

ಬೆಂಗಳೂರು: ರಾಜ್ಯಸಭಾ ಚುನಾವಣೆಯಲ್ಲಿ ತಮ್ಮ ಪರ ಮತ ಚಲಾಯಿಸುವಂತೆ ಕಾಂಗ್ರೆಸ್ ಶಾಸಕರಿಗೆ ಹಣದ ಆಮಿಷವೊಡ್ಡಿದ್ದಾರೆ ಎಂಬ ಆರೋಪದಡಿ ರಾಜ್ಯಸಭಾ ಚುನಾವಣೆಯ ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿ ಕುಪೇಂದ್ರರೆಡ್ಡಿ ಸೇರಿ ನಾಲ್ವರ ವಿರುದ್ಧ ವಿಧಾನಸೌಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಡ್ಯ ವಿಧಾನಸಭಾ ಕ್ಷೇತ್ರದ ಶಾಸಕ ಪಿ.ರವಿ ಕುಮಾರ್(ಗಾಣಿಗ ರವಿ) ಅವರು ನೀಡಿದ ದೂರಿನ ಮೇರೆಗೆ ಪೊಲೀಸರು, ರಾಜ್ಯಸಭಾ ಚುನಾವಣೆಯಲ್ಲಿ ಸ್ಪರ್ಧಿಸಿರುವ ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿ ಕುಪೇಂದ್ರ ರೆಡ್ಡಿ, ೩೭/ಕ್ರೆಸೆಂಟ್ ಹೋಟೆಲ್ ಮಾಲೀಕ ರವಿ, ಕುಪೇಂದ್ರ ರೆಡ್ಡಿ ಭಾವ ಡಾ. ಮಹಂತೇಶ್, ಹರಿಹರದ ಮಾಜಿ ಶಾಸಕ ಶಿವಶಂಕರ್ ವಿರುದ್ಧ ದೂರು ದಾಖಲಿಸಿದ್ದಾರೆ.
ಬೆದರಿಕೆ ಹಾಕಿದ ಆರೋಪ:
ಫೆ.೨೨ರಂದು ಕರ್ನಾಟಕ ವಿಧಾನಸಭೆ ಸದಸ್ಯರ ಮೂಲಕ ಚುನಾಯಿತರಾಗುವ ರಾಜ್ಯಸಭಾ ಚುನಾವಣೆ ನಡೆಯಲಿದ್ದು, ಈ ಸ್ಪರ್ಧೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಕುಪೇಂದ್ರ ರೆಡ್ಡಿ ನಾಮಪತ್ರ ಸಲ್ಲಿಸಿದ್ದಾರೆ. ಆದರೆ, ಬಿಜೆಪಿ ಮತ್ತು ಜೆಡಿಎಸ್‌ನಲ್ಲಿ ಗೆಲುವು ಸಾಧಿಸಲು ಮತ ಸಂಖ್ಯೆ ಇಲ್ಲ. ಹೀಗಾಗಿ ಹೋಟೆಲ್ ಮಾಲೀಕ ರವಿ ಎಂಬುವರು ಶಾಸಕಿ ಲತಾ ಮಲ್ಲಿಕಾರ್ಜುನ್ ಅವರನ್ನು ಸಂಪರ್ಕಿಸಿ, ‘ಕುಪೇಂದ್ರ ರೆಡ್ಡಿ ಅವರ ಪುತ್ರ ತಮ್ಮನ್ನು ಭೇಟಿಯಾಗಿ ಹಣ ಕೊಡುತ್ತಾರೆ. ನೀವು ಕುಪೇಂದ್ರ ರೆಡ್ಡಿಗೆ ಮತ ಚಲಾಯಿಸಬೇಕು. ಇಲ್ಲವಾದರೆ ತೊಂದರೆ ಆಗುತ್ತದೆ’ ಎಂದು ಬೆದರಿಕೆ ಹಾಕಿದ್ದಾರೆ. ಹಾಗೆಯೇ ಅವರ ಬಾವ ಡಾ ಮಹಾಂತೇಶ್ ಕೂಡ ಶಾಸಕಿ ಲತಾ ಮಲ್ಲಿಕಾರ್ಜುನ ಅವರಿಗೆ ಮತಚಲಾಯಿಸುವಂತೆ ಆಮಿಷವೊಡ್ಡಿದ್ದಾರೆ. ಅಲ್ಲದೆ, ಹರಿಹರದ ಮಾಜಿ ಶಾಸಕ ಶಿವಶಂಕರ್ ಕೂಡ ಲತಾ ಅವರ ಪತಿ ಮಲ್ಲಿಕಾರ್ಜುನ್ ಅವರನ್ನು ಭೇಟಿಯಾಗಿ ಹಣದ ಆಮಿಷವೊಡ್ಡಿ ಕುಪೇಂದ್ರ ರೆಡ್ಡಿಗೆ ಪರ ಮತ ಚಲಾಯಿಸುವಂತೆ ಒತ್ತಡ ಹಾಕಿದ್ದಾರೆ ಎಂದು ರವಿ ಗಾಣಿಗ ದೂರಿನಲ್ಲಿ ಆರೋಪಿಸಿದ್ದಾರೆ.
ಮತ್ತಿಬ್ಬರಿಗೂ ಆಮೀಷ!
ಶಾಸಕಿ ಲತಾ ಮಲ್ಲಿಕಾರ್ಜುನಗ ಮಾತ್ರವಲ್ಲದೇ, ಮತ್ತಿಬ್ಬರು ಶಾಸಕರಾದ ಪುಟ್ಟಸ್ವಾಮಿಗೌಡ, ದರ್ಶನ್ ಪುಟ್ಟಣ್ಣಯ್ಯಗೆ ಕೂಡ ಬಿಜೆಪಿ-ಜೆಡಿಎಸ್ ಮುಖಂಡರು ಅವರ ಬೆಂಬಲಿಗರ ಮೂಲಕ ಹಣದ ಆಮಿಷವೊಡ್ಡಿದ್ದಾರೆ ಎಂದು ಶಾಸಕ ರವಿಕುಮಾರ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈ ಸಂಬಂಧ ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.