿದರೆ ಅಂತಹ ಸಂಸ್ಥೆಗಳ ಪರವಾನಗಿ ರದ್ದು ಮಾಡಿ ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ ಎಂದು ಮಾಹಿತಿ ನೀಡಿದರು. ಮರು ಪಾವತಿ ಮಾಡುವಾಗ ತಪ್ಪದೇ ರಸೀದಿ ನೀಡಬೇಕು. ವ್ಯವಹಾರವೂ ಕನ್ನಡದಲ್ಲಿರಬೇಕು, ನೋಂದಣಿಯಾದ ಸಾಲದ ಅಧಿಕೃತ ಕಚೇರಿ ಜಿಲ್ಲೆಯಲ್ಲಿ ತೆರದಿರಬೇಕು. ನೋಂದಣಿಯಾದ ಸಾಲಗಾರ ಕಂಪನಿ ಎಲ್ಲ ವಿವರಗಳನ್ನು ಒಳಗೊಂಡಂತೆ ವರ್ಷಕೊಮ್ಮೆ ದಾಖಲೆ ಸಲ್ಲಿಸಬೇಕು. ಸಾಲ ವಸೂಲಾತಿಗಾಗಿ ಬಲವಂತದ ಯಾವುದೇ ಕ್ರಮ ತೆಗೆದುಕೊಳ್ಳಬಾರದು. ನೋಟಿಸ್, ಜಪ್ತಿ, ಕುಟುಂಬಸ್ಥರಿಗೆ ಕಿರುಕುಳ ನೀಡುವ ತೊಂದರೆ ಮಾಡಿದರೆ, ಪೊಲೀಸ್ ಇಲಾಖೆಯು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಳ್ಳುತ್ತದೆ ಎಂದು ತಿಳಿಸಿದರು.
* ಫೈನಾನ್ಸ್ ಮಾಹಿತಿ
ಕೋಲಾರ ಜಿಲ್ಲೆಯಲ್ಲಿ ಒಟ್ಟು 17 ನೋಂದಣಿ ಮೈಕ್ರೋ ಫೈನಾನ್ಸ್ ಇದ್ದು, 98 ಶಾಖೆಗಳನ್ನು ಹೊಂದಿದೆ. ಆ ಪೈಕಿ 2,42,937 ಮಂದಿ 17.03 ಕೋಟಿ ರೂಪಾಯಿಗಳಷ್ಟು ವಹಿವಾಟು ನಡೆಸುತ್ತಿದ್ದಾರೆ. ಅದರಲ್ಲಿ ಸಾಲವನ್ನು ಕಟ್ಟದೆ ಇರುವ 28,294 ಖಾತೆಗಳಿವೆ ಹಾಗೂ ಖಾಸಗಿ ಲೇವಾದೇವಿದಾರರು ಮತ್ತು ಇತರೆ ಹಣಕಾಸಿನ ವ್ಯವಹಾರಗಳನ್ನು ಮಾಡುವವರು 26.74 ಕೋಟಿ ರೂಪಾಯಿಗಳನ್ನು ವ್ಯವಹಾರ ಮಾಡುತ್ತಿದ್ದಾರೆ ಎಂದು ಡಿಸಿ ಡಾ.ಎಂ.ಆರ್.ರವಿ ಮಾಹಿತಿ ನೀಡಿದರು.
* ದೂರು ನೀಡಿದರೆ ಕ್ರಮ
ಕಾಯ್ದೆಯಡಿ ಯಾವುದೇ ದೂರು ಬಂದರೂ ದಾಖಲಿಸಿಕೊಂಡು ಕ್ರಮಕೈಗೊಳ್ಳಲಾಗುವುದು. ಬೇರೆ ರಾಜ್ಯಗಳಿಂದ ಕೆಲ ಲೇವಾದೇವಿದಾರರು ಜಿಲ್ಲೆಗೆ ಬಂದು ಬಡ್ಡಿ ವ್ಯವಹಾರ ಮಾಡುತ್ತಿರುವುದು ಗಮನಕ್ಕಿದೆ. ಕಿರುಕುಳ ನೀಡುವವರ ಬಗ್ಗೆ ಗಮನಕ್ಕೆ ಬಂದರೆ ಸುಮೊಟೊ ಕಾಯ್ದೆಯಡಿ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ನಿಖಿಲ್ ತಿಳಿಸಿದರು.
ನಮಗೆ ತಾಂತ್ರಿಕ ಸಾಕ್ಷ$್ಯಗಳು ದೊರೆಯುತ್ತವೆ. ಇಂತಹ ಪ್ರಕರಣಗಳು ಕಂಡುಬಂದಲ್ಲಿ ಸಮೀಪದ ಪೊಲೀಸ್ ಠಾಣೆಯಲ್ಲಿ ದೂರು ನೀಡಿದರೆ ತಕ್ಷಣ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.
* ಅನಧಿಕೃತವಾಗಿ ವಸೂಲಿ ಮಾಡುವಂತಿಲ್ಲ
ಕೆಜಿಎಫ್ ಪೊಲೀಸ್ ವರಿಷ್ಠಾಧಿಕಾರಿ ಶಾಂತರಾಜು ಮಾತನಾಡಿ, ಬಲವಂತಕರಣ ಬಗ್ಗೆ ಆಧ್ಯಾದೇಶ ಕಾಯ್ದೆಯಲ್ಲಿ 8ನೇ ಕಲಂನಲ್ಲಿ ಸವಿಸ್ತಾರವಾಗಿ ತಿಳಿಸಿದ್ದಾರೆ. ಮೈಕ್ರೋ ಫೈನಾನ್ಸ್, ಲೇವಾದೇವಿದಾರರು ಯಾವುದೇ ವ್ಯಕ್ತಿಯು ತಿಂಗಳಿಗೆ, ವಾರಕ್ಕೆ, ಬಡ್ಡಿ ವ್ಯವಹಾರ ಮಾಡುವವರು, ಹಣದ ರೂಪದಲ್ಲಿ ಸಾಲ ನೀಡುವವರು ಕಡ್ಡಾಯವಾಗಿ ನೋಂದಣಿ ಮಾಡಿಸಿಕೊಳ್ಳಬೇಕು ಎಂದು ಹೇಳಿದರು. ಸಾಲದ ವಸೂಲಿಗೆ ತಾವು ಸಿಬ್ಬಂದಿಯನ್ನು ಆಯ್ಕೆ ಮಾಡಿಕೊಳ್ಳುವಾಗ ಅಪರಾಧ ಚಟುವಟಿಕೆಗಳಲ್ಲಿ ತೋಡಗಿದ್ದರಾಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಅನಧಿಕೃತ ವ್ಯಕ್ತಿಗಳು ಹೋಗಿ ವಸೂಲಿಯಲ್ಲಿ ತೋಡಗಿಸಿಕೊಳ್ಳುವಂತಿಲ್ಲ. ಸಾರ್ವಜನಿಕರು ಸಹಾಯವಾಣಿ 112ಗೆ ಕರೆ ಮಾಡಿದರೆ ನೆರವಿಗೆ ಧಾವಿಸಲಾಗುವುದು ಎಂದು ತಿಳಿಸಿದರು.