ಎಲ್.ಸಿ.ನಾಗರಾಜು ರಾಜೀನಾಮೆ ಅಂಗೀಕಾರ ; ಮಧುಗಿರಿಗೆ ಬಿಜೆಪಿ ಅಭ್ಯರ್ಥಿ ಆಗ್ತಾರಾ?

11TMK_LC_Nagraju
Published on

ತುಮಕೂರು: ರಾಜ್ಯದ ಗಮನ ಸೆಳೆದಿರುವ ಮಧುಗಿರಿ ಕ್ಷೇತ್ರದ ರಾಜಕೀಯ ಅಖಾಡ ರಂಗೇರುವುದು ದೃಢವಾಗಿದೆ. ಜೆಡಿಎಸ್, ಕಾಂಗ್ರೆಸ್ ನಡುವೆ ಪ್ರಬಲ ಸ್ಫರ್ಧೆಗೆ ಬಿಜೆಪಿಯೂ ಸಮರ್ಥ ಅಭ್ಯರ್ಥಿಯ ಹುಡುಕಾಟದಲ್ಲಿದೆ

ಕ್ಷೇತ್ರದಲ್ಲಿ ಹೆಚ್ಚು ಚರ್ಚೆಗೆ ಗ್ರಾಸವಾಗಿರುವ ಎಸ್‌ಟಿ ಸಮುದಾಯದ ಕೆಎಎಸ್ ಅಧಿಕಾರಿ ಎಲ್.ಸಿ.ನಾಗರಾಜು ರಾಜೀನಾಮೆಯನ್ನು ಸರ್ಕಾರ ಅಂಗೀಕರಿಸುವ ಮೂಲಕ ಅವರ ರಾಜಕೀಯ ಪ್ರವೇಶಕ್ಕಿದ್ದ ತಾಂತ್ರಿಕ ಅಡೆತಡೆ ನಿವಾರಣೆಯಾಗಿರುವುದು ಇತ್ತೀಚಿನ ಹೊಸ ಬೆಳವಣಿಗೆಯಾಗಿದೆ.

ಈಗಾಗಲೇ ರಾಜಕಾರಣದಲ್ಲಿ ಸಕ್ರಿಯರಾಗಿರುವ ಕೆಎಎಸ್ ಅಧಿಕಾರಿ, ಮಧುಗಿರಿ ತಾಲೂಕು ಚಿಕ್ಕಮಾಲೂರಿನ ಎಲ್.ಸಿ.ನಾಗರಾಜು ಹುದ್ದೆಗೆ ನೀಡಿದ್ದ ರಾಜೀನಾಮೆಯನ್ನು ರಾಜ್ಯ ಸರ್ಕಾರ ಮಾ.9ರಂದು ಅಂಗೀಕರಿಸಿದ್ದು, ಬಿಜೆಪಿಯಿಂದ ಕಣದಲ್ಲಿರುತ್ತಾರೆ ಎಂಬ ವದಂತಿ ಕ್ಷೇತ್ರದೆಲ್ಲೆಡೆ ಹಬ್ಬಿದೆ.

ಸಾಮಾನ್ಯ ಕ್ಷೇತ್ರದಲ್ಲಿ ಪರಿಶಿಷ್ಟ ಸಮುದಾಯದ ಅಭ್ಯರ್ಥಿಗೆ ಟಿಕೆಟ್ ನೀಡುತ್ತಿರುವ ಕಾಂಗ್ರೆಸ್ ಸಾಲಿಗೆ ಬಿಜೆಪಿ ಕೂಡ ಸೇರ್ಪಡೆಯಾಗುವ ಸಾಧ್ಯತೆ ದಟ್ಟವಾಗಿದ್ದು, ಮಾಜಿ ಶಾಸಕ ಕೆ.ಎನ್.ರಾಜಣ್ಣ ವಿರುದ್ಧ ಅದೇ ಸಮುದಾಯದ ಎನ್.ಸಿ.ನಾಗರಾಜು ತೊಡೆತಟ್ಟುವ ಸಾಧ್ಯತೆ ದಟ್ಟವಾಗಿದೆ.

