

ಬೆಂಗಳೂರು: ಮಹಿಳೆಯೊಬ್ಬಳ ನಗ್ನ ಫೋಟೋ ಇಟ್ಟುಕೊಂಡು ಜೈಲಿನಿಂದಲೇ ಆಕೆಯ ತಾಯಿಗೆ ಕರೆ ಮಾಡಿ ಬ್ಲಾೃಕ್‌ಮೇಲ್ ಮೂಲಕ ಹಣ ಸುಲಿಗೆ ಮಾಡುತ್ತಿದ್ದ ರೌಡಿಶೀಟರ್ ಮನು ಅಲಿಯಾಸ್ ಕೆಂಚ ಹಾಗೂ ಆತನ ಸಹಚರ ಕಾರ್ತಿಕ್ ವಿರುದ್ಧ ಯಲಹಂಕ ನ್ಯೂಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣದ ಹೆಚ್ಚಿನ ತನಿಖೆಗಾಗಿ ಸಿಸಿಬಿಗೆ ವರ್ಗಾವಣೆ ಮಾಡಲಾಗಿದೆ.
ಯಲಹಂಕ ನಿವಾಸಿ ಲಕ್ಷ್ಮೀ ಎಂಬುವರು ನೀಡಿದ ದೂರಿನ ಮೇರೆಗೆ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಈ ಹಿಂದೆ ಸುಲಿಗೆ, ದರೋಡೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿದ್ದ ರೌಡಿಶೀಟರ್ ಮನು, ತನ್ನ ಸಹಚರರ ಜತೆ ಆತ್ಮೀಯವಾಗಿರುವ ಮಹಿಳೆಯ ಫೋಟೋಗಳನ್ನು ಪಡೆದುಕೊಂಡಿದ್ದಾನೆ. ೨೦೨೩ರ ಆಗಸ್ಟ್‌ನಲ್ಲಿ ಆಕೆಯ ತಾಯಿಗೆ ಕರೆ ಮಾಡಿ, ಪುತ್ರಿಯ ನಗ್ನ ಫೋಟೋಗಳಿದ್ದು, ಅವುಗಳನ್ನು ನಿನ್ನ ಅಳಿಯನಿಗೆ ಕಳುಹಿಸುತ್ತೇನೆ ಎಂದು ಬೆದರಿಸಿ ೪೦ ಸಾವಿರ ರೂ.ಗೆ ಬೇಡಿಕೆ ಇಟ್ಟಿದ್ದ ನಂತರ ತನ್ನ ಇಬ್ಬರು ಸ್ನೇಹಿತರ ಖಾತೆಗೆ ಆನ್‌ಲೈನ್ ಮೂಲಕ ತಲಾ ೨೦ ಸಾವಿರ ರೂ. ಹಾಕಿಸಿಕೊಂಡಿದ್ದಾನೆ. ಬಳಿಕ ತನ್ನ ಸಹಚರ ಕಾರ್ತಿಕ್ ಎಂಬಾತನಿಗೆ ಆಕೆಯ ಅಶ್ಲೀಲ ಫೋಟೋಗಳನ್ನು ಕಳುಹಿಸಿ ಬ್ಲಾೃಕ್‌ಮೇಲ್ ಮಾಡುವಂತೆ ಹೇಳಿದ್ದಾನೆ. ಆತ ಫೆ.೯ರಂದು ಮಹಿಳೆಯ ತಾಯಿಗೆ ಕರೆ ಮಾಡಿ, ಪುತ್ರಿಯ ನಗ್ನ ಫೋಟೋಗಳಿದ್ದು, ಅವುಗಳನ್ನು ನಿನ್ನ ಅಳಿಯನಿಗೆ ಕಳುಹಿಸದಿರಲು ೫ ಲಕ್ಷ ರೂ. ಕೊಡಬೇಕು ಎಂದು ಬೇಡಿಕೆ ಇಟ್ಟಿದ್ದ. ಆ ನಂತರ ಹಲವಾರು ಯುವಕರು ದೂರುದಾರರಿಗೆ ಕರೆ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಕುರಿತು ಈಶಾನ್ಯವಿಭಾಗದ ಡಿಸಿಪಿ ಲಕ್ಷ್ಮೀಪ್ರಸಾದ್ ಮಾತನಾಡಿ, ಈ ಹಿಂದೆ ಪ್ರಕರಣದಲ್ಲಿ ಜೈಲು ಸೇರಿದ್ದ ಆರೋಪಿಯು ಮಹಿಳೆಯ ಅಶ್ಲೀಲ ಫೋಟೋಗಳನ್ನು ಇಟ್ಟುಕೊಂಡು ಹಣಕ್ಕೆ ಬೇಡಿಕೆ ಇಡುತ್ತಿರುವ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಇದೀಗ ಪ್ರಕರಣವನ್ನು ಸಿಸಿಬಿಗೆ ವರ್ಗಾವಣೆಯಾಗಿದ್ದು, ಮುಂದಿನ ತನಿಖೆಯನ್ನು ಸಿಸಿಬಿಯೇ ಮಾಡಲಿದೆ ಎಂದು ತಿಳಿಸಿದ್ದಾರೆ.