ಮದ್ವೆ ಆಗಿ ಆಸಿಡ್​ ದಾಳಿ ಸಂತ್ರಸ್ತೆ ಬಾಳಿಗೆ ಬೆಳಕಾದ ಯುವಕ: ಇಬ್ಬರ ಲವ್​ ಸ್ಟೋರಿ ಕೇಳಿದ್ರೆ ಮನಕಲಕುತ್ತೆ..!

Pramodini Feature
Published on

ಭುವನೇಶ್ವರ್​: ಒಡಿಶಾದ ಆಸಿಡ್​ ದಾಳಿಯ ಸಂತ್ರಸ್ತೆ ಪ್ರಮೋದಿನಿ ರೌಲ್​ ಹೊಸ ಜೀವನ ಪ್ರಾರಂಭಿಸಲು ಸಜ್ಜಾಗಿದ್ದಾರೆ. ಆಸಿಡ್​ ದಾಳಿಯಿಂದ ಅನೇಕ ವರ್ಷಗಳವರೆಗೆ ಮಾನಸಿಕ ನೆಮ್ಮದಿಯನ್ನು ಕಳೆದುಕೊಂಡಿದ್ದ ಪ್ರಮೋದಿನಿ ಬಾಳಿಗೆ ಸರೋಜ್​ ಸಾಹು ಬೆಳಕಾಗಿ ಬಂದಿದ್ದಾರೆ.

ಪ್ರಮೋದಿನಿ ಮತ್ತು ಸರೋಜ್​ ಮದುವೆ ಸೋಮವಾರ (ಮಾರ್ಚ್​ 1) ಒಡಿಶಾದ ಜಗತ್ಸಿಂಗ್​ಪುರದಲ್ಲಿ ಕುಟುಂಬ ಹಾಗು ಆಪ್ತರ ಸಮ್ಮುಖದಲ್ಲಿ ನಡೆದಿದೆ. ನವಜೋಡಿಗಳು ಸಪ್ತಪದಿ ತುಳಿಯುವ ಮೂಲಕ ನಿಜವಾದ ಪ್ರೀತಿ ಏನು ಎಂಬುದನ್ನು ಪ್ರತಿಯೊಬ್ಬರಿಗೂ ನಿರೂಪಿಸಿದ್ದಾರೆ.

28 ವರ್ಷದ ಪ್ರಮೋದಿನಿಯನ್ನು ರಾಣಿ ಹೆಸರಿನಿಂದಲೂ ಕರೆಯುತ್ತಾರೆ. 2018ರ ಪ್ರೇಮಿಗಳ ದಿನದಂದು ಬಹುಕಾಲದ ಸ್ನೇಹಿತ ಸರೋಜ್​ ಜತೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಸರಳ ಸಮಾರಂಭದಲ್ಲಿ ಇಬ್ಬರು ಪರಸ್ಪರ ಉಂಗುರ ಬದಲಾಯಿಸಿಕೊಂಡಿದ್ದರು. ಈ ವೇಳೆ 20 ಮಂದಿ ಆಸಿಡ್​ ಸಂತ್ರಸ್ತರು ಡ್ಯಾನ್ಸ್​ ಸಹ ಮಾಡಿದ್ದರು.

ಆಸಿಡ್​ ದಾಳಿ ಹಿನ್ನೆಲೆ ಏನು?

