

ಹೈದರಾಬಾದ್: ತೆಲಂಗಾಣದ ಭ್ರಷ್ಟಾಚಾರ ನಿಗ್ರಹ ದಳ ಅಧಿಕಾರಿಗಳು ಭರ್ಜರಿ ಬೇಟೆಯಾಡಿದ್ದಾರೆ. ಸರ್ಕಾರಿ ಅಧಿಕಾರಿ ಬಳಿ ಬರೋಬ್ಬರಿ 100 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಆಸ್ತಿಯನ್ನು ಪತ್ತೆಹಚ್ಚಿದ್ದಾರೆ.
ಇದನ್ನೂ ಓದಿ: ಹಗಲು ಸಿಇಒ..ರಾತ್ರಿ ಕ್ಯಾಬ್ ಡ್ರೈವರ್!
ತೆಲಂಗಾಣದ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರದ ಕಾರ್ಯದರ್ಶಿ ಮತ್ತು ಮೆಟ್ರೋ ರೈಲು ಯೋಜನಾ ಅಧಿಕಾರಿ ಎಸ್.ಬಾಲಕೃಷ್ಣ ಅವರ ನಿವಾಸದ ಮೇಲೆ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳೇ ದಂಗಾಗಿ ಹೋಗಿದ್ದಾರೆ. ಕೋಟ್ಯಂತರ ರೂ. ಬೆಲೆಬಾಳುವ ಆಸ್ತಿ ಪತ್ತೆಯಾಗಿದೆ.
ಎಸ್.ಬಾಲಕೃಷ್ಣ ಈ ಹಿಂದೆ ಹೈದರಾಬಾದಿನ ಮೆಟ್ರೋಪಾಲಿಟನ್ ಡೆವಲಪ್‌ಮೆಂಟ್ ಅಥಾರಿಟಿಯಲ್ಲಿ ಟೌನ್ ಪ್ಲಾನಿಂಗ್ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ಭ್ರಷ್ಟಾಚಾರ ನಿಗ್ರಹ ದಳದ 14 ತಂಡ ಬುಧವಾರ ಮತ್ತು ಗುರುವಾರ 20 ಸ್ಥಳಗಳಲ್ಲಿ ಶೋಧ ಕಾರ್ಯ ನಡೆಸಿದ್ದಾರೆ. ಎಚ್‌ಎಂಡಿಎ ಮತ್ತು ರೇರಾ ಮತ್ತು ಅವರ ಮನೆ ಮತ್ತು ಇತರ ಪ್ರಮುಖ ಸ್ಥಳಗಳ ಮೇಲೆ ದಾಳಿ ನಡೆಸಿದ್ದಾರೆ.
ಬಾಲಕೃಷ್ಣ ಅವರ ಮನೆ, ಕಚೇರಿಗಳು, ಸಂಬಂಧಿಕರ ಮನೆಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಲಾಗಿದೆ. ಈ ವೇಳೆ 100 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಆಸ್ತಿ ಪತ್ತೆಯಾಗಿದೆ. ಸುಮಾರು 40 ಲಕ್ಷ ರೂ. ನಗದು, 2 ಕೆಜಿ ಚಿನ್ನಾಭರಣ, ದೊಡ್ಡ ಮೊತ್ತದ ಚರ ಮತ್ತು ಸ್ಥಿರ ಆಸ್ತಿ ದಾಖಲೆಗಳು, 60 ದುಬಾರಿ ಕೈಗಡಿಯಾರಗಳು, 14 ದುಬಾರಿ ಮೊಬೈಲ್ ಫೋನ್‌ಗಳು, 10 ಲ್ಯಾಪ್‌ಟಾಪ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಅಧಿಕಾರಿಯ ಬ್ಯಾಂಕ್ ಲಾಕರ್‌ಗಳನ್ನು ಇನ್ನೂ ತೆರೆದಿಲ್ಲ. ಎಸಿಬಿ ಕನಿಷ್ಠ ೪ ಬ್ಯಾಂಕ್‌ಗಳಲ್ಲಿ ಲಾಕರ್‌ಗಳಿರುವುದನ್ನು ಗುರುತಿಸಿದೆ. ಅಧಿಕಾರಿಯ ನಿವಾಸದಲ್ಲಿ ನಗದು ಎಣಿಕೆ ಯಂತ್ರಗಳನ್ನು ಸಹ ಎಸಿಬಿ ಅಧಿಕಾರಿಗಳು ಪತ್ತೆ ಮಾಡಿದ್ದಾರೆ ಎನ್ನಲಾಗಿದೆ. ಭ್ರಷ್ಟ ಅಧಿಕಾರಿ ಬಾಲಕೃಷ್ಣ ಎಚ್‌ಎಂಡಿಎಯಲ್ಲಿ ಸೇವೆ ಸಲ್ಲಿಸಿದ ನಂತರ ಅಪಾರ ಪ್ರಮಾಣದ ಸಂಪತ್ತನ್ನು ಗಳಿಸಿದ್ದಾರೆಂದು ವರದಿಯಾಗಿದೆ.