

ಸುಂಟಿಕೊಪ್ಪ: ಮಾದಾಪುರ ಗ್ರಾಮ ಪಂಚಾಯಿತಿ ಸಭೆಗೆ ಪ್ರಮುಖ ಇಲಾಖೆಯ ಅಧಿಕಾರಿಗಳು ಗೈರಾದ ಹಿನ್ನೆಲೆಯಲ್ಲಿ ಗ್ರಾಮಸಭೆಯನ್ನು ಮುಂದೂಡಲಾಯಿತು.
ಮಾದಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಜಾಲಿ ಸೋಮಣ್ಣ ಅಧ್ಯಕ್ಷತೆಯಲ್ಲಿ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಗ್ರಾಮಸಭೆಯಲ್ಲಿ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದು, ಸಭೆಗೆ ಪ್ರಮುಖ ಇಲಾಖೆಗಳಾದ ಕಂದಾಯ, ಕೃಷಿ, ತೋಟಗಾರಿಕೆ ಹಾಗೂ ಆಹಾರ ಇಲಾಖಾಧಿಕಾರಿಗಳು ಗೈರಾಗಿದ್ದರು. ಇದರಿಂದ ಕೆಂಡಾಮಂಡಲರಾದ ಗ್ರಾಮಸ್ಥರಾದ ಕೊಪ್ಪತ್ತಂಡ ಗಣೇಶ, ಮಾಜಿ ಸದಸ್ಯ ಮಜೀದ್, ಮಠದ ಗಣೇಶ್, ಮಾಜಿ ಸದಸ್ಯ ಎಚ್.ಕೆ.ಸೋಮಪ್ಪ ತೀವ್ರ ಆಕ್ರೋಶವ್ಯಕ್ತಪಡಿಸಿ ಸಭೆಯನ್ನು ಮುಂದೂಡುವಂತೆ ಒತ್ತಾಯಿಸಿದರು.
ಗ್ರಾಮಸಭೆಗೆ ಹಾಜರಾಗುವಂತೆ 32 ಇಲಾಖೆಗಳಿಗೆ ನೋಟಿಸ್ ಕಳುಹಿಸಲಾಗಿದ್ದು, ಪ್ರಮುಖ ಇಲಾಖೆ ಅಧಿಕಾರಿಗಳೇ ಸಭೆಗೆ ಬಾರದಿರುವುದರಿಂದ 15 ದಿನದಲ್ಲಿ ಗ್ರಾಮಸಭೆಯನ್ನು ನಡೆಸದಿದ್ದಲ್ಲಿ ಗ್ರಾಮ ಪಂಚಾಯಿತಿ ಮುತ್ತಿಗೆ ಹಾಕಿ ರಸ್ತೆ ಸಂಚಾರ ತಡೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಏತನ್ಮಧ್ಯೆ ಗ್ರಾಮ ಪಂಚಾಯಿತಿ ವತಿಯಿಂದ ಮನೆಗಳಿಗೆ ಕಲುಷಿತ ನೀರು ಸರಬರಾಜಾಗುತ್ತಿದ್ದು ನೀರನ್ನು ಬಾಟಲಿಯಲ್ಲಿ ತಂದು ಪಂಚಾಯಿತಿ ಮಾಜಿ ಉಪಾಧ್ಯಕ್ಷ ಹನೀಫ್ ಪ್ರದರ್ಶಿಸಿ ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮ ಸಭೆಯಲ್ಲಿ ಉಪಾಧ್ಯಕ್ಷ ಸುರೇಶ್ ಬಾವೆ, ಪಿಡಿಒ ಗುಳ್ಳಪ್ಪ ಕೂತಿನರ್, ಸದಸ್ಯರಾದ ಕೆ.ಎ.ಲತೀಫ್, ಪಿ.ಡಿ.ಅಂತೋಣಿ, ದಮಯಂತಿ,ಶೀಲಾ, ಜ್ಯೋತಿ, ಗಿರೀಶ, ಗೋಪಿ, ನಿರೂಪಾ, ಮನು ಬಿದ್ದಪ್ಪ, ಮಾನಸಾ ಹಾಗೂ ಭಾಗೀರಥಿ ಇದ್ದರು.