

ನವದೆಹಲಿ: ದೇಶೀಯವಾಗಿ ಉತ್ಪಾದಿಸುವ ಕಚ್ಚಾ ತೈಲ, ವಿಮಾನ ಇಂಧನ, ಡೀಸೆಲ್ ಮತ್ತು ಪೆಟ್ರೋಲ್ ರಫ್ತಿನ ಮೇಲೆ ವಿಧಿಸುತ್ತಿದ್ದ ಆಕಸ್ಮಿಕ ಲಾಭ ತೆರಿಗೆಯನ್ನು (ವಿಂಡ್ಫಾಲ್ ಪ್ರಾಫಿಟ್ ಟ್ಯಾಕ್ಸ್) ಕೇಂದ್ರ ಸರ್ಕಾರ ರದ್ದುಗೊಳಿಸಿದೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ತೈಲ ಬೆಲೆ ಇಳಿಯುತ್ತಿರುವ ಹಿನ್ನೆಲೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ರಾಜ್ಯಸಭೆಯಲ್ಲಿ ಈ ಕುರಿತ ಅಧಿಸೂಚನೆಯನ್ನು ಮಂಡಿಸಿದರು. ಇದಲ್ಲದೆ, ಪೆಟ್ರೋಲ್ ಮತ್ತು ಡೀಸೆಲ್ ರಫ್ತಿನ ಮೇಲೆ ವಿಧಿಸಲಾಗಿದ್ದ ರಸ್ತೆ ಮತ್ತು ಮೂಲಸೌಕರ್ಯ ಉಪ ಕರವನ್ನು ಕೂಡ ರದ್ದು ಮಾಡಲಾಗಿದೆ.
2022ರ ಜು. 1ರಿಂದ ಈ ತೆರಿಗೆಯನ್ನು ಕೇಂದ್ರ ಸರ್ಕಾರ ಜಾರಿಗೊಳಿಸಿತ್ತು. ಪೆಟ್ರೋಲ್ ಮತ್ತು ವಿಮಾನ ಇಂಧನದ ಮೇಲೆ ಪ್ರತಿ ಲೀಟರ್ಗೆ 6 ರೂ. ಮತ್ತು ಡೀಸೆಲ್ ಲೀಟರ್ಗೆ 13 ರೂ. ರಫ್ತು ಸುಂಕ ವಿಧಿಸಲಾಗಿತ್ತು. ದೇಶೀಯವಾಗಿ ಉತ್ಪಾದಿಸುವ ಕಚ್ಚಾ ತೈಲಕ್ಕೆ ಪ್ರತಿ ಟನ್ಗೆ 23,250 ರೂ. ಮೊತ್ತವನ್ನು ವಿಶೇಷ ಹೆಚ್ಚುವರಿ ಅಬಕಾರಿ ಸುಂಕದ ರೂಪದಲ್ಲಿ ವಿಧಿಸಲಾಗುತ್ತಿತ್ತು. ಈ ತೆರಿಗೆ ಹೇರಿಕೆ ಸರ್ಕಾರ ಮತ್ತು ತೈಲ ಕಂಪನಿಗಳ ನಡುವೆ ವಿವಾದದ ವಿಷಯವಾಗಿ ಪರಿಣಮಿಸಿದ್ದರಿಂದ ಈಗ ರದ್ದುಪಡಿಸಲಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಸರಕು ಮತ್ತು ಸೇವಾ ತೆರಿಗೆ ಪರಿಷತ್ತು (ಜಿಎಸ್ಟಿ ಕೌನ್ಸಿಲ್) ಶಿಫಾರಸು ಮಾಡಿದರೆ ಆರೋಗ್ಯ ಮತ್ತು ಜೀವ ವಿಮಾ ಪಾಲಿಸಿಗಳ ಮೇಲಿನ ಜಿಎಸ್ಟಿ ಕಡಿಮೆಯಾಗಲಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸೋಮವಾರ ತಿಳಿಸಿದ್ದಾರೆ. ಲೋಕಸಭೆಯಲ್ಲಿ ಈ ಕುರಿತ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಅವರು, ಜಿಎಸ್ಟಿ ಕಡಿಮೆ ಮಾಡುವ ನಿರ್ಧಾರ ಕೈಗೊಂಡರೆ ಅದರ ಲಾಭವನ್ನು ಗ್ರಾಹಕರಿಗೇ ನೀಡಲಾಗುತ್ತದೆ. ಪಾಲಿಸಿದಾರರಿಗೆ ತಗಲುವ ವೆಚ್ಚ ಕಡಿಮೆಯಾಗುತ್ತದೆ ಎಂದು ಹೇಳಿದ್ದಾರೆ. ಈಗ ಆರೋಗ್ಯ ಮತ್ತು ಜೀವವಿಮಾ ಪಾಲಿಸಿಗಳ ಮೇಲೆ ಶೇಕಡ 18ರಷ್ಟು ಜಿಎಸ್ಟಿ ವಿಧಿಸಲಾಗುತ್ತಿದೆ. ಡಿ.21ರಂದು ನಿರ್ಮಲಾ ಸೀತಾರಾಮನ್ ಅಧ್ಯಕ್ಷತೆಯಲ್ಲಿ ಜಿಎಸ್ಟಿ ಪರಿಷತ್ ಸಭೆ ರಾಜಸ್ಥಾನದ ಜೈಸಲ್ಮೇರ್ನಲ್ಲಿ ನಡೆಯಲಿದ್ದು, ಜಿಎಸ್ಟಿ ಇಳಿಸುವ ಕುರಿತು ಅದರಲ್ಲಿ ನಿರ್ಧಾರ ಆಗುವ ಸಾಧ್ಯತೆ ಇದೆ.