

ಬೆಂಗಳೂರು: ಹುದ್ದೆಯ ನಿರೀಕ್ಷೆಯಲ್ಲಿದ್ದ ಇಬ್ಬರು ಐಎಎಸ್ ಅಧಿಕಾರಿಗಳಿಗೆ ಸ್ಥಳ ತೋರಿಸಿ ಸರ್ಕಾರ ಸೋಮವಾರ ಆದೇಶಿಸಿದೆ. ಈ ಪೈಕಿ ಡಾ.ಎನ್.ಮಂಜುಳಾ ಅವರನ್ನು ಮತ್ತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಹುದ್ದೆಗೆ ನಿಯುಕ್ತಿಗೊಳಿಸಲಾಗಿದೆ.
ಮಂಜುಳಾ ಅವರು ಈ ಹಿಂದೆ ಇದೇ ಹುದ್ದೆಯಲ್ಲಿದ್ದಾಗ ‘ಬೆಂಗಳೂರು ಹಬ್ಬ’ದ ಪೂರ್ವ ತಯಾರಿಯಲ್ಲಿ ಅವ್ಯವಹಾರ ಆರೋಪ ಕೇಳಿಬಂದಿತ್ತು. ಈ ಕುರಿತು ದೂರು ಲೋಕಾಯುಕ್ತಕ್ಕೆ ಸಲ್ಲಿಕೆಯಾಗಿದೆ.
ಬಿಜೆಪಿ ಆಡಳಿತಾವಧಿಯ ಕೊನೆ ದಿನಗಳಲ್ಲಿ ‘ಬೆಂಗಳೂರು ಹಬ್ಬ’ ಭರ್ಜರಿಯಾಗಿ ನಡೆಯಿತು. ಈ ಕಾರ್ಯಕ್ರಮ ಪೂರ್ವ ತಯಾರಿಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಒಪ್ಪಿಸಲಾಗಿತ್ತು. ಹಬ್ಬದ ಸಿದ್ಧತೆಯಲ್ಲಿ ಹಣ, ಅಧಿಕಾರ ದುರ್ಬಳಕೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿತ್ತು.
ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಎನ್.ಮಂಜುಳಾ ಅವರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ವರ್ಗಾವಣೆಯಾಗಿ ಅಲ್ಪಾವಧಿಯಲ್ಲಿ ಎತ್ತಂಗಡಿಯಾಗಿದ್ದರು.