

ಕೋಲಾರ/ಬೇತಮಂಗಲ: ಜಮೀನು ಪಾಲು ಹಂಚಿಕೆ ವಿಚಾರದಲ್ಲಿ ತಾಯಿ ಮತ್ತು ಸಹೋದರರನ್ನು ಕೊಲೆ ಮಾಡಲು ಯತ್ನಿಸಿ ಹಾಗೂ ಮಾವಿನ ತೋಪು, ಗುಡಿಸಲಿಗೆ ಬೆಂಕಿ ಹಚ್ಚಿದ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಬಂದು ಪರಾರಿಯಾಗಿದ್ದವನನ್ನು 25 ವರ್ಷಗಳ ಬಳಿಕ ಶುಕ್ರವಾರ ಬೇತಮಂಗಲ ಪೊಲೀಸರು ವಶಕ್ಕೆ ಪಡೆದು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ.
ಎ.ಮೋತಕಪಲ್ಲಿ ಗ್ರಾಮದ ನಾಗರಾಜ್ (55) ಬಂಧಿತ. ವೆಂಕಟಪ್ಪ ಅವರ ಎರಡನೇ ಪತ್ನಿಯ ಮಗನಾಗಿದ್ದ ನಾಗರಾಜ್, 1999ರಲ್ಲಿ ತಂದೆಯ ಆಸ್ತಿಯಲ್ಲಿ ಪಾಲು ನೀಡುವಂತೆ ಒತ್ತಾಯಿಸುತ್ತಿದ್ದ. ೨೦ ಎಕರೆ ಭೂಮಿ ಇದ್ದರೂ ಪಾಲು ನೀಡಲಿಲ್ಲ ಎಂಬ ಕಾರಣಕ್ಕೆ ಗಲಾಟೆ ಮಾಡಿ, ತಂದೆಯ ಮೊದಲ ಪತ್ನಿ ಹಾಗೂ ಅವರ ಮಕ್ಕಳಾದ ನಾರಾಯಣಸ್ವಾಮಿ, ರತ್ನಯ್ಯಶೆಟ್ಟಿ ಮತ್ತು ಶ್ರೀನಿವಾಸ್ ಎಂಬುವವರ ಮೇಲೆ ಮಚ್ಚಿನಿಂದ ಮಾರಣಾಂತಿಕ ಹಲ್ಲೆ ನಡೆಸಿ, ಮಾವಿನ ತೋಪು ಹಾಗೂ ಗುಡಿಸಲಿಗೆ ಬೆಂಕಿ ಹಾಕಿ ನಾಪತ್ತೆಯಾಗಿದ್ದ. ಈ ಕುರಿತು ವೆಂಕಟಪ್ಪ ಅವರ ಹಿರಿಯ ಮಗ ನಾರಾಯಣಸ್ವಾಮಿ ಬೇತಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಆಗ ಆರೋಪಿಯನ್ನು ಬಂಧಿಸಿದ್ದ ಪೊಲೀಸರು ನ್ಯಾಯಾಲಯಕ್ಕೆ ಒಪ್ಪಿಸಿದ್ದರು. ಜಾಮೀನಿನ ಮೇಲೆ ಹೊರಬಂದ ನಂತರ ತಲೆ ಮರೆಸಿಕೊಂಡಿದ್ದ.
ಹೆಸರು ಬದಲಾವಣೆ
ಗ್ರಾಮದಲ್ಲಿದ್ದಾಗ ಒಬ್ಬರನ್ನು, ನಾಪತ್ತೆಯಾದಾಗ ಮುಸ್ಲಿಂ ಮಹಿಳೆಯನ್ನು ಮದುವೆಯಾಗಿದ್ದ. ಜತೆಗೆ ನಾಗರಾಜ್ ಹೆಸರನ್ನು ಇಲಿಯಾಸ್‌ಪಾಷಾ ಎಂದು ಬದಲಾಯಿಸಿಕೊಂಡು ತಲೆಮರೆಸಿಕೊಂಡಿದ್ದ. ಈತನ ಪತ್ತೆಗಾಗಿ ಪೊಲೀಸರು 25 ವರ್ಷದಿಂದಲೂ ತಲಾಶ್ ಮಾಡುತ್ತಿದ್ದರು. ಆರೋಪಿಯ ಬಗ್ಗೆ ಮಾಹಿತಿ ಪಡೆದ ಬೇತಮಂಗಲ ವೃತ್ತ ನಿರೀಕ್ಷಕ ರಂಗಸ್ವಾಮಯ್ಯ ಮತ್ತು ಪಿಎಸ್‌ಐ ಗುರುರಾಜ ಚಿಂತಾಕಲ ಅವರ ಮಾರ್ಗದರ್ಶನದಲ್ಲಿ ಆರೋಪಿ ಬಳಸುತ್ತಿದ್ದ ಮೊಬೈಲ್ ಸಂಖೆ್ಯ ಆಧರಿಸಿ ಸುಮಾರು ಒಂದು ತಿಂಗಳಿಂದ ಕಾರ್ಯಾಚರಣೆ ನಡೆಸಿದರು. ಕೊನೆಗೂ ಬೆಂಗಳೂರಿನ ಕೃಷ್ಣರಾಜಪುರ ಸಮೀಪದ ವಿಜನಾಪುರದಲ್ಲಿರುವ ಮಾಹಿತಿ ಪಡೆದು ಬಂಧಿಸಿದ್ದಾರೆ. ಪತ್ತೆ ಕಾರ್ಯದಲ್ಲಿ ಮುಖ್ಯಪೇದೆ ಜಿ.ಎನ್.ನಟರಾಜ್, ಪೇದೆಗಳಾದ ಎಸ್.ವಿ.ಮಂ ಜುನಾಥ, ಚಂದ್ರಶೇಖರ್ ಇದ್ದರು.