

ಇಂದು (17) ಕೋಲಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲೆಯ ಸರ್ಕಾರಿ ಅಧಿಕಾರಿಗಳಿಗೆ ಆಯೋಜಿಸಲಾಗಿದ್ದ, ಮಾಹಿತಿ ಹಕ್ಕು ಕಾಯ್ದೆ ಕುರಿತ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕೋಲಾರ; ಸರ್ಕಾರಿ ಅಧಿಕಾರಿಗಳು ವೈಯಕ್ತಿಕ ಹಿತಾಸಕ್ತಿಗಳನ್ನು ಬದಿಗಿಟ್ಟು ಶ್ರದ್ದೆಯಿಂದ ಕಾರ್ಯನಿರ್ವಹಿಸಬೇಕು. ಹಾಗಾದಾಗ ಮಾತ್ರ ಸಾರ್ವಜನಿಕ ಜೀವನದ ತೃಪ್ತಿ ಸಿಗುತ್ತದೆ. ಸಾರ್ವಜನಿಕರ ಹಿತಾಸಕ್ತಿಯನ್ನು ರಕ್ಷಿಸಲು ಮಾಹಿತಿ ಹಕ್ಕು ಕಾಯ್ದೆ-2005ನ್ನು ಜಾರಿಗೆ ತರಲಾಗಿದೆ. ಹೊಣೆಗಾರಿಕೆ, ಪಾರದರ್ಶಕತೆ ಹಾಗೂ ಉತ್ತಮ ಆಡಳಿತ ಮಾಹಿತಿ ಹಕ್ಕು ಕಾಯ್ದೆಯ ಮೂಲಮಂತ್ರವಾಗಿದೆ ಎಂದು ಮಾಹಿತಿ ಆಯುಕ್ತರಾದ ಎಸ್.ರಾಜಶೇಖರ್ ಹಾಗೂ ರುದ್ರಣ್ಣ ಹರ್ತಿಕೋಟೆ ಅವರು ಅಭಿಪ್ರಾಯಪಟ್ಟರು.
ಆರ್.ಟಿ.ಐ ಕಾಯ್ದೆ ಜಾರಿಗೆ ಮುನ್ನ ಸರ್ಕಾರದ ಮಾಹಿತಿಯು ಕೆಲವೇ ಪಟ್ಟಭದ್ರ ಹಿತಾಸಕ್ತಿಗಳ ಕೈಯಲ್ಲಿ ಇತ್ತು. 2005ನೇ ಸಾಲಿನಲ್ಲಿ ತೆರಿಗೆದಾರರ ಹಣವನ್ನು ಖರ್ಚು ಮಾಡುವ ಪ್ರತಿ ಸರ್ಕಾರಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ತಮ್ಮ ಕರ್ತವ್ಯಗಳನ್ನು ನಿಭಾಯಿಸುವ ವರದಿಗಳನ್ನು ತಿಳಿದುಕೊಳ್ಳುವ ಸಲುವಾಗಿ ಹಾಗೂ ಆ ಮೂಲಕ ನಾಗರೀಕರನ್ನು ಸಬಲೀಕರಣಗೊಳಿಸುವ ಗುರಿಯನ್ನು ಹೊಂದಿ ಮಾಹಿತಿ ಹಕ್ಕು ಕಾಯ್ದೆಯನ್ನು ಜಾರಿಗೊಳಿಸಲಾಯಿತು. ಪ್ರಸ್ತುತ ಈ ಕಾಯ್ದೆ ಜಾರಿಯಾಗಿ 20ವರ್ಷಗಳು ಸಂದಿವೆ. ಯಾವುದೇ ಶಾಸನದ ಪರಿಣಾಮಕಾರಿ ಅನುಷ್ಠಾನವನ್ನು ಮೌಲ್ಯಮಾಪನ ಮಾಡಲು ಎರಡು ದಶಕಗಳು ಸುಧೀರ್ಘ ಸಮಯವಾಗಿದೆ ಎಂದರು.
