

ಕೋಲಾರ: ಅಪೌಷ್ಟಿಕತೆಯನ್ನು ನಿಮೂರ್ಲನೆ ಮಾಡುವುದು ಪೋಷಣ್ ಅಭಿಯಾನದ ಉದ್ದೇಶವಾಗಿದ್ದು, ಇದರ ಗುರಿ ಸಾಧನೆಗೆ ಅಧಿಕಾರಿಗಳು ಕಾರ್ಯಕ್ರಮವನ್ನು ಸಮರ್ಪಕವಾಗಿ ಅನುಷ್ಠಾನಕ್ಕೆ ತರಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಪ್ರವಿಣ್.ಪಿ.ಬಾಗೇವಾಡಿ ಹೇಳಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಶುಕ್ರವಾರ ಹಮ್ಮಿಕೊಂಡಿದ್ದ 8ನೇ ವರ್ಷದ ಪೋಷಣ್ ಮಾಸಾಚರಣೆಯಲ್ಲಿ ಮಾತನಾಡಿದರು.
ಸ್ಟಂಟಿಂಗ್ ಮತ್ತು ವೇಸ್ಟಿಂಗ್ ಅನ್ನು ಎನ್ಎಫ್ಎಚ್ಎಸ್ ಸರ್ವೇ ಪ್ರಕಾರ ಕಡಿಮೆ ಗೊಳಿಸಬೇಕು. ಕೋಲಾರವನ್ನು ಅಪೌಷ್ಟಿಕಮುಕ್ತ ಜಿಲ್ಲೆಯನ್ನಾಗಿ ಮಾಡಲು ಪಣತೊಡಗಬೇಕು ಎಂದು ಸೂಚಿಸಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಆರ್.ನಟೇಶ್ ಮಾತನಾಡಿ, ಜಿಲ್ಲೆಯ ಎಲ್ಲ ಅಂಗನವಾಡಿ ಕಾರ್ಯಕರ್ತೆಯರು ತಾಯಂದಿರು ಆಗಿರುವುದರಿಂದ ಮಕ್ಕಳ ಹಾರೈಕೆಯಲ್ಲಿ ಪೌಷ್ಟಿಕತೆಯನ್ನು ಕಾಪಾಡಿಕೊಂಡಲ್ಲಿ ಪೌಷ್ಟಿಕ ರಾಷ್ಟ್ರವನ್ನಾಗಿ ಕಟ್ಟಬಹುದು ಎಂದು ಹೇಳಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ನಾರಾಯಣಸ್ವಾಮಿ ಮಾತನಾಡಿ, ಪೋಷಣ್ ಅಭಿಯಾನ ಯೋಜನೆಯು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಕಾರ್ಯಕ್ರಮವಾಗಿದೆ. ಸರ್ವತೋಮುಖ ಅಭಿವೃದ್ಧಿಯನ್ನು ಸಾಧಿಸುವ ಗುರಿ ಹೊಂದಿದೆ ಎಂದರು.
ಜಿಲ್ಲೆಯಲ್ಲಿ 2017-18ನೇ ಸಾಲಿನ ಮಾ.-8ರಂದು ಯೋಜನೆ ಅನುಷ್ಠಾನಗೊಂಡಿದ್ದು, ಅಪೌಷ್ಟಿಕತೆಯ ಕುಂಠಿತ ಬೆಳವಣಿಗೆ, ರಕ್ತಹಿನತೆ ಮಹಿಳೆಯರು ಮತ್ತು ಹದಿಹರೆಯದ ಹೆಣ್ಣು ಮಕ್ಕಳಲ್ಲಿ ರಕ್ತಹಿನತೆಯನ್ನು ಮತ್ತು ಕಡಿಮೆ ತೂಕದ ಮಕ್ಕಳ ಜನನ ಪ್ರಮಾಣ ಕಡಿಮೆಗೊಳಿಸುವ ಉದ್ದೇಶ ಅಭಿಯಾನದಾಗಿದೆ ಎಂದು ತಿಳಿಸಿದರು.
