ಸಾಧನೆಯಿಂದ ಶ್ರೇಯಸ್ಸು, ಸಂಪತ್ತು ಪ್ರಾಪ್ತಿ: ರಂಭಾಪುರಿಶ್ರೀ

rambhapuri sree dharma jagruti sabhe
ಶಿವಮೊಗ್ಗದ ವಿಜಯನಗರದಲ್ಲಿ ಧರ್ಮ ಜಾಗೃತಿ ಸಭೆಯನ್ನು ರಂಭಾಪುರಿ ಶ್ರೀ ಡಾ. ವೀರಸೋಮೇಶ್ವರ ಜಗದ್ಗುರು ಉದ್ಘಾಟಿಸಿದರು. ಶ್ರೀ ರೇಣುಕ ಶಿವಾಚಾರ್ಯ ಸ್ವಾಮೀಜಿ, ಡಾ. ನಾಗಭೂಷಣ ಶಿವಾಚಾರ್ಯ ಸ್ವಾಮೀಜಿ, ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ, ಎನ್.ಮಹಾಲಿಂಗಯ್ಯ ಶಾಸ್ತ್ರಿ, ಮರುಳೇಶ, ಓಂಕಾರಪ್ಪ ಜವಳಿ, ದುಂಡಯ್ಯ ಹಿರೇಮಠ, ಮಹೇಶ್ವರಸ್ವಾಮಿ ಹಿರೇಮಠ ಇದ್ದರು.
Published on

ಶಿವಮೊಗ್ಗ: ಸಾಧನೆ ಮಾತನಾಡಬೇಕು ವಿನಃ ಮಾತನಾಡುವುದೇ ಸಾಧನೆ ಆಗಬಾರದು. ಸಾಧನೆಯಿಂದ ಶ್ರೇಯಸ್ಸು , ಸಂಪತ್ತು ಪ್ರಾಪ್ತಿಯಾಗುವುದೆಂದು ಬಾಳೆಹೊನ್ನೂರು ರಂಭಾಪುರಿ ಮಠದ ಶ್ರೀ ಡಾ.ವೀರಸೋಮೇಶ್ವರ ಜಗದ್ಗುರು ಅಭಿಪ್ರಾಯಪಟ್ಟರು.

ಗೋಪಾಳ ವಿಜಯನಗರದಲ್ಲಿ ಭಾನುವಾರ ಇಷ್ಟಲಿಂಗ ಮಹಾಪೂಜೆ ಮತ್ತು ಧರ್ಮ ಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಜೀವನದಲ್ಲಿ ಬಹಳಷ್ಟು ಜನರು ಸತ್ಫಲಗಳನ್ನು ಬಯಸುತ್ತಾರೆ. ಆದರೆ ಸಾಧನೆ ಶ್ರಮವಿಲ್ಲದೇ ಸತ್ಫಲ ದೊರಕಲು ಸಾಧ್ಯವಿಲ್ಲ. ಕಾಯಕದಿಂದಲೇ ಕಳಾ ಚೈತನ್ಯ ದೊರಕುವುದೆಂದು ಶ್ರೀ ಜಗದ್ಗುರು ರೇಣುಕಾಚಾರ್ಯರು ಮತ್ತು ಕಾಯಕವೇ ಕೈಲಾಸವೆಂದು ಶರಣರು ಹೇಳಿದ್ದುಂಟು. ಬೇವು ಬಿತ್ತಿ ಮಾವಿನ ಫಲ ಬಯಸಿದರೆ ದೊರಕದು. ಬಿತ್ತಿದ್ದನ್ನೇ ಬೆಳೆದುಕೊಳ್ಳಬೇಕಾಗುತ್ತದೆ ಎಂದರು.
ಎಡೆಯೂರು ಕ್ಷೇತ್ರದ ಶ್ರೀ ರೇಣುಕ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಒಬ್ಬ ಸಾಮಾನ್ಯ ವ್ಯಕ್ತಿ ಶ್ರಮದಿಂದ ಬೆಳೆದಾಗ ಇತರರು ಹರುಷಪಡಬೇಕೆ ಹೊರತು ಅಸೂಯೆ ಪಡಬಾರದು. ಅವರ ಬೆಳವಣಿಗೆಯ ಹಿಂದೆ ಅಪಾರ ಶ್ರಮವಿದೆ ಎಂಬುದನ್ನು ಮರೆಯಬಾರದು ಎಂದರು.
ಮಳಲಿ ಡಾ. ನಾಗಭೂಷಣ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಪ್ರತಿಯೊಬ್ಬ ಮನುಷ್ಯನಿಗೆ ಜೀವನದಲ್ಲಿ ಗುರಿ ಮತ್ತು ಸಮರ್ಥ ಗುರುವಿನ ಮಾರ್ಗದರ್ಶನ ಇರಬೇಕೆಂದರು. ಬಿಳಕಿ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು. ಎನ್.ಮಹಾಲಿಂಗಯ್ಯ ಶಾಸ್ತ್ರಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಶ್ರೀ ಬಸವೇಶ್ವರ ವೀರಶೈವ ಸಮಾಜ ಸೇವಾ ಸಂಘದ ಅಧ್ಯಕ್ಷ ಎಸ್.ಎಸ್.ಜ್ಯೋತಿಪ್ರಕಾಶ್, ಪ್ರಮುಖರಾದ ಮರುಳೇಶ, ಓಂಕಾರಪ್ಪ ಜವಳಿ, ದುಂಡಯ್ಯ ಹಿರೇಮಠ, ಮಹೇಶ್ವರಸ್ವಾಮಿ ಹಿರೇಮಠ, ಶಾಂತಾ ಆನಂದ ಉಪಸ್ಥಿತರಿದ್ದರು. ಸಮಾರಂಭಕ್ಕೂ ಮುನ್ನ ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರುಗಳು ಇಷ್ಟಲಿಂಗ ಪೂಜೆ ನೆರವೇರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net