

ಶಿವಮೊಗ್ಗ: ಮಹಾತ್ಮ ಗಾಂಧಿ ವಿಚಾರಧಾರೆಯನ್ನು ಸರಿಯಾದ ರೀತಿ ಅರ್ಥ ಮಾಡಿಕೊಳ್ಳದಿರುವುದು ಬೇಸರದ ಸಂಗತಿ ಎಂದು ಚಿಂತಕ ಲಕ್ಷ್ಮೀಶ ತೋಳ್ಪಾಡಿ ಹೇಳಿದರು.
ರಾಷ್ಟ್ರೀಯ ಶಿಕ್ಷಣ ಸಮಿತಿ, ಕರ್ನಾಟಕ ಗಾಂಧಿ ಸ್ಮಾರಕ ನಿಧಿ, ರಾಷ್ಟ್ರೀಯ ಸೇವಾ ಯೋಜನೆ, ಕುವೆಂಪು ವಿವಿ ಮತ್ತು ಎಟಿಎನ್‌ಸಿ ಕಾಲೇಜು ಆಶ್ರಯದಲ್ಲಿ ಏರ್ಪಡಿಸಿದ್ದ ಗಾಂಧಿ ತತ್ವ ಪ್ರಣೀತ ಯುವಜನ ಶಿಬಿರದಲ್ಲಿ ಮಾತನಾಡಿದರು.
ಗಾಂಧೀಜಿ ತತ್ವಗಳನ್ನು ಎಲ್ಲರೂ ಅವರ ಅನುಕೂಲಕ್ಕೆ ತಕ್ಕಂತೆ ಅರ್ಥೈಸಿಕೊಳ್ಳುತ್ತಿದ್ದಾರೆ. ಇಂತಹ ಮನಸ್ಥಿತಿ ಬದಲಾಗಬೇಕಾದ ಅಗತ್ಯವಿದೆ. ಆಗ ಸದೃಢ ಸಮಾಜ ಕಟ್ಟಲು ಸಾಧ್ಯವಾಗುತ್ತದೆ. ವಿಶೇಷವಾಗಿ ಯುವಜನರು ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಜಗತ್ತು ಬದಲಾಯಿಸಬೇಕೆಂಬ ಹಂಬಲ ಗಾಂಧೀಜಿ ಅವರಲ್ಲಿತ್ತು. ಗಾಂಧೀಜಿ ಜೀವನ ಪ್ರಯೋಗಶೀಲತೆಯಿಂದ ಕೂಡಿತ್ತು ಎಂದು ಹೇಳಿದರು.
ಯುವಜನರು ಗಾಂಧೀಜಿ ತತ್ವಾದರ್ಶಗಳನ್ನು ಮುಂದುವರಿಸಿಕೊಂಡು ಹೋಗುವ ಅಗತ್ಯವಿದೆ. ಎಲ್ಲರೂ ಸತ್ಯದ ಕಡೆಗೆ ನಡೆಯಬೇಕು ಆಗ ಮಾತ್ರ ಬದಲಾವಣೆ ಸಾಧ್ಯ. ಗಾಂಧೀಜಿ ಜೀವನದ ಆದರ್ಶಗಳನ್ನು ಜನರು ಸರಿಯಾಗಿ ಗ್ರಹಿಸಿದರೆ ಹೊಸ ಬದಲಾವಣೆಗೆ ಮುನ್ನುಡಿ ಬರೆಯಬಹುದು ಎಂದು ಅಭಿಪ್ರಾಯಪಟ್ಟರು.
ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಹ ಕಾರ್ಯದರ್ಶಿ ಜಿ.ವಿಜಯಕುಮಾರ್ ಮಾತನಾಡಿ, ಸರ್ವಕಾಲಕ್ಕೂ ಗಾಂಧೀಜಿ ಅವರ ಜೀವನದ ಪ್ರಮುಖ ತತ್ವಾದರ್ಶಗಳು ಪ್ರಸ್ತುತ ಎಂದು ತಿಳಿಸಿದರು.
ಉಪನ್ಯಾಸಕ ಪ್ರೊ. ಆರ್.ಎಂ.ಜಗದೀಶ್, ಕುವೆಂಪು ವಿವಿ ಎನ್‌ಎಸ್‌ಎಸ್ ಸಂಯೋಜನಾಧಿಕಾರಿ ಡಾ. ಶುಭಾ ಮರವಂತೆ, ಶಿಬಿರದ ಸಂಚಾಲಕ ಪ್ರೊ. ಕೆ.ಎಂ.ನಾಗರಾಜ ಉಪಸ್ಥಿತರಿದ್ದರು.