ಈ ಕಾಯ್ದೆಯು ಇಂದು ನಾಗರೀಕರನ್ನು ಸಶಕ್ತಗೊಳಿಸಿದೆ. ಆಡಳಿತಾತ್ಮಕ ಸುಧಾರಣೆಗಳನ್ನು ತಂದಿದೆ. ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಿದೆ ಹಾಗೂ ಒಂದು ಹಂತಕ್ಕೆ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿದೆ. ಆದಾಗ್ಯೂ ಇನ್ನೂ ಹಲವು ಸವಾಲುಗಳು ಉಳಿದುಕೊಂಡಿವೆ. ಈ ಕಾಯ್ದೆ ಅನುಷ್ಠಾನಗೊಂಡು 20ವರ್ಷಗಳು ಕಳೆದಾಗ್ಯೂ ಸಾವಿರಾರು ದೂರುಗಳು ಬರುತ್ತಿವೆ. ಪ್ರತಿ ಮಾಹೆ ಅಂದಾಜು 1000ಕ್ಕೂ ಅಧಿಕ ಮೇಲ್ಮನವಿ ಅರ್ಜಿಗಳು ದಾಖಲಾಗುತ್ತಿದ್ದು, ಸಾರ್ವಜನಿಕ ಕ್ಷೇತ್ರಗಳಲ್ಲಿ ಮಾಹಿತಿ ನೀಡಲು ಉಪೇಕ್ಷೆ ಮಾಡುತಿರುವುದನ್ನು ತೋರಿಸುತ್ತದೆ. ಬಹುತೇಕ ಸಾರ್ವಜನಿಕ ಮಾಹಿತಿ ಅಧಿಕಾರಿಗಳು ಹಾಗೂ ಮೊದಲ ಮೇಲ್ಮನವಿ ಪ್ರಾಧಿಕಾರಗಳು ತಪ್ಪುಗಳನ್ನು ಮುಚ್ಚಿ ಹಾಕಲು ಅಥವಾ ಯಾರದೋ ಹಿತಾಸಕ್ತಿಯನ್ನು ಉಳಿಸಲು ಮಾಹಿತಿ ನೀಡಲು ನಿರಾಕರಿಸುತ್ತಾರೆ ಅಥವಾ ಕಾಯ್ದೆಯ ಪ್ರಾಮುಖ್ಯತೆಯ ಅರಿವಿನ ಕೊರತೆ ಇರುತ್ತದೆ. ಈ ಹಿಂಜರಿಕೆಯು ಕಾನೂನಿನ ಉದ್ದೇಶವನ್ನೇ ಹಾಳು ಮಾಡುತ್ತದೆ ಎಂದು ಅಭಿಪ್ರಾಯಪಟ್ಟರು.
ಮತ್ತೊಬ್ಬ ಮಾಹಿತಿ ಆಯುಕ್ತರಾದ ರುದ್ರಣ್ಣ ಹರ್ತಿಕೋಟೆ ಅವರು ಸಭೆಯನ್ನು ಉದ್ದೇಶಿಸಿ ಮಾತನಾಡಿ ಬೆಂಗಳೂರು ನಗರ, ಗುಲ್ಬರ್ಗ ಹೊರತುಪಡಿಸಿದರೆ ಕೋಲಾರ ಜಿಲ್ಲೆಯಲ್ಲಿ ಅತಿ ಹೆಚ್ಚು ಮಾಹಿತಿ ಹಕ್ಕು ಅರ್ಜಿಗಳು ಸ್ವೀಕೃತವಾಗುವುದು ಕಂಡುಬರುತ್ತದೆ. ಇದು ಸಾರ್ವಜನಿಕರಲ್ಲಿ ಕಾಯ್ದೆ ಬಗ್ಗೆ ಇರುವ ಅರಿವನ್ನು ತೋರಿಸಿದರೆ, ಅಧಿಕಾರಿಗಳ ನಿರ್ಲಕ್ಷ್ಯವನ್ನು ಸಹ ಕಾಣಬಹುದಾಗಿದೆ. ಅಧಿಕಾರಿಗಳು ಹೊಣೆಗಾರಿಕೆಯಿಂದ ವರ್ತಿಸಬೇಕು ಯಾವುದೇ ಹಿಂಜರಿಕೆ ಇಲ್ಲದೆ. ಸ್ಪಷ್ಠ ಮಾಹಿತಿಯನ್ನು ಒದಗಿಸುವುದು ಕರ್ತವ್ಯವಾಗಬೇಕು. ತಮ್ಮ ವ್ಯಾಪ್ತಿಯಲ್ಲಿ ಬರುವ ಅರ್ಜಿಗಳನ್ನು ನಿಗಧಿತ ಅವಧಿಯೊಳಗೆ ಅಥವಾ ತಕ್ಷಣವೇ ವಿಲೇವಾರಿ ಮಾಡಬೇಕು. ತಮಗೆ ಸಂಬAಧಿಸದ ಅರ್ಜಿಗಳನ್ನು ಸೂಕ್ತ ಪ್ರಾಧಿಕಾರಕ್ಕೆ ವರ್ಗಾವಣೆ ಮಾಡಬೇಕು ಎಂದು ತಿಳಿಸಿದರು.
ಕೋಲಾರ ಜಿಲ್ಲೆಯಲ್ಲಿ 2988 ಮೇಲ್ಮನವಿ ಅರ್ಜಿಗಳು ಬಾಕಿಯಿದ್ದು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಅತಿ ಹೆಚ್ಚು 1836 ಅರ್ಜಿಗಳು ಮೇಲ್ಮನವಿಯಲ್ಲಿ ಬಾಕಿಯಿರುತ್ತದೆ. ಅಂತೆಯೇ ಕಂದಾಯ ಇಲಾಖೆಯಲ್ಲಿ 623, ನಗರಾಭಿವೃದ್ಧಿಯಲ್ಲಿ 123, ಸಮಾಜ ಕಲ್ಯಾಣ ಇಲಾಖೆಯಲ್ಲಿ 80, ಗೃಹ ಇಲಾಖೆಯಲ್ಲಿ 72, ಅರಣ್ಯ ಇಲಾಖೆಯಲ್ಲಿ 51, ಶಿಕ್ಷಣ ಇಲಾಖೆಯಲ್ಲಿ 30, ಕೃಷಿ ಇಲಾಖೆಯಲ್ಲಿ 20, ಇಂಧನ ಇಲಾಖೆಯಲ್ಲಿ 20, ಜಲಸಂಪನ್ಮೂಲ ಇಲಾಖೆಯಲ್ಲಿ 16 ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಬಾಕಿಯಿರುವ ಮೇಲ್ಮನವಿಗಳನ್ನು ವಿಚಾರಣೆಗೆ ಒಳಪಡಿಸಲಾಗುತ್ತಿದೆ. ಸಾಧ್ಯವಾದಷ್ಟು ಪ್ರಥಮ ಮೇಲ್ಮನವಿ ಪ್ರಾಧಿಕಾರದಲ್ಲೇ ನಿಯಮಾನುಸಾರ ಮಾಹಿತಿ ಒದಗಿಸಿ ಆಯೋಗದ ಮೇಲಿನ ಒತ್ತಡವನ್ನು ಕಡಿಮೆ ಮಾಡಬೇಕು ಎಂದು ತಿಳಿಸಿದರು.
ತ್ರೆಮಾಸಿಕ ಕೆ.ಡಿ.ಪಿ ಸಭೆಗಳಲ್ಲಿ ಜನಪ್ರತಿನಿಧಿಗಳು ಮಾಹಿತಿ ಹಕ್ಕು ವಿಷಯವನ್ನು ಸಹ ಚರ್ಚಿಸಿ ಶೀಘ್ರ ವಿಲೇವಾರಿಗೆ ಕ್ರಮಕೈಗೊಳ್ಳಬೇಕು. ಅಗತ್ಯವಿದ್ದರೆ ಆಂದೋಲನಗಳನ್ನು ಆಯೋಜಿಸಿ ಅರ್ಜಿಗಳನ್ನು ಮಾಹಿತಿ ಒದಗಿಸಿ ವಿಲೇ ಮಾಡಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ.ಪ್ರವೀಣ್ ಪಿ. ಬಾಗೇವಾಡಿ, ಅಪರ ಜಿಲ್ಲಾಧಿಕಾರಿ ಮಂಗಳಾ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಗದೀಶ್, ಉಪ ಕಾರ್ಯದರ್ಶಿ ಶಿವಕುಮಾರ್, ಜಿಲ್ಲೆಯ ಎಲ್ಲಾ ಸಾರ್ವಜನಿಕ ಮಾಹಿತಿ ಅಧಿಕಾರಿಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.