ಐಎಂಎ 2 ಸಾವಿರ ಕೋಟಿ ರೂ., ವಂಚನೆ ಪ್ರಕರಣದ ಆರೋಪದಲ್ಲಿ ಸಿಬಿಐ ವಿಚಾರಣೆ ಎದುರಿಸುತ್ತಿರುವ ಕೆಎಎಸ್ ಅಧಿಕಾರಿ ಎಲ್.ಸಿ.ನಾಗರಾಜು ರಾಜೀನಾಮೆ ಅಂಗೀಕರಿಸುವ ಬಗ್ಗೆ ಚರ್ಚೆ ನಡೆದಿತ್ತು. ಸ್ಫರ್ಧೆಗೆ ಈಗ ಎಲ್ಲ ತಾಂತ್ರಿಕ ಅಡೆತಡೆಗಳು ನಿವಾರಣೆಯಾಗಿದ್ದು, ರಾಜಕೀಯ ರಂಗಕ್ಕೆ ಪ್ರವೇಶಿಸುವ ಸಾಧ್ಯತೆಯಿದೆ. ಕೆಲವು ತಿಂಗಳ ಹಿಂದೆಯಷ್ಟೇ ನಾಗರಾಜು ಜೆಡಿಎಸ್‌ನಿಂದಲೂ ಟಿಕೆಟ್‌ಗೆ ಪ್ರಯತ್ನಿಸಿದ್ದರು, ಇದೇ ಕಾರಣಕ್ಕೆ ಹಾಲಿ ಶಾಸಕ ಎಂವಿವಿ ಚುನಾವಣೆಯಲ್ಲಿ ಸ್ಫರ್ಧಿಸುವುದಿಲ್ಲ ಎಂದು ಘೋಷಿಸಿದ್ದು ರಾಜ್ಯದೆಲ್ಲೆಡೆ ಚರ್ಚೆಗೆ ಕಾರಣವಾಗಿತ್ತು.

ಆದರೆ, ಈಗ ಜೆಡಿಎಸ್ ಕುಂಚಿಟಿಗ ಸಮುದಾಯಕ್ಕೆ ಟಿಕೆಟ್ ತಪ್ಪಿಸುವ ಸಾಧ್ಯತೆಯಿಲ್ಲ. ಹಾಗಾಗಿ, ರಾಜೀನಾಮೆ ಅಂಗೀಕಾರವಾಗಿರುವ ಎಲ್.ಸಿ.ನಾಗರಾಜು ಈವರೆಗಿನ ಚುನಾವಣೆಗಳಲ್ಲಿ ಕ್ಷೇತ್ರದಲ್ಲಿ ಅಷ್ಟೇನೂ ಬಲ ತೋರಿಸಲು ಸಾಧ್ಯವಾಗದ ಬಿಜೆಪಿಯಿಂದ ಸ್ಫರ್ಧಿಸುವ ಸಾಧ್ಯತೆಯಿದೆ.

ಕುಂಚಿಟಿಗರು ಹೆಚ್ಚಿನ ಸಂಖ್ಯೆಯಲ್ಲಿದ್ದರೂ ಕ್ಷೇತ್ರದಲ್ಲಿ ಪರಿಶಿಷ್ಟ ಸಮುದಾಯಗಳು ಹಾಗೂ ಒಬಿಸಿ ಮತದಾರರ ಸಂಖ್ಯೆಯೂ ಕಡಿಮೆ ಏನಿಲ್ಲ, ಕಳೆದ ಲೋಕಸಭೆ ಚುನಾವಣೆಯಲ್ಲಿ ಮಾತ್ರ ಬಿಜೆಪಿ ಹೆಚ್ಚು ಮತ ಪಡೆದ ದಾಖಲೆಯಿದ್ದು ಇದೇ ವಿಶ್ವಾಸದಲ್ಲಿ ಸಮರ್ಥ ಅಭ್ಯರ್ಥಿ ಕಣಕ್ಕಿಳಿಸಿ ಪ್ರಬಲ ಸ್ಪರ್ಧೆಯೊಡ್ಡುವ ಬಯಕೆ ಕಮಲ ಪಾಳಯದಲ್ಲಿದೆ.

