ಆರೋಪಿ ಜಗದೀಶ್‌ಗೆ ನ್ಯಾಯಾಂಗ ಬಂಧನ

arrested
Published on

ಬೆಂಗಳೂರು: ರೌಡಿಶೀಟರ್ ಶಿವಪ್ರಕಾಶ್ ಅಲಿಯಾಸ್ ಬಿಕ್ಲು ಶಿವ ಕೊಲೆ ಪ್ರಕರಣದ ಮೊದಲ ಆರೋಪಿ ಜಗದೀಶ್ ಅಲಿಯಾಸ್ ಜಗ್ಗನಿಗೆ ೧೪ ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶಿಸಿದೆ.

ಆರೋಪಿಯ ಸಿಐಡಿ ಕಸ್ಟಡಿ ಸೋಮವಾರ ಅಂತ್ಯಗೊಂಡ ಹಿನ್ನೆಲೆಯಲ್ಲಿ ಸಿಐಡಿ ಅಧಿಕಾರಿಗಳು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಈ ವೇಳೆ ಸಿಐಡಿ ಪರ ವಕೀಲರು ಆರೋಪಿಯನ್ನು ಚಿಕ್ಕಬಳ್ಳಾಪುರ ಜೈಲಿಗೆ ಸ್ಥಳಾಂತರಿಸುವಂತೆ ಮನವಿ ಮಾಡಿದರು. ಇದಕ್ಕೆ ಆರೋಪಿ ಪರ ವಕೀಲರು ಆಕ್ಷೇಪಿಸಿದರು. ಬಳಿಕ ನ್ಯಾಯಾಲಯವು ಆರೋಪಿಯನ್ನು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಪ್ರತ್ಯೇಕ ಸೆಲ್‌ನಲ್ಲಿ ಇರಿಸುವಂತೆ ಸೂಚಿಸಿ ಸೆ.೨೨ರ ವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶಿಸಿತು.

ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಬಂಧಿತ ಆರೋಪಿಗಳ ವಿರುದ್ಧ ಕೋಕಾ ಕಾಯ್ದೆ ಅಳವಡಿಸಿರುವ ಹಿನ್ನೆಲೆಯಲ್ಲಿ ಹೆಚ್ಚಿನ ವಿಚಾರಣೆ ಸಂಬಂಧ ಕಿರಣ್, ವಿಮಲ್ ಸೇರಿ ನಾಲ್ವರು ಆರೋಪಿಗಳನ್ನು ವಶಕ್ಕೆ ನೀಡುವಂತೆ ಸಿಐಡಿ ಪರ ವಕೀಲರು ಮನವಿ ಮಾಡಿದರು. ನ್ಯಾಯಾಲಯವು ಈ ನಾಲ್ವರನ್ನು ಸೆ.೨೨ರ ವರೆಗೆ ಸಿಐಡಿ ವಶಕ್ಕೆ ನೀಡಿ ಆದೇಶಿಸಿತು.

ಕೋಕಾ ಕಾಯ್ದೆಯಡಿ ಪ್ರಕರಣ ದಾಖಲು:

ರೌಡಿ ಶೀಟರ್ ಶಿವಪ್ರಕಾಶ್ ಅಲಿಯಾಸ್ ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಬಂಧತರಾಗಿರುವ ಜಗದೀಶ್ ಸೇರಿ ೧೭ ಆರೋಪಿಗಳ ಮೇಲೆ ಸಿಐಡಿ ಪೊಲೀಸರು, ಕರ್ನಾಟಕ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆಯಡಿ (ಕೋಕಾ) ಪ್ರಕರಣ ದಾಖಲಿಸಿದ್ದಾರೆ. ಪದೇ ಪದೇ ಸಂಘಟಿತ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುವ ಆರೋಪಿಗಳನ್ನು ಈ ಕಾಯ್ದೆಯಡಿ ಬಂಧನಕ್ಕೊಳಪಡಿಸಬಹುದು. ಕೋಕಾ ಕಾಯ್ದೆಯಡಿ ಬಂಧಿಸಲ್ಪಡುವ ಆರೋಪಿಗಳಿಗೆ ಕನಿಷ್ಠ ಒಂದು ವರ್ಷ ಜಾಮೀನು ಸಿಗುವುದಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net