

ಬೆಂಗಳೂರು: ರಸ್ತೆಯಲ್ಲಿ ಹೋಗುತ್ತಿದ್ದ ಯುವತಿಗೆ ಹಿಂದೆಯಿಂದ ಹೊಡೆದು ಅಸಭ್ಯವಾಗಿ ವರ್ತಿಸಿದ್ದ ಬೈಕ್ ಸವಾರನನ್ನು ಮಾರತಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ದೇವರಬೀಸನಹಳ್ಳಿ ನಿವಾಸಿ ಶ್ರೀಕಾಂತ್ (32) ಬಂಧಿತ. ಎಂಬಿಎ ಪದವಿಧರ ಶ್ರೀಕಾಂತ್, ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾನೆ. ಏ.30ರ ರಾತ್ರಿ 11.40ರಲ್ಲಿ ಸಂತ್ರಸ್ತ 26 ವರ್ಷದ ಯುವತಿ, ದೇವರಬೀಸನಹಳ್ಳಿ ಇಕೋ ವಲ್ಡ್ ಮುಖ್ಯ ಗೇಟ್ ಬಳಿ ನಡೆದು ಹೋಗುತ್ತಿದ್ದಳು. ದ್ವಿಚಕ್ರ ವಾಹನದಲ್ಲಿ ಆಕೆಯನ್ನು ಹಿಂಬಾಲಿಸಿರುವ ಆರೋಪಿ ಏಕಾಏಕಿ ಆಕೆಯ ಬೆನ್ನ ಕೆಳಭಾಗಕ್ಕೆ ಕೈನಿಂದ ಹೊಡೆದು ಮುಂದೆ ಹೋಗಿದ್ದ.
ಮತ್ತೆ ಯು ಟರ್ನ್ ಪಡೆದು ಯುವತಿ ಬಳಿ ಬಂದು ಮತ್ತೊಮ್ಮೆ ಯುವತಿ ಬೆನ್ನ ಕೆಲಭಾಗಕ್ಕೆ ಕೈನಿಂದ ಹೊಡೆದು ಪರಾರಿಯಾಗಿದ್ದ. ಗಾಬರಿಗೊಂಡಿದ್ದ ಯುವತಿ ಸಹಾಯಕ್ಕೆ ಕೂಗಿಕೊಂಡಿದ್ದಾರೆ. ದಾರಿಹೋಕರು ಆಕೆಯ ನೆರವಿಗೆ ಬಂದಿರಲಿಲ್ಲ. ಆರೋಪಿಯ ನೇರಳೆ ಬಣ್ಣದ ಟಿ ಶರ್ಟ್ ಧರಿಸಿದ್ದು, ಅದರ ಮೇಲೆ ಈಟ್ ಕ್ಲಬ್ ಎಂದು ಬರೆದಿರುವುದನ್ನು ಆ ಯುವತಿ ಗಮನಿಸಿದ್ದಳು.
ಈ ಸಂಬಂಧ ಮಾರತಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಘಟನಾ ಸ್ಥಳ ಹಾಗೂ ಸುತ್ತಮುತ್ತಲ ಸಿಸಿ ಕ್ಯಾಮರಾ ದೃಶ್ಯಾವಳಿ ಆಧರಿಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಧೈರ್ಯವಾಗಿ ದೂರು ನೀಡಿ:
ಇಂತಹ ಘಟನೆಗಳು ಕಂಡು ಬಂದಲ್ಲಿ ಸಾರ್ವಜನಿಕರು ಧೈರ್ಯವಾಗಿ ದೂರು ನೀಡಿ. ವೈಟ್‌ಫೀಲ್ಡ್ ವಿಭಾಗದ ಡಿಸಿಪಿ ಮೊಬೈಲ್ ಸಂಖ್ಯೆ 9480801084 ಅಥವಾ ಮಾರತಹಳ್ಳಿ ಎಸಿಪಿ 9480801607 ಅಥವಾ ಮಾರತಹಳ್ಳಿ ಇನ್‌ಸ್ಪೆಕ್ಟರ್ 9480801615ಕ್ಕೆ ಕರೆ ಮಾಡಿ ನಿರ್ಭೀತಿಯಿಂದ ದೂರು ನೀಡುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.