ಸಾಲ ಕೊಡಲು ಹಣವಿಲ್ಲದಿದ್ದರೂ ಅರ್ಜಿ ಸ್ವೀಕಾರ

sahakara bharati prasannakumar
ಸಹಕಾರ ಭಾರತಿ ರಾಜ್ಯ ಕಾರ್ಯದರ್ಶಿ ಎ.ಆರ್.ಪ್ರಸನ್ನಕುಮಾರ್
Published on

ಶಿವಮೊಗ್ಗ: ಡಿಸಿಸಿ ಬ್ಯಾಂಕ್‌ಗಳಿಗೆ ನಬಾರ್ಡ್‌ನಿಂದ ರಿಯಾಯಿತಿ ಬಡ್ಡಿ ದರದಲ್ಲಿ ಅಲ್ಪಾವಧಿ ಕೃಷಿ ಸಾಲದ ಪುನರ್ಧನ ಮಿತಿ ಕಡಿಮೆಯಾಗಿದೆ ಎಂಬ ಶಿವಮೊಗ್ಗ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ಅವರ ಆರೋಪ ಸರಿಯಲ್ಲ. ರಾಜಕೀಯ ಉದ್ದೇಶಕ್ಕಾಗಿ ಈ ರೀತಿಯಾಗಿ ದೂಷಣೆ ಮಾಡುತ್ತಿದ್ದಾರೆ ಎಂದು ಸಹಕಾರ ಭಾರತಿ ರಾಜ್ಯ ಕಾರ್ಯದರ್ಶಿ ಎ.ಆರ್.ಪ್ರಸನ್ನಕುಮಾರ್ ಆರೋಪಿಸಿದರು.

ರೈತರಿಗೆ ಡಿಸಿಸಿ ಬ್ಯಾಂಕ್‌ಗಳು ಸಾಲ ಕೊಡಬೇಕು ನಿಜ. ಆದರೆ ಇನ್ಯಾರನ್ನೋ ನಂಬಿಕೊಳ್ಳುವುದು ಬೇಡ. ತಾವೇ ಆರ್ಥಿಕವಾಗಿ ಸ್ವಾವಲಂಬನೆ ಹೊಂದುವ ಮೂಲಕ ಸಾಲ ಕೊಡುವ ಶಕ್ತಿ ಬೆಳೆಸಿಕೊಳ್ಳಬೇಕು. ರೈತರಿಗೆ ಸಾಲ ಕೊಡಲು ಆಗದೆ ನಬಾರ್ಡ್‌ನತ್ತ ಬೆರಳು ತೋರಬಾರದು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿರುಗೇಟು ನೀಡಿದರು.
ನಬಾರ್ಡ್‌ನಿಂದ ಪ್ರಸಕ್ತ ವರ್ಷ 32 ಸಾವಿರ ಕೋಟಿ ರೂ. ಮಂಜೂರಾಗಿದೆ. ಇದರಲ್ಲಿ ಡಿಸಿಸಿ ಬ್ಯಾಂಕ್‌ಗಳಿಗೆ 25 ಸಾವಿರ ಕೋಟಿ ರೂ., ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳಿಗೆ 7 ಸಾವಿರ ಕೋಟಿ ರೂ. ನೀಡಲಾಗಿದೆ. ಹೆಚ್ಚುವರಿ ಸಾಲ ಕೊಡುವುದಾಗಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಂದ ಶಿವಮೊಗ್ಗ ಡಿಸಿಸಿ ಬ್ಯಾಂಕ್ ಅರ್ಜಿಗಳನ್ನು ತರಿಸಿಕೊಂಡಿದೆ. ಆದರೆ ಇವರ ಬಳಿ ಸಾಲ ನೀಡಲು ಹಣವಿಲ್ಲ. ಆರ್ಥಿಕ ನೆಲೆ ಬಲಪಡಿಸಲು ಷೇರು ಬಂಡವಾಳ ಹೆಚ್ಚಿಸಿಕೊಳ್ಳದಿರುವುದೇ ಇದಕ್ಕೆ ಕಾರಣ ಎಂದರು.
ಸಹಕಾರ ಭಾರತಿ ಜಿಲ್ಲಾ ಕಾರ್ಯದರ್ಶಿ ತಿಮ್ಮಪ್ಪ, ಪ್ರಧಾನ ಕಾರ್ಯದರ್ಶಿ ನಂದೀಶ್, ಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ಕೀರ್ತಿರಾಜ್, ಸಹಕಾರಿಗಳಾದ ಭೀಮ ರಾವ್, ರತ್ನಾಕರ್, ಶಿವನಂಜಪ್ಪ, ಜಿ.ವಿರೂಪಾಕ್ಷಪ್ಪ ಸುದ್ದಿಗೋಷ್ಠಿಯಲ್ಲಿದ್ದರು.

ಅಲ್ಪಾವಧಿ ಸಾಲ ನೀಡುವುದಾಗಿ ಜಿಲ್ಲೆಯ 170 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಂದ ಅರ್ಜಿ ತರಿಸಿಕೊಂಡಿದೆ. ಹೆಚ್ಚುವರಿ ಸಾಲ ನೀಡಲು ಬ್ಯಾಂಕ್‌ನಲ್ಲಿ ಹಣವಿಲ್ಲ. ನಬಾರ್ಡ್‌ನಿಂದ ಪುನರ್ಧನ ತರಿಸಿಕೊಳ್ಳುವುದು ಡಿಸಿಸಿ ಬ್ಯಾಂಕ್‌ನ ಕೆಲಸ. ಪುನರ್ಧನ ಕಡಿಮೆ ಮಾಡಿದ್ದಾರೆಂದು ನಬಾರ್ಡ್ ಮೇಲೆ ಆರೋಪ ಮಾಡುವುದು ಸರಿಯಲ್ಲ.-ಎಚ್.ಎಸ್.ಮಹೇಶ್, ಸಹಕಾರ ಭಾರತಿ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net