

Acid Attack: ಶಿಕ್ಷಕಿಯ ಮುಖಕ್ಕೆ ಆ್ಯಸಿಡ್ ಎರಚಿದ ಘಟನೆಯೊಂದು ಉತ್ತರಪ್ರದೇಶದ ಸಂಭಲ್ನಲ್ಲಿ ವರದಿಯಾಗಿದೆ. ಓರ್ವ ಕಿರಾತಕಿ, ಇಬ್ಬರು ಮಹಿಳೆಯರ ಹೆಸರನ್ನು ಒಳಗೊಂಡು ತನ್ನ ದ್ವೇಷದ ಕಿಚ್ಚನ್ನು ಪ್ರಿಯಕರನ ಮೂಲಕ ತೀರಿಸಿಕೊಂಡ ಘಟನೆ ಸ್ವತಃ ಆರೋಪಿಯನ್ನೇ ಅಚ್ಚರಿಗೆ ದೂಡಿದೆ.
ಶಿಕ್ಷಕಿ ಮೇಲೆ ಆ್ಯಸಿಡ್ ದಾಳಿ ನಡೆಸಿದ ವ್ಯಕ್ತಿಯನ್ನು ಪೊಲೀಸರು ಎನ್ಕೌಂಟರ್ ಮೂಲಕ ಸದ್ಯ ಬಂಧಿಸಿದ್ದಾರೆ. ಇದೇ ಪ್ರಕರಣದಲ್ಲಿ ಆತನನ್ನು ಆ್ಯಸಿಡ್ ಎರಚುವಂತೆ ಹೇಳಿದ ಮಹಿಳೆಯನ್ನು ಸಹ ಅರೆಸ್ಟ್ ಮಾಡಲಾಗಿದ್ದು, ತನಿಖೆಗೆ ಒಳಪಡಿಸಲಾಗಿದೆ. ವರದಿಯ ಪ್ರಕಾರ, ಕಿರಾತಕಿ ಮಹಿಳೆಯನ್ನು ಜಾಹ್ನವಿ ಅಲಿಯಾಸ್ ಅರ್ಚನಾ ಎಂದು ಗುರುತಿಸಲಾಗಿದೆ.
ಪೊಲೀಸರ ಪ್ರಕಾರ, ಆರೋಪಿ ವ್ಯಕ್ತಿಯನ್ನು ಅಮ್ರೋಹಾ ಜಿಲ್ಲೆಯ ಟಿಗ್ರಿ ಗ್ರಾಮದ ನಿವಾಸಿ ನಿಶು ತಿವಾರಿ (30) ಎಂದು ಗುರುತಿಸಲಾಗಿದೆ. ಸೆಪ್ಟೆಂಬರ್ 23ರಂದು, ನಖಾಸಾ ಪೊಲೀಸ್ ಠಾಣೆ ಪ್ರದೇಶದಲ್ಲಿ, ಶಿಕ್ಷಕಿ ಶಾಲೆಯಿಂದ ಮನೆಗೆ ಹಿಂತಿರುಗುತ್ತಿದ್ದಾಗ, ಸ್ಕೂಟರ್ನಲ್ಲಿ ಬಂದ ಈತ, ಆಕೆಯ ಮುಖಕ್ಕೆ ಆ್ಯಸಿಡ್ ಎರಚಿ, ಸ್ಥಳದಿಂದ ಪರಾರಿಯಾಗಿದ್ದ. ದಾಳಿಯಲ್ಲಿ ಶಿಕ್ಷಕಿಯ ಮುಖ ಶೇ.20ರಿಂದ 30ರಷ್ಟು ಸುಟ್ಟ ಗಾಯಗಳಿಂದ ಕೂಡಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಕೃಷ್ಣ ಕುಮಾರ್ ತಿಳಿಸಿದ್ದಾರೆ.
ಆರೋಪಿ ನಿಶು ಎಂಬಾತನ ಕಾಲಿಗೆ ಗುಂಡು ಹಾರಿಸಿದ ಪೊಲೀಸರು, ಕಡೆಗೂ ಆತನನ್ನು ಬಂಧಿಸುವಲ್ಲಿ ಯಶಸ್ವಿಯಾದರು. ಈ ವೇಳೆ ಆತನ ಬಳಿಯಿದ್ದ ಪಿಸ್ತೂಲ್, ಎರಡು ಕಾರ್ಟ್ರಿಡ್ಜ್ ಮತ್ತು ಸ್ಕೂಟರ್ ಅನ್ನು ವಶಪಡಿಸಿಕೊಳ್ಳಲಾಗಿದೆ. ತೀವ್ರ ಸುಟ್ಟಗಾಯಗಳಿಂದ ಬಳಲುತ್ತಿರುವ ಶಿಕ್ಷಕಿಗೆ ಸದ್ಯ ಹೆಚ್ಚಿನ ಚಿಕಿತ್ಸೆ ನೀಡಲಾಗಿದೆ. ಇನ್ನು ವಿಚಾರಣೆಯಲ್ಲಿ ಸತ್ಯ ಕಕ್ಕಿದ ಆರೋಪಿ ನಿಶು, ನನಗೆ ಆಕೆ (ನಕಲಿ ಹೆಸರಿನ ಮಹಿಳೆ) ಸೋಷಿಯಲ್ ಮೀಡಿಯಾದಲ್ಲಿ ಪರಿಚಯವಾದಳು. ನನ್ನನ್ನು ಸಂಬಂಧದಲ್ಲಿ ಇರುವಂತೆ ಆಮಿಷವೊಡ್ಡಿದ್ದಳು. ನಾನು 'ಡಾ. ಅರ್ಚನಾ' ಎಂದು ಹೇಳಿಕೊಂಡಳು. ತನ್ನ ಸಹೋದರಿ 'ಜಾಹ್ನವಿ' ಯೋಧನನ್ನು ಇಷ್ಟಪಟ್ಟಿದ್ದಾಳೆ. ಆದರೆ, ಅವರಿಗೆ ಅದಾಗಲೇ ಓರ್ವ ಪ್ರೇಯಸಿ ಇದ್ದಾಳೆ. ಹೀಗಾಗಿ, ಅವರು ಮದುವೆ ಆಗಲ್ಲ ಎಂದಿದ್ದಾರೆ. ನೀನು ಅವರು ಒಪ್ಪಿಕೊಂಡಿರುವ ಯುವತಿಯ ಮೇಲೆ ಆ್ಯಸಿಡ್ ಎರಚಬೇಕು ಎಂದು ಆಮಿಷವೊಡ್ಡಿದ್ದಾಗಿ ತನಿಖೆಯಲ್ಲಿ ಹೇಳಿಕೊಂಡಿದ್ದಾನೆ.
ಈ ಹಿಂದೆ ಕೆಮಿಕಲ್ ಲ್ಯಾಬ್ನಲ್ಲಿ ಕೆಲಸ ಮಾಡುತ್ತಿದ್ದ ನಿಶು, ಗೊತ್ತಿರುವ ಕಂಪನಿಯಿಂದ ಆ್ಯಸಿಡ್ ಖರೀದಿಸಿ, ಶಿಕ್ಷಕಿ ಶಾಲೆಯಿಂದ ಹೊರಬರುವ ಸಮಯಕ್ಕೆ ಕಾದು, ಮುಖಕ್ಕೆ ಎರಚಿದ್ದಾನೆ. ತನಿಖೆಯಲ್ಲಿ ಜಾಹ್ನವಿ ಮತ್ತು ಡಾ. ಅರ್ಚನಾ ಇಬ್ಬರೂ ಒಬ್ಬರೇ ಎಂಬ ಸಂಗತಿ ಪೊಲೀಸರಿಗೆ ಸ್ಪಷ್ಟವಾಗಿದೆ. ಆರೋಪಿ ಮಹಿಳೆಗೆ ಈಗಾಗಲೇ ವಿವಾಹವಾಗಿದ್ದು, ಮೂವರು ಮಕ್ಕಳಿದ್ದಾರೆ ಎಂದು ಹೇಳಲಾಗಿದೆ,(ಏಜೆನ್ಸೀಸ್).