ಸೇಡು ತೀರಿಸಿಕೊಳ್ಳಲು ರಾಜಕೀಯ ಪ್ರವೇಶ? ಸರ್ಕಾರಿ ಇಲಾಖೆ ಅಧಿಕಾರಿಯಾಗಿದ್ದರೂ 2018ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆ.ಎನ್.ರಾಜಣ್ಣ ಪರವಾಗಿ ಕ್ಷೇತ್ರದಲ್ಲಿ ಪ್ರಚಾರ ನಡೆಸಿದ್ದ ಎಲ್.ಸಿ.ನಾಗರಾಜು ನಂತರದ ದಿನಗಳಲ್ಲಿ ಅವರ ವಿರುದ್ಧವೇ ಗುರುತಿಸಿಕೊಂಡಿರುವುದು ಕ್ಷೇತ್ರದಲ್ಲಿ ಈಗ ಗುಟ್ಟಾಗಿ ಉಳಿದಿಲ್ಲ. ಐಎಂಎ ಹಗರಣದಲ್ಲಿ ಸಿಲುಕಿದ್ದಾಗ ನಾಗರಾಜು ಬಂಧಿಸಿದ್ದ ಸಿಬಿಐ ಪೊಲೀಸ್ ಅಧಿಕಾರಿಗೆ ಕ್ಷೇತ್ರದ ಮುಖಂಡರೊಬ್ಬರು ಪ್ರಭಾವ ಬೀರಿದ್ದಾರೆ ಎಂದು ಅವರ ವಿರುದ್ಧ ಸೇಡು ತೀರಿಸಿಕೊಳ್ಳಲು ರಾಜಕೀಯ ಪ್ರವೇಶ ಮಾಡಲಿದ್ದಾರೆ ಎಂದು ಅವರ ಅಭಿಮಾನಿಗಳು ಬಹಿರಂಗವಾಗಿಯೇ ಕ್ಷೇತ್ರದಲ್ಲಿ ಮಾತನಾಡುತ್ತಿರುವುದು ಚುನಾವಣೆ ಸಮಯದಲ್ಲಿ ಕದನ ಕುತೂಹಲ ಹೆಚ್ಚಿಸಿದೆ.

ಕ್ಷೇತ್ರದಲ್ಲಿ ಹೊರಗಿನವರೇ ಗೆದ್ದಿದ್ದು ಹೆಚ್ಚು! ಮಧುಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಈವರೆಗೆ ಗೆದ್ದಿರುವವರ ಪೈಕಿ ಬಹುತೇಕರು ತಾಲೂಕಿನಿಂದ ಹೊರಗಿನಿಂದ ಬಂದವರು. ಹಾಲಿ ಶಾಸಕ ಎಂ.ವಿ.ವೀರಭದ್ರಯ್ಯ ನೆಲಮಂಗಲ ತಾಲೂಕು ಮಣ್ಣೆ ಗ್ರಾಮದವರು, ಕೆ.ಎನ್.ರಾಜಣ್ಣ ಕ್ಯಾತಸಂದ್ರದವರು. ಅದಕ್ಕೂ ಹಿಂದೆ ಶಾಸಕರಾಗಿದ್ದ ಡಾ.ಜಿ.ಪರಮೇಶ್ವರ್ ಕೂಡ ತುಮಕೂರು ಮೂಲದವರಾಗಿದ್ದು ಗಂಗಹನುಮಯ್ಯ, ಡಿ.ಸಿ.ಗೌರಿಶಂಕರ್, ಅನಿತಾಕುಮಾರಸ್ವಾಮಿ ಸೇರಿ ಎಲ್ಲರೂ ಹೊರಗಿನವರೇ ಹಾಗಾಗಿ, ಈಗ ಮಧುಗಿರಿಯಲ್ಲಿ ಸ್ಥಳೀಯರು ಗೆದ್ದಿಲ್ಲ ಎಂಬ ರಾಜಕೀಯ ಚರ್ಚೆ ಮುನ್ನೆಲೆಗೆ ಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net