

Suspend: ಹರಿಯಾಣದ ಗುರುಗ್ರಾಮ್ನಲ್ಲಿ ಬೈಕ್ನಲ್ಲಿ ಹಿಂಬದಿ ಸವಾರ ಹೆಲ್ಮೆಟ್ ಧರಿಸಿಲ್ಲ ಎಂಬ ಕಾರಣಕ್ಕೆ ಜಪಾನ್ ಪ್ರಜೆಗಳನ್ನು ತಡೆದು ಅವರಿಂದ ಸಾವಿರ ರೂ. ಲಂಚ ಸ್ವೀಕರಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ತಕ್ಷಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಪೊಲೀಸರನ್ನು ಅಮಾನತು ಮಾಡಲಾಗಿದೆ ಎಂದು ಮಂಗಳವಾರ(ಸೆ. 02) ವರದಿಯಾಗಿದೆ.
ಅಮಾನತು ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಗುರುಗ್ರಾಮ್ ಸಂಚಾರ ಪೊಲೀಸರು, ಭ್ರಷ್ಟಾಚಾರದ ವಿರುದ್ಧ ನಮ್ಮದು ಶೂನ್ಯ ಸಹಿಷ್ಣುತೆ ಎಂಬ ನೀತಿ ಉಲ್ಲೇಖಿಸಿ, ಪ್ರವಾಸಿಗರಿಂದ ಹಣ ಸ್ವೀಕರಿಸಿ ಯಾವುದೇ ರಶೀದಿ ನೀಡದ ಹಿನ್ನೆಲೆ ಝೋನ್ ಆಫೀಸರ್ ಇಎಸ್ಐ ಕರಣ್ ಸಿಂಗ್, ಕಾನ್ಸ್ಟೇಬಲ್ ಶುಭಂ ಹಾಗೂ ಹೋಮ್ ಗಾರ್ಡ್ ಭೂಪೇಂದ್ರ ಅವರನ್ನು ಅಮಾನತು ಮಾಡಲಾಗಿದೆ. ಮತ್ತು ಇಂತಹ ಯಾವುದೇ ಮಾಹಿತಿಗಳಿದ್ದರೆ ದೂರು ನೀಡುವಂತೆ ಹೇಳಿದ್ದಾರೆ.
ವೈರಲ್ ಆದ ವಿಡಿಯೋದಲ್ಲಿ ಏನಿದೆ? ನಡೆದಿದ್ದೇನು?
ಆಗಸ್ಟ್ 25ರಂದು ಗುರುಗರಾಮ್ನಲ್ಲಿ ಜಪಾನಿ ಪ್ರವಾಸಿಗ ಯಮಟೊ ಎಂಬಾತ ಒಬ್ಬ ಮಹಿಳೆಯೊಂದಿಗೆ ಸ್ಕೂಟರ್‌ನಲ್ಲಿ ಹಿಂಬದಿಯವರಾಗಿ ಪ್ರಯಾಣಿಸುತ್ತಿದ್ದಾಗ ಹೆಲ್ಮೆಟ್ ಧರಿಸದ ಕಾರಣಕ್ಕೆ ಸಂಚಾರಿ ಪೊಲೀಸರು ಅವರನ್ನು ತಡೆದಿದ್ದಾರೆ. ಮಹಿಳೆ ಹೆಲ್ಮೆಟ್ ಧರಿಸಿದ್ದರೂ, ಯಮಟೊ ಹೆಲ್ಮೆಟ್ ಧರಿಸಿರಲಿಲ್ಲ.
ಈ ವೇಳೆ ಪೊಲೀಸರು ₹1,000 ದಂಡದ ಹೆಸರಿನಲ್ಲಿ ನಗದು ರೂಪದಲ್ಲಿ ಪಾವತಿಸುವಂತೆ ಒತ್ತಾಯಿಸಿದ್ದಾರೆ. ಆದರೆ ಡಿಜಿಟಲ್ ಪಾವತಿ ಮಾಡಬಹುದೇ ಎಂದು ಕೇಳಿದಾಗ ಬೇಡ ಕ್ಯಾಶ್ ನೀಡಿ ಎಂದು ಒತ್ತಾಯಿಸಿದ್ದಾರೆ. ಯಮಟೊ ಎರಡು ₹500 ನೋಟುಗಳನ್ನು ಪೊಲೀಸರಿಗೆ ನೀಡಿದ್ದು, ಅವರಿಗೆ ಯಾವುದೇ ರಸೀದಿಯನ್ನೂ ನೀಡಿಲ್ಲ. ಇದು ಮೆಟಾ ಸ್ಮಾರ್ಟ್ ಗ್ಲಾಸ್ ವಿಡಿಯೋದಲ್ಲಿ ರೇಕಾರ್ಡ್ ಆಗಿದೆ.
ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಯಿತು. ನೆಟಿಜನ್‌ಗಳು ಈ ಘಟನೆಯನ್ನು ಭಾರತದ ಅಂತರರಾಷ್ಟ್ರೀಯ ಚಿತ್ರಣವನ್ನು ಹಾಳುಮಾಡುವ ಕೃತ್ಯ ಎಂದು ಖಂಡಿಸಿದರು. ಕೆಲವರು ಪೊಲೀಸರಿಗೆ ಬಾಡಿ ಕ್ಯಾಮೆರಾಗಳನ್ನು ಕಡ್ಡಾಯಗೊಳಿಸಬೇಕು ಮತ್ತು ಇಂತಹ ಅಧಿಕಾರಿಗಳನ್ನು ಕೂಡಲೇ ವಜಾಗೊಳಿಸಬೇಕು ಎಂದು ಒತ್ತಾಯಿಸಿದರು. (ಏಜೆನ್ಸೀಸ್)