

ಕೊಳ್ಳೇಗಾಲ: ಕಾವೇರಿ ಪ್ರವಾಹದಿಂದ ತಾಲೂಕಿನ ನದಿ ಪಾತ್ರದ ಗ್ರಾಮಗಳ ಜಮೀನುಗಳು ಮುಳುಗಡೆಯಾಗಿರುವ ಸ್ಥಳಗಳು ಹಾಗೂ ಕಾವೇರಿ ನದಿಯನ್ನು ಸೋಮವಾರ ಉಪವಿಭಾಗಧಿಕಾರಿ ಬಿ.ಆರ್.ಮಹೇಶ್ ವೀಕ್ಷಿಸಿದರು.
ಕಾವೇರಿ ಜಲಾನಯನ ಪ್ರದೇಶದಲ್ಲಿ ಬಿಟ್ಟು ಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ಕೆಆರ್‌ಎಸ್ ಹಾಗೂ ಕಬಿನಿ ಜಲಾಶಯ ಭರ್ತಿಯಾಗಿದೆ. ಈ ಹಿನ್ನೆಲೆಯಲ್ಲಿ ಅಧಿಕ ಪ್ರಮಾಣದಲ್ಲಿ ಈ ಎರಡೂ ಅಣೆಕಟ್ಟೆಗಳಿಂದ ಕಾವೇರಿ ನದಿಗೆ ನೀರನ್ನು ಬಿಡಲಾಗಿದೆ. ಕಾವೇರಿ ಪ್ರವಾಹ ಪರಿಸ್ಥಿತಿಯಲ್ಲಿ ಹರಿಯುತ್ತಿದೆ. ನದಿಯಲ್ಲಿ ನೀರಿನ ಮಟ್ಟ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ತಗ್ಗು ಪ್ರದೇಶ ಇರುವ ಕಡೆ ನೀರು ನುಗ್ಗಿದ್ದು, ನದಿ ಪಾತ್ರದ ಗ್ರಾಮಗಳಾದ ದಾಸನಪುರ, ಹಳೇ ಹಂಪಾಪುರ, ಮುಳ್ಳೂರು, ಹಳೇ ಅಣಗಳ್ಳಿ ಗ್ರಾಮಗಳ ವ್ಯಾಪ್ತಿಯ ನೂರಾರು ಎಕರೆ ಜಮೀನು ಮುಳುಗಡೆಗೊಂಡಿವೆ.
ಈ ಹಿನ್ನೆಲೆಯಲ್ಲಿ ಉಪವಿಭಾಗಧಿಕಾರಿ ಬಿ.ಆರ್.ಮಹೇಶ್ ಅವರು ಭಾನುವಾರ ರಾತ್ರಿ ಹಾಗೂ ಸೋಮವಾರ ಮಧ್ಯಾಹ್ನ ಮುಳ್ಳೂರು, ಹಳೇ ಹಂಪಾಪುರ, ದಾಸನಪುರ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದು ಈ ಬಗ್ಗೆ ವಿಜಯವಾಣಿಯೊಂದಿಗೆ ಮಾತನಾಡಿ, ಕೇರಳ ಭಾಗದಲ್ಲಿ ವ್ಯಾಪಕವಾಗಿ ಮಳೆಯಾಗುತ್ತಿರುವ ಕಾರಣ ಕಬಿನಿ ಹಾಗೂ ಕೆಆರ್‌ಎಸ್ ಅಣೆಕಟ್ಟಿನಿಂದ ಕಾವೇರಿ ನದಿಗೆ ನೀರು ಬಿಡಲಾಗಿದೆ. ಭಾನುವಾರ ಎರಡೂ ಅಣೆಕಟ್ಟೆಯಿಂದ ಬೆಳಗ್ಗೆ ಮತ್ತು ಸಂಜೆ ನೀರನ್ನು ಹರಿಸಲಾಗಿದೆ. ಪರಿಣಾಮ ನದಿ ಪಾತ್ರ ದಲ್ಲಿರುವ ಜಮೀನುಗಳಿಗೆ ನೀರು ನುಗ್ಗಿದೆ. ಅಂತೆಯೇ ಸೋಮವಾರ ಕೂಡ ಬೆಳಗ್ಗೆ ನೀರು ಬಿಡಲಾಗಿದೆ. ಬಳಿಕ ಮಧ್ಯಾಹ್ನ ಕಬಿನಿಯಿಂದ 30 ಸಾವಿರ ಕ್ಯೂಸೆಕ್ ಹಾಗೂ ಕೆಆರ್‌ಎಸ್‌ನಿಂದ 85 ಸಾವಿರ ಒಟ್ಟು 1.15 ಲಕ್ಷ ಕ್ಯೂಸೆಕ್ ನೀರನ್ನು ಹರಿಸಲಾಗಿದೆ. ಸದ್ಯ 10 ಸಾವಿರ ಕ್ಯೂಸೆಕ್ ನೀರು ಕಡಿಮೆಯಾಗಿದೆ. ನದಿ ಪಾತ್ರದ ಜನರು ಆತಂಕಪಡುವ ಅಗತ್ಯವಿಲ್ಲ. ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತ ಪ್ರವಾಹ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ. ಪ್ರವಾಹ ಪರಿಸ್ಥಿತಿ ಎದುರಾದರೆ ಜನರನ್ನು ಸ್ಥಳಾಂತರ ಮಾಡಲು ಸಿದ್ಧತೆ ಮಾಡಲಾಗಿದೆ. ಕಾಳಜಿ ಕೇಂದ್ರಗಳನ್ನು ಗುರುತಿಸಲಾಗಿದೆ. ಆದರೆ, ಜನರು ಎಚ್ಚರಿಕೆ ವಹಿಸಬೇಕು. ನದಿಯ ಕಡೆಗೆ ತೆರಳಬಾರದು ಎಂದು ಮನವಿ ಮಾಡಿದರು.
ನದಿಯ ತೆರಳದಂತೆ ಪೊಲೀಸ್ ಕವಾಲು: ಕಾವೇರಿ ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ. ನದಿಯಲ್ಲಿ ನೀರು ಹೆಚ್ಚಾಗಿ ಜನ ವಸತಿ ಪ್ರದೇಶಗಳನ್ನು ಆವರಿಸಬಹುದಾಗಿದೆ. ಹಾಗಾಗಿ ತಾಲೂಕು ಆಡಳಿತ ಪ್ರವಾಹ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ. ಹಳೇ ಹಂಪಾಪುರ, ದಾಸನಪುರ, ಮುಳ್ಳೂರು, ಹರಳೆ, ಸತ್ತೇಗಾಲ, ಯಡಕೂರಿಯ ಗ್ರಾಮದಿಂದ ನದಿಗೆ ಯಾರು ತೆರಳಬಾರದೆಂದು ಪೊಲೀಸ್ ಇಲಾಖೆ ಬ್ಯಾರಿಗೇಡ್ ಅಳವಡಿಸಿ ಸಿಬ್ಬಂದಿ ನಿಯೋಜಿಸಿ ನದಿ ಕಡೆಗೆ ಜನರು ತೆರಳದಂತೆ ನಿಗಾ ವಹಿಸಿದ್ದಾರೆ.