

ಬೆಂಗಳೂರು: ತಹಸೀಲ್ದಾರ್, ಎಸಿ ಹಾಗೂ ಡಿಸಿ ಮಟ್ಟದ ನ್ಯಾಯಾಲಯಗಳಲ್ಲಿ 6 ತಿಂಗಳಿನಿಂದ 5 ವರ್ಷಗಳವರೆಗೆ ನೂರಾರು ತಕರಾರು ಪ್ರಕರಣಗಳು ಬಾಕಿ ಉಳಿದಿದ್ದು, ಈ ಎಲ್ಲ ಪ್ರಕರಣಗಳನ್ನು 4 ತಿಂಗಳ ಕಾಲಮಿತಿಯಲ್ಲಿ ಇತ್ಯರ್ಥಪಡಿಸಬೇಕು ಎಂದು ಸಚಿವ ಕೃಷ್ಣ ಬೈರೇಗೌಡ ಅಧಿಕಾರಿಗಳಿಗೆ ಗಡುವು ನೀಡಿದ್ದಾರೆ.
ಬೆಂಗಳೂರು ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಕಂದಾಯ ಇಲಾಖೆ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದ ಸಚಿವ ಕೃಷ್ಣ ಬೈರೇಗೌಡ, ಐದು ವರ್ಷಗಳಿಂದ ಇತ್ಯರ್ಥವಾಗದ ತಕರಾರು ಪ್ರಕರಣಗಳನ್ನು ಶೀಘ್ರದಲ್ಲೇ ವಿಲೇವಾರಿಗೊಳಿಸಿ ಎಂದು ಅಧಿಕಾರಿಳಿಗೆ ತಾಕೀತು ಮಾಡಿದರು.
ಬೆಂಗಳೂರು ಪ್ರದೇಶಿಕ ವಿಭಾಗದ ತಹಸೀಲ್ದಾರ್ ನ್ಯಾಯಾಲಯಗಳಲ್ಲಿ 6 ತಿಂಗಳಿಂದ 5 ವರ್ಷಗಳವರೆಗಿನ ಒಟ್ಟು 6,859 ತಕರಾರು ಪ್ರಕರಣಗಳು ಈವರೆಗೆ ಇತ್ಯರ್ಥವಾಗದೆ ಬಾಕಿ ಉಳಿದಿವೆ. ಇದರಿಂದಾಗಿ ಸಾರ್ವಜನಿಕರು ದಿನಂಪ್ರತಿ ತಹಸೀಲ್ದಾರ್ ಕಚೇರಿಗೆ ಅಲೆಯುವಂತಾಗಿದೆ. ಹೀಗಾಗಿ ಬಾಕಿ ಉಳಿದ ಪ್ರಕರಣಗಳಲ್ಲಿ 4000 ಪ್ರಕರಣಗಳನ್ನು ಮುಂದಿನ 4 ತಿಂಗಳ ಒಳಗಾಗಿ ಇತ್ಯರ್ಥಗೊಳಿಸಬೇಕು ಎಂದು ಹೇಳಿದರು.