

ಕೋಲಾರ: ನಿತ್ಯ ಸಾರ್ವಜನಿಕರ ಭೇಟಿ, ಕಚೇರಿ ಕೆಲಸ, ಸ್ಥಳ ಪರಿಶೀಲನೆ ಹೀಗೆ ನಾನಾ ರೀತಿ ಕಾರ್ಯ ಒತ್ತಡದಲ್ಲಿರುವ, ಉಪ ವಿಭಾಗಾಧಿಕಾರಿ ಡಾ.ಮೈತ್ರಿ ಎಚ್.ಪಿ.ಎಸ್ ಅವರು ಸೋಮವಾರ ಸೇತಸ್ಕೋಪ್ ಹಿಡಿದು ಮಕ್ಕಳ ಆರೋಗ್ಯ ತಪಾಸಣೆ ಮಾಡಿದರು.
ಕೋಲಾರ ಉಪವಿಭಾಗಾಧಿಕಾರಿ ಡಾ.ಮೈತ್ರಿ ಅವರು, ಸೋಮವಾರ ದಿಢೀರನೆ ನಗರದ ಎಸ್ಎನ್ಆರ್ ಜಿಲ್ಲಾಸ್ಪತ್ರೆ ಮಹಿಳಾ ಮತ್ತು ಮಕ್ಕಳ ವಿಭಾಗಕ್ಕೆ ಭೇಟಿ ನೀಡಿ ಆರೋಗ್ಯ ತಪಾಸಣೆ ಮಾಡುವ ಮೂಲಕ ವೃತ್ತಿ ನೆನಪಿಸಿಕೊಂಡರು.
ಆಸ್ಪತ್ರೆಯಲ್ಲಿನ ಮಕ್ಕಳ ವಾರ್ಡಿಗೆ ಭೇಟಿ ನೀಡಿದ ಮೈತ್ರಿ, ಒಳ ರೋಗಿಗಳ ಯೋಗ ಕ್ಷೇಮ ವಿಚಾರಿಸಿದರು. ಆರೋಗ್ಯ ಸಮಸ್ಯೆ, ವೈದ್ಯರು ಯಾವ ರೀತಿ ಚಿಕಿತ್ಸೆ ನೀಡುತ್ತಿದ್ದಾರೆ ಎಂಬುದರ ಬಗ್ಗೆ ಪರಿಶೀಲಿಸಿದರು. ಸ್ವಚ್ಛತೆ ಹೀಗೆ, ಔಷಧ ಲಭ್ಯತೆ, ಸಿಬ್ಬಂದಿ ಕುರಿತು ಮಾಹಿತಿ ಪಡೆದುಕೊಂಡರು.
ಅನಂತರ ಒಪಿಡಿಯಲ್ಲಿ ಕುಳಿತು, ಚಿಕಿತ್ಸೆಗಾಗಿ ಬಂದಿದ್ದ ಮಕ್ಕಳ ಆರೋಗ್ಯ ತಪಾಸಣೆ ನಡೆಸಿ, ಔಷಧ ಬರೆದುಕೊಟ್ಟರು. ಹೀಗೆ ಸುಮಾರು ಅರ್ಧ ತಾಸಿಗೂ ಹೆಚ್ಚು ಕಾಲ ಮೂಲ ವೃತ್ತಿ ಮಾಡಿದ್ದು, ಹಳೇ ನೆನಪುಗಳನ್ನು ಮರುಕಳುಹಿಸುವಂತೆ ಮಾಡಿದೆ. ಆಸ್ಪತ್ರೆಯಲ್ಲಿ ವಿವಿಧ ಸೌಲಭ್ಯಗಳ ಸಮರ್ಪಕ ಬಳಕೆ ಕುರಿತು ಜಿಲ್ಲಾ ಸರ್ವೇಕ್ಷಣಾಧಿಕಾರಿ ಹಾಗೂ ಪ್ರಭಾರ ಶಸ್ತ್ರ ಚಿಕಿತ್ಸಕ ಡಾ.ಜಗದೀಶ್ ರವರೊಂದಿಗೆ ಚರ್ಚಿಸಿದರು.