ಪ್ರಸಕ್ತ ಸಾಲಿನ ಪೋಷಣ್ ಮಾಸಾಚರಣೆ ಪ್ರಯುಕ್ತ ಮುಖ್ಯವಾಗಿ ಅತಿಯಾದ ತೂಕ ನಿಯಂತ್ರಣ, ಪೋಷಣ್ ಭಿ ಪಡಾಯ್ ಭಿ, ತಾಯಿಯ ಹೆಸರಲ್ಲಿ ಒಂದು ಗಿಡ ನೆಡೆಯುವುದು, ಶಿಶು ಮತ್ತು ಬಾಲ್ಯ ಪೋಷಣ ಮತ್ತು ಪುರುಷರ ಪಾಲ್ಗೋಳ್ಳುವಿಕೆ ಚಟುಚಟಿಕೆಗಳನ್ನು ಎಲ್ಲ ಅಂಗನವಾಡಿ ಕೇಂದ್ರಗಳಲ್ಲಿ ಅ.11 ವರೆಗೆ ನಡೆಸಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸೀಮಂತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಪೋಷಣ್ ಅಭಿಯಾನ ಭಿತ್ತಿ ಪತ್ರಗಳನ್ನು ಮತ್ತು ಲಿಂಗತ್ವ ಅಲ್ಪ ಸಂಖ್ಯಾತ ಸಮುದಾಯದ ಸಮೀಕ್ಷೆಯ ಭಿತ್ತಿ ಪತ್ರಗಳನ್ನು ಬಿಡುಗಡೆ ಮಾಡಲಾಯಿತು.
ವಕೀಲರ ಸಂಘ ಅಧ್ಯಕ್ಷ ಎಲ್.ಶ್ರೀನಿವಾಸ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಜಿ.ಶ್ರೀನಿವಾಸ್, ಜಿಲ್ಲಾ ಆಯುಷ ಅಧಿಕಾರಿ ಡಾ.ರಾಘವೇಂದ್ರ ಶೆಟ್ಟಿಗಾರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಿಲ್ಲಾ ನಿರೂಪಣಾಧಿಕಾರಿ ನಾಗರತ್ನ ಇದ್ದರು.
ಜಿಲ್ಲೆಯಲ್ಲಿ 54 ಮಕ್ಕಳು
ಈಗಾಗಲೇ ಜಿಲ್ಲೆಯ ಎಲ್ಲ ಅಂಗನವಾಡಿ ಕಾರ್ಯಕರ್ತೆಯರಿಗೆ ಸ್ಮಾರ್ಟ್ೋನ್ ವಿತರಿಸಲಾಗಿದ್ದು, ಇದರ ಮೂಲಕ ಫಲಾನುಭವಿಗಳ ಹಾಜರಾತಿ, ಬಿಸಿಊಟ, ನೋಂದಣಿ, ತೂಕ, ಎತ್ತರವನ್ನು ಟ್ರ್ಯಾಕಿಂಗ್ ಮಾಡಲಾಗುತ್ತಿದ್ದು, ಪೋಷಣ್ ಟ್ರ್ಯಾಕರ್ನ ನಿತ್ಯದ ನಿರ್ವಹಣೆಯಲ್ಲಿ ಜಿಲ್ಲೆಯು 3ನೇ ಸ್ಥಾನದಲ್ಲಿದೆ. ಆರೋಗ್ಯ ಇಲಾಖೆ ಸಹಯೋಗದಿಂದ ಅಪೌಷ್ಟಿಕ ಮಕ್ಕಳಿಗೆ ತಪಾಸಣಾ ಶಿಬಿರಗಳ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ. 2018-19ರಲ್ಲಿ 106 ತೀವ್ರ ಅಪೌಷ್ಟಿಕ ಮಕ್ಕಳಿದ್ದು, ಪ್ರಸ್ತುತ ಆಗಸ್ಟ್-2025ರ ಮಾಹೆಯಲ್ಲಿ 54 ಮಕ್ಕಳಿದ್ದಾರೆ. 52 ತೀವ್ರ ಅಪೌಷ್ಟಿಕ ಮಕ್ಕಳು ಸಾಧಾರಣ ಅಪೌಷ್ಟಿಕತೆಗೆ ಬಂದು ಸುಧಾರಣೆಗೊಂಡಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ನಾರಾಯಣಸ್ವಾಮಿ ತಿಳಿಸಿದರು.