ಪ್ರಮೋದಿನಿ ಜೀವನ ಕರಾಳ ತಿರುವು ಪಡೆದುಕೊಂಡಿದ್ದೇ 2009ರ ಮೇ 4ರಂದು. ಮದುವೆ ಪ್ರಸ್ತಾವನೆಯನ್ನು ನಿರಾಕರಿಸಿದ್ದಕ್ಕೆ ಪ್ಯಾರಾಮಿಲಿಟಿರ್​ ಜವಾನ್​ ಓರ್ವ ಪ್ರಮೋದಿನಿ ಮೇಲೆ ಜಗತ್ಸಿಂಗ್​​ಪುರದಲ್ಲಿ ಆಸಿಡ್​ ದಾಳಿ ಮಾಡಿದ್ದ. ಈ ವೇಳೆ ರಾಣಿಗೆ ಕೇವಲ 16 ವರ್ಷವಷ್ಟೇ. ಶೇ.80 ರಷ್ಟು ಸುಟ್ಟಗಾಯಗಳಿಂದ ಬಳಲಿದ ರಾಣಿ ತನ್ನ ಕಣ್ಣಿನ ದೃಷ್ಟಿಯನ್ನೇ ಕಳೆದುಕೊಂಡಳು. ಸುಮಾರು 9 ತಿಂಗಳು ಕಾಲ ಐಸಿಯುನಲ್ಲಿ ಇದ್ದಳು. ಸುಮಾರು 5 ವರ್ಷ ಕಟಕ್​ ಆಸ್ಪತ್ರೆಯಲ್ಲಿ ರಾಣಿ ನೋವಿನ ದಿನಗಳನ್ನು ಕಳೆದಳು.

ಕತ್ತಲಾಗಿದ್ದ ಬಾಳಿಗೆ ಬೆಳಕಾಗಿ ಬಂದ ಸರೋಜ್​

2014ರಲ್ಲಿ ರಾಣಿ ಖಾಸಗಿ ಕ್ಲೀನಿಕ್​ ಒಂದರಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗ ಮೆಡಿಕಲ್​ ರೆಪ್ರೆಸೆಂಟೇಟಿವ್​ ಸರೋಜ್ ಭೇಟಿಯಾಗುತ್ತದೆ. ಇಬ್ಬರ ಭೇಟಿ ಪ್ರೇಮಕ್ಕೆ ತಿರುಗುತ್ತದೆ. ಬಳಿಕ ರಾಣಿಯನ್ನು ನೋಡಿಕೊಳ್ಳಲು ಮತ್ತು ಆಕೆಯ ಆರೈಕೆ ಮಾಡಲು ಸರೋಜ್​ ತನ್ನ ಕೆಲಸವನ್ನು ತೊರೆಯುತ್ತಾನೆ. ರಾಣಿ ಗುಣಮುಖಳಾಗಲು ಆರಂಭಿಸಿದಾಗ 2015ರಲ್ಲಿ ಶೀರೋಸ್​ ಸಹಾಯವಾಣಿಯಲ್ಲಿ ಕೆಲಸಕ್ಕೆ ಸೇರುತ್ತಾಳೆ. ಇತ್ತ ಸರೋಜ್​ ಕೆಫೆಯೊಂದರಲ್ಲಿ ಸೇರಿಕೊಳ್ಳುತ್ತಾರೆ.

ಹೀಗಿರುವಾಗ 2016ರಲ್ಲಿ ಸರೋಜ್​, ರಾಣಿಗೆ ಮದುವೆ ಪ್ರಸ್ತಾವನೆ ಮುಂದಿಡುತ್ತಾನೆ. ಆದರೆ, ಸರೋಜ್​ನನ್ನು ನೋಡುವಷ್ಟು ಆಕೆಯ ದೃಷ್ಟಿ ಇರುವುದಿಲ್ಲ. ಹೀಗಿರುವಾಗ 2017ರ ಜುಲೈನಲ್ಲಿ ಮತ್ತೊಂದು ಆಪರೇಷನ್​ ಆದಾಗ ರಾಣಿಗೆ ಸ್ವಲ್ಪ ದೃಷ್ಟಿ ಬರುತ್ತದೆ. ಇದಾದ ಬಳಿಕ ಇಬ್ಬರು ನಿಶ್ಚಿತಾರ್ಥ ಮಾಡಿಕೊಳ್ಳುತ್ತಾರೆ. ಇದೀಗ ಮದುವೆಯಾಗು ಮೂಲದ ಹೊಸ ಬಾಳು ಪ್ರವೇಶಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net