ಕೋರ್ಟ್​ ಕಟ್ಟಡದ 6ನೇ ಮಹಡಿಯಿಂದ ಜಿಗಿದು ಸಾವನ್ನಪ್ಪಿದ ಅತ್ಯಾಚಾರದ ಆರೋಪಿ

Court
Published on

ಫರಿದಾಬಾದ್​: ಜಾಮೀನು ಅರ್ಜಿ ವಿಚಾರಣೆ ವೇಳೆ ಹಾಜರಾಗಿದ್ದ ಅತ್ಯಾಚಾರದ ಆರೋಪಿ ನ್ಯಾಯಾಲಯದ 6ನೇ ಮಹಡಿಯ ಕಟ್ಟಡದಿಂದಲೇ ಜಿಗಿದು ಸಾವನ್ನಪ್ಪಿರುವ ಘಟನೆ ಹರಿಯಾಣದ ಫರಿದಾಬಾದ್​ನಲ್ಲಿ ನಡೆದಿದೆ.

ಸೂರಜ್​​​ (21) ಮೃತ ಆರೋಪಿಯಾಗಿದ್ದು, ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಈತ ಸದ್ಯ ಅತ್ಯಾಚಾರದ ಆರೋಪಿಯಾಗಿದ್ದ. ಯುವತಿಯ ಪೋಷಕರು ಹಣದ ಬೇಡಿಕೆ ಇಟ್ಟಿದ್ದರಿಂದ ನನ್ನ ಮಗ ತುಂಬಾ ನೊಂದಿದ್ದ ಎಂದು ಮೃತ ಸೂರಜ್​ನ ತಂದೆ ಆರೋಪಿಸಿದ್ದಾರೆ.

ಇನ್ನು ಕೆಲ ದಿನಗಳ ಕಾಲ ಜೈಲುವಾಸ ಅನುಭವಿಸಿ ಹೊರಬಂದಿದ್ದ ಆರೋಪಿ ಅದೇ ಯುವತಿಯೊಂದಿಗೆ ಮದುವೆಯಾಗಿದ್ದನು. ಜಾಮೀನು ಅರ್ಜಿ ವಿಚಾರಣೆ ಇದ್ದಿದ್ದರಿಂದ ಶನಿವಾರ ಕೋರ್ಟ್​ಗೆ ಹಾಜರಾಗಿದ್ದ.

ಗಾಜಿಯಾಬಾದ್​ ನಿವಾಸಿಯಾಗಿದ್ದ ಈತ ಕಳೆದ ವರ್ಷ ಜೂನ್​ ತಿಂಗಳಲ್ಲಿ ಅತ್ಯಾಚಾರ ಮಾಡಿದ ಆರೋಪ ಮಾಡಲಾಗಿತ್ತು. ಯುವತಿ ದೂರು ನೀಡಿದ ವಾರದ ಬಳಿಕ ಈತನನ್ನು ಬಂಧಿಸಲಾಗಿತ್ತು. ಇದೀಗ ಜಾಮೀನು ಅರ್ಜಿ ವಿಚಾರಣೆ ವೇಳೆ ಬಂದಿದ್ದ ಆರೋಪಿ ಕಟ್ಟಡದಿಂದ ಜಿಗಿದು ಪ್ರಾಣ ಕಳೆದುಕೊಂಡಿದ್ದಾನೆ. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಪ್ರಯೋಜನವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net