

ಶಿಕಾರಿಪುರ: ರಕ್ತದಾನದಿಂದ ಒಂದು ಜೀವ ಉಳಿಸಿದ ಸಂತೃಪ್ತಿ ನಮ್ಮದಾಗುತ್ತದೆ. ರಕ್ತದಾನವು ಎಲ್ಲ ದಾನಗಳಿಗಿಂತ ಶ್ರೇಷ್ಠ ದಾನ ಎಂದು ವಿರಕ್ತ ಮಠದ ಶ್ರೀ ಚನ್ನಬಸವ ಸ್ವಾಮೀಜಿ ಹೇಳಿದರು.
ವಿರಕ್ತಮಠದಲ್ಲಿ ಶ್ರೀ ಜಗಜ್ಯೋತಿ ಬಸವೇಶ್ವರ ಯುವ ಬಳಗ, ರೆಡ್‌ಕ್ರಾಸ್ ಸಂಜೀವಿನಿ ರಕ್ತನಿಧಿ ಕೇಂದ್ರ, ಅಖಿಲ ಭಾರತ ವೀರಶೈವ ಮಹಾಸಭಾದಿಂದ ಭಾನುವಾರ ಆಯೋಜಿಸಿದ್ದ ಸ್ವಯಂಪ್ರೇರಿತ ರಕ್ತದಾನ ಶಿಬಿರದಲ್ಲಿ ಮಾತನಾಡಿದರು.
ಕೆಲ ಸಂದರ್ಭಗಳಲ್ಲಿ ಸರಿಯಾದ ಸಮಯಕ್ಕೆ ರಕ್ತ ಸಿಗದೆ ರೋಗಿ, ಗಾಯಾಳುಗಳು ಪ್ರಾಣ ಕಳೆದುಕೊಂಡಿರುವ ಉದಾಹರಣೆಗಳಿವೆ. ನೀವು ಮಾಡುವ ರಕ್ತದಾನ ನಾಲ್ವರ ಜೀವ ಉಳಿಸಬಲ್ಲದು. ಶ್ರೀ ಜಗಜ್ಯೋತಿ ಬಸವೇಶ್ವರ ಯುವ ಬಳಗ ಪ್ರತಿ ವರ್ಷ ರಕ್ತದಾನ ಶಿಬಿರ ಏರ್ಪಡಿಸುವುದು ಶ್ಲಾಘನೀಯ ಕಾರ್ಯ ಎಂದು ತಿಳಿಸಿದರು.
ಸಮಾಜಮುಖಿ ಬದುಕು ನಮ್ಮನ್ನು ಶ್ರೇಷ್ಠತೆಯ ದಾರಿಯಲ್ಲಿ ಕೊಂಡೊಯ್ಯುತ್ತದೆ. ಯುವಜನರು ನಾಡಿನ ಶಕ್ತಿ. ಹೆಚ್ಚು ರಕ್ತದಾನ ಮಾಡಿ ಜೀವ ಉಳಿಸುವ ಪುಣ್ಯ ಸಂಪಾದಿಸಬೇಕು. ಸಮಾಜದ ಋಣ ತೀರಿಸುವ ಕೆಲಸ ಮಾಡಬೇಕು ಎಂದರು.
ಬಸವಾಶ್ರಮದ ಮಾತೆ ಶರಣಾಂಬಿಕೆ, ಅಂಗಡಿ ಜಗದೀಶ್, ಮಹೇಶ್‌ಕುಮಾರ್, ಟಿ.ಕೆ.ಪ್ರವೀಣ್‌ಕುಮಾರ್, ಪ್ರಸಾದ್, ಪ್ರವೀಣ್, ಸಿದ್ದಲಿಂಗೇಶ, ಸಂಜಿತ್, ವಿವೇಕ್, ವಿನಾಯಕ, ಮೃತ್ಯುಂಜಯ, ವಾಗೀಶ್ ಸ್ವಾಮಿ ಇದ್ದರು.