

ಬೆಂಗಳೂರು: ಅಪೋಲೊ ಪಾರ್ಮಸಿ ಹಾಗೂ ಮೆಡ್‌ಪ್ಲೆಸ್ ಔಷಧ ಅಂಗಡಿಗಳ ಸಿಬ್ಬಂದಿಗೆ ಚಾಕು ತೋರಿಸಿ ಹಣವನ್ನು ದೋಚುತ್ತಿದ್ದ ದರೋಡೆಕೋರನನ್ನು ವಿದ್ಯಾರಣಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಜೆ.ಸಿ.ನಗರ ನಿವಾಸಿ ಸಮಿವುದ್ದೀನ್ ಬಂಧಿತ. ಆರೋಪಿಯಿಂದ ಕೃತ್ಯಕ್ಕೆ ಬಳಸಿದ್ದ ಒಂದು ದ್ವಿಚಕ್ರ ವಾಹನ ಮತ್ತು ಚಾಕುವನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿಯು ಅ.೮ರಂದು ೭.೪೫ ಸುಮಾರಿಗೆ ವಿದ್ಯಾರಣ್ಯಪುರದ ಸಿಂಗಾಪುರ ಅಪೋಲೊ ಾರ್ಮಸಿಯಲ್ಲಿ ನುಗ್ಗಿ ಬಿಲ್ಲಿಂಗ್ ಮಾಡುತ್ತಿದ್ದ ಹರಿಕುಮಾರ್ ಎಂಬುವರಿಗೆ ಚಾಕು ತೋರಿಸಿ ಬೆದರಿಸಿ ದರೋಡೆ ಮಾಡಿದ್ದ. ಈ ಸಂಬಂಧ ದಾಖಲಾದ ದೂರಿನನ್ವಯ ಕಾರ್ಯಾಚರಣೆ ನಡೆಸಿ ಆರೋಪಿ ಸಮಿವುದ್ದೀನ್‌ನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆರೋಪಿಯು ಡೆಲಿವರಿ ಕಂಪನಿಯೊಂದರಲ್ಲಿ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದ. ಕಳೆದ ಒಂದು ವರ್ಷದಿಂದ ಕೆಲಸಕ್ಕೆ ಹೋಗದೆ ಓಡಾಡುತ್ತಿದ್ದ. ಸುಲಭವಾಗಿ ಹಣ ಸಂಪಾದನೆ ಮಾಡಲು ಅಪರಾಧ ಕೃತ್ಯ ಎಸಗುವುದನ್ನು ಕರಗತ ಮಾಡಿಕೊಂಡಿದ್ದ. ಹೀಗಾಗಿ ಅಪೋಲೊ ಹಾಗೂ ಮೆಡ್‌ಪ್ಲೆಸ್‌ಗಳ ಔಷಧಿ ಅಂಗಡಿಗಳಿಗೆ ಔಷಧಿ ಕೇಳುವ ಸೋಗಿನಲ್ಲಿ ತೆರಳಿ ಚಾಕು ತೋರಿಸಿ ಬೆದರಿಸಿ ಹಣ ದೋಚಿ ಪರಾರಿಯಾಗುತ್ತಿದ್ದ.
೧೩ ಪ್ರಕರಣ ಬೆಳಕಿಗೆ:
ಇನ್ನು ಆರೋಪಿಯ ವಿಚಾರಣೆ ವೇಳೆ ನಗರದಲ್ಲಿ ನಡೆದಿದ್ದ ೧೩ ಡರೋಡೆ ಪ್ರಕರಣ ಬೆಳಕಿಗೆ ಬಂದಿದೆ. ತನ್ನ ಸ್ಕೂಟರ್‌ನಲ್ಲಿ ಬರುತ್ತಿದ್ದ ಅರೋಪಿಯು ಬೆಳಗ್ಗೆ ಮತ್ತು ರಾತ್ರಿ ವೇಳೆ ಕೃತ್ಯ ಎಸಗುತಿದ್ದ. ಮೆಡಿಕಲ್ಶಾಪ್ ತೆರೆಯುವಾಗ ಮತ್ತು ಬಾಗಿಲು ಹಾಕುವ ಸಮಯದಲ್ಲಿ ಒಬ್ಬರು ಮಾತ್ರ ಇರುತ್ತಾರೆ ಎಂದು ಪ್ಲಾನ್ ಮಾಡಿ ಈ ಕೃತ್ಯ ಎಸಗುತ್ತಿದ್ದ. ಆರೋಪಿಯ ಬಂಧನದಿಂದಾಗಿ ವಿದ್ಯಾರಣ್ಯಪುರ, ಕೆಂಗೇರಿ, ಬೆಳ್ಳಂದೂರು, ಎಚ್.ಎಸ್.ಆರ್.ಲೇಔಟ್, ಹುಳಿಮಾವು, ಕೊತ್ತನೂರು, ಮಹಾದೇವಪುರ, ರಾಮಮೂರ್ತಿ ನಗರ, ಮಾರತ್‌ಹಳ್ಳಿ, ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ತಲಾ ಒಂದು ಪ್ರಕರಣ ಮತ್ತು ಹೆಬ್ಬಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ೩ ಸೇರಿ ಒಟ್ಟು ೧೩ ಪ್ರಕರಣಗಳು ಬೆಳಕಿಗೆ ಬಂದಿದೆ. ದರೋಡೆಕೋರನ ವಿರುದ್ಧ ಒಟ್ಟು ೧